ADVERTISEMENT

ಚಾಮರಾಜನಗರ ಘಟನೆ: ಸುಧಾಕರ್ ರಾಜೀನಾಮೆ ನೀಡಲಿ–ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 5 ಮೇ 2021, 13:47 IST
Last Updated 5 ಮೇ 2021, 13:47 IST
   

ಹೊನ್ನಾಳಿ: ಚಾಮರಾಜನಗರ ಜಿಲ್ಲೆಯಲ್ಲಿ 24 ರೋಗಿಗಳು ಮೃತಪಟ್ಟಿರುವ ಘಟನೆಯ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದರು.

‘ಚಾಮರಾಜನಗರ ಹಾಗೂ ಬೆಂಗಳೂರಿನಲ್ಲಿ ಆಮ್ಲಜನಕ ಸಿಗದೇ ಅನೇಕ ರೋಗಿಗಳು ಸಾವನ್ನಪ್ಪಿದ್ದಾರೆ. ಅವರ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡದೇ ಸುಧಾಕರ್ ಏನು ಮಾಡುತ್ತಿದ್ದಾರೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.

ಎರಡು ಖಾತೆಗೆ ಡಿಮ್ಯಾಂಡ್ ಏಕೆ?: ‘ನನಗೆ ಎರಡು ಖಾತೆಗಳು ಬೇಕು ಎಂದು ಸುಧಾಕರ್ ಮುಖ್ಯಮಂತ್ರಿಗಳ ಬಳಿ ಡಿಮ್ಯಾಂಡ್ ಮಾಡಿ ಪಡೆದುಕೊಂಡಿದ್ದಾರೆ. ಯಾವ ಪುರುಷಾರ್ಥಕ್ಕೆ ನಿಮಗೆ ಎರಡು ಖಾತೆ ಬೇಕು ಮಿಸ್ಟರ್ ಸುಧಾಕರ್? ಸರಿಯಾಗಿ ಒಂದು ಖಾತೆಯನ್ನೇ ನಿಭಾಯಿಸಲು ಆಗುತ್ತಿಲ್ಲ. ಇನ್ನು ಎರಡು ಖಾತೆಗಳನ್ನು ಹೇಗೆ ನಿಭಾಯಿಸುತ್ತೀರಿ’ ಎಂದು ಪ್ರಶ್ನಿಸಿದರು.

ADVERTISEMENT

ರಾಜ್ಯದಲ್ಲಿ ಬೆಂಗಳೂರು ಸೇರಿ ಕೆಲವು ಭಾಗಗಳಲ್ಲಿ ಅಧಿಕಾರಿಗಳ ನಡವಳಿಕೆಯಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವು ‘420’ ಅಧಿಕಾರಿಗಳು ಹಣ ಮಾಡಲು ಏಜೆಂಟರನ್ನು ನೇಮಕ ಮಾಡಿಕೊಂಡಿದ್ದಾರೆ. ಪರಿಸ್ಥಿತಿಯ ಲಾಭ ಪಡೆಯುತ್ತಿರುವ ಪ್ರತಿಪಕ್ಷದ ನಾಯಕರು ಮತ್ತು ಕೆಪಿಸಿಸಿ ಅಧ್ಯಕ್ಷರು ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಸರ್ಕಾರಕ್ಕೆ ಕೆಟ್ಟ ಹೆಸರು ತರಲು ನೀವು ಅವಕಾಶವನ್ನು ಮಾಡಿಕೊಟ್ಟಿದ್ದೀರಿ’ ಎಂದು ಅವರು ಕಿಡಿಕಾರಿದರು.

ಬೆಡ್‌ನಲ್ಲೂ ಹಣ ಮಾಡಬೇಕೇ?: ‘ಸಾವಿನ ದವಡೆಯಲ್ಲಿರುವ ರೋಗಿಗಳಿಗೆ ಆಮ್ಲಜನಕ ಸೌಲಭ್ಯವುಳ್ಳ ಬೆಡ್‌ಗಳನ್ನು ಮಾರಿಕೊಳ್ಳುತ್ತಿದ್ದಾರೆ. ಅಂತಹವರ ವಿರುದ್ಧ ಇನ್ನೂ ಏಕೆ ಕ್ರಮ ಕೈಗೊಂಡಿಲ್ಲ’ ಎಂದು ಆರೋಗ್ಯ ಸಚಿವರನ್ನು ಪ್ರಶ್ನಿಸಿದರು.

ಮೋಜು ಮಸ್ತಿಗಾಗಿ ಸಚಿವ ಸ್ಥಾನ: ‘ಕೆಲವು ಸಚಿವರು ಮೋಜು ಮಸ್ತಿಗಾಗಿ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ. ಅಂಥವರು ಈ ಸಚಿವ ಸಂಪುಟದಲ್ಲಿ ಇರಲು ಲಾಯಕ್ಕಿಲ್ಲ. ತಮ್ಮ ವ್ಯಾಪ್ತಿಯಲ್ಲಿ ಕೆಲಸ ಮಾಡದವರು ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಾರೆ’ ಎಂದು ಕಿಡಿಕಾರಿದರು.

‘ಬೆಂಗಳೂರಿನಲ್ಲಿ ಬಿ.ಕೆ. ನಾಗರಾಜರಾವ್ ಅವರಿಗೆ ಬೆಡ್ ಒದಗಿಸುವಂತೆ ಬಿಬಿಎಂಪಿ ಅಧಿಕಾರಿ ಗೌರವ ಗುಪ್ತ ಅವರಿಗೆ ನಾನು 10 ಬಾರಿ ಮೆಸೇಜ್ ಮಾಡಿದ್ದೇನೆ. ಆದರೆ ಇದಕ್ಕೆ ಸ್ಪಂದಿಸಿಲ್ಲ. ಮುಖ್ಯಮಂತ್ರಿಗಳೇ ನನ್ನ ಕರೆಗೆ ಸ್ಪಂದಿಸುವಾಗ ಗೌರವ್ ಗುಪ್ತಾಗೆ ಏನಾಗಿದೆ? ನಾಗರಾಜ್ ರಾವ್ ಅವರು ಒಂದು ವೇಳೆ ಮೃತಪಟ್ಟರೆ ಗೌರವ್ ಗುಪ್ತಾ ಅವರೇ ಹೊಣೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.