ಚನ್ನಗಿರಿ: ‘ಪಟ್ಟಣದಲ್ಲಿ ಎಲ್ಲೆಂದರಲ್ಲಿ ಪೆಟ್ಟಿಗೆ ಅಂಗಡಿಗಳನ್ನು ಇಟ್ಟುಕೊಂಡು ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ. ಇದರಿಂದ ಪಟ್ಟಣದ ಸೌಂದರ್ಯವೇ ಹಾಳಾಗಿ ಹೋಗುವಂತಾಗಿದೆ. ಹಾಗಾಗಿ ಇನ್ನು ಆರು ತಿಂಗಳೊಳಗೆ ಪಟ್ಟಣದ ಸೌಂದರೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ’ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.
ಬುಧವಾರ ಪಟ್ಟಣದ ಪ್ರದಕ್ಷಿಣೆ ನಡೆಸಿದ ನಂತರ ಅವರು ಮಾತನಾಡಿದರು.
‘ಪಟ್ಟಣದಲ್ಲಿ ಈಗಾಗಲೇ ಮೂರು ಜಾಗವನ್ನು ಗುರುತಿಸಲಾಗಿದ್ದು, ಅಲ್ಲಿ ಬೀದಿಬದಿ ವ್ಯಾಪಾರಿಗಳಿಗೆ, ಆಟೊ, ಕಾರು ಮುಂತಾದ ವಾಹನಗಳ ನಿಲುಗಡೆಗಾಗಿ ನಿರ್ದಿಷ್ಟವಾದ ಸ್ಥಳವನ್ನು ಕಲ್ಪಿಸಲಾಗುವುದು. ಒಳಚರಂಡಿ ಕಾಮಗಾರಿ ಜೀವ ವಿಮಾ ಕಚೇರಿಯ ರಸ್ತೆಯಲ್ಲಿ ಸ್ಥಗಿತಗೊಂಡಿದ್ದು, ಶೀಘ್ರದಲ್ಲೇ ಪೈಪ್ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
‘ತೋಟಗಾರಿಕೆ ಇಲಾಖೆ ಕಚೇರಿ ಪ್ರಾಂಗಣದಲ್ಲಿ ಸ್ವಚ್ಛತೆ ಇಲ್ಲದಂತಾಗಿದ್ದು, ಸಾಕಷ್ಟು ಗಿಡಗಂಟಿಗಳು ಬೆಳೆದು ನಿಂತಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ವಚ್ಛತೆ ಕಾಪಾಡಬೇಕು. ಪಟ್ಟಣದ ಕೆರೆ ಏರಿ ಹತ್ತಿರ ತಾತ್ಕಾಲಿಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ಪೊಲೀಸ್ ಇಲಾಖೆ ವ್ಯವಸ್ಥೆ ಮಾಡಿದ್ದು, ಇನ್ನು ಮುಂದೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಈ ಸ್ಥಳದಲ್ಲಿಯೇ ನಿಲುಗಡೆ ಮಾಡಬೇಕು’ ಎಂದರು.
‘ಪಟ್ಟಣದ ಖಾಸಗಿ ಬಸ್ ನಿಲ್ದಾಣ ನವೀಕರಣ ಕಾಮಗಾರಿಗೆ ₹ 1 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಹಂತದಲ್ಲಿದೆ. ಶೀಘ್ರವೇ ಬಸ್ ನಿಲ್ದಾಣದ ಕಾಮಗಾರಿ ಕೈಗೊಳ್ಳಲಾಗುವುದು. ಪಟ್ಟಣದ ಪರಿಮಿತಿಯೊಳಗೆ ರಾಷ್ಟ್ರೀಯ ಹೆದ್ದಾರಿ 13 ಹಾದು ಹೋಗಿದ್ದು, ವಾಹನಗಳ ದಟ್ಟಣೆಯಿಂದಾಗಿ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಆರು ತಿಂಗಳೊಳಗೆ ಬಗೆಹರಿಸಿ ಪಟ್ಟಣದ ಸೌಂದರ್ಯವನ್ನು ಹೆಚ್ಚಿಸಲಾಗುವುದು’ ಎಂದು ಹೇಳಿದರು.
ತಹಶೀಲ್ದಾರ್ ಎನ್.ಜೆ. ನಾಗರಾಜ್, ಲೋಕೋಪಯೋಗಿ ಇಲಾಖೆ ಎಇಇ ರವಿಕುಮಾರ್, ಪುರಸಭೆ ಸ್ಥಾಯಿತಿ ಸಮಿತಿ ಅಧ್ಯಕ್ಷ ಸೈಯದ್ ಇಮ್ರಾನ್, ಸದಸ್ಯರಾದ ಜಿ. ನಿಂಗಪ್ಪ, ಬಿ.ಆರ್. ಹಾಲೇಶ್, ಸೈಯದ್ ಗೌಸ್ ಪೀರ್, ಪುರಸಭೆ ಕಂದಾಯಾಧಿಕಾರಿ ಮಂಜುನಾಥ್, ಪಿಐ ಕೆ.ಎನ್. ರವೀಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.