ADVERTISEMENT

ಹಣ ಡಬಲ್ ಆಮಿಷ: ₹ 1ಕೋಟಿ ಕಳೆದುಕೊಂಡ ಮಹಿಳೆಯರು

ಆಂಧ್ರದ ವಂಚಕ ದಂಪತಿ ವಿರುದ್ಧ ದೂರು: ಎಸ್.ಪಿ. ಮುಂದೆ ಸಂತ್ರಸ್ತರ ಅಳಲು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 3:19 IST
Last Updated 14 ನವೆಂಬರ್ 2025, 3:19 IST
ಆರೋಪಿ ಬೊಗ್ಗು ಶ್ರೀರಾಮುಲು
ಆರೋಪಿ ಬೊಗ್ಗು ಶ್ರೀರಾಮುಲು   

ಜಗಳೂರು: ತಾವು ಕೊಡುವ ಹಣ ತಿಂಗಳೊಳಗೆ ಡಬಲ್ ಮಾಡಿ ಕೊಡುವುದಾಗಿ ಜನರನ್ನು ನಂಬಿಸಿ ಆಂಧ್ರಪ್ರದೇಶದ ದಂಪತಿ ತಾಲ್ಲೂಕಿನ 10ಕ್ಕೂ ಹೆಚ್ಚು ಮಹಿಳೆಯರಿಗೆ ₹ 1 ಕೋಟಿ ಹೆಚ್ಚು ಮೊತ್ತವನ್ನು ವಂಚಿಸಿ, ಪರಾರಿಯಾಗಿದ್ದಾರೆ.

ಆಂಧ್ರಪ್ರದೇಶದ ಅನಂತಪುರ ನಗರದ ಬೊಗ್ಗು ಶ್ರೀರಾಮುಲು ಹಾಗೂ ಪತ್ನಿ ಪುಷ್ಪಾ ಎಂಬುವವರು ಮಧ್ಯವರ್ತಿಗಳ ಮೂಲಕ ತಾಲ್ಲೂಕಿನ ಮಹಿಳೆಯರನ್ನು ಕೆಲವು ದಿನಗಳ ಹಿಂದೆ ಸಂಪರ್ಕಿಸಿ, ತಾನು ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು ತಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದಲ್ಲಿ 30 ದಿನಗಳೊಳಗಾಗಿ ಡಬಲ್ ಮೊತ್ತ ಮರಳಿಸಲಾಗುವುದು ಎಂದು ನಂಬಿಸಿ ವಂಚನೆ ಮಾಡಿದಾರೆ ಎಂದು ₹ 17 ಲಕ್ಷ ಕಳೆದುಕೊಂಡಿರುವ ಪಟ್ಟಣದ ನಿವಾಸಿ ಬಿ. ತಿರುಮಲೇಶ್ ಹಾಗೂ ಆತನ ಪತ್ನಿ ಪೂಜಾ ದೂರು ನೀಡಿದ್ದಾರೆ.

ಘಟನೆ ವಿವರ: ಜಗಳೂರು ಪಟ್ಟಣದಲ್ಲಿ ವಾಸವಾಗಿರುವ ಮೂಲತಃ ಆಂಧ್ರಪ್ರದೇಶದ ರಾಯದುರ್ಗ ಪಟ್ಟಣದ ಮೀನಾ ಎಂಬುವವರ ಮೂಲಕ ತಾಲ್ಲೂಕಿನ ಹಲವರನ್ನು ಸಂಪರ್ಕಿಸಿದ್ದ ಬೊಗ್ಗು ಶ್ರೀರಾಮುಲು ಆರಂಭದಲ್ಲಿ ₹ 3 ಲಕ್ಷದವರೆಗೆ ಹೂಡಿಕೆ ಮಾಡಿದ್ದವರಿಗೆ ತಿಂಗಳೊಳಗಾಗಿ ಎರಡು ಪಟ್ಟು ಹಣವನ್ನು ವಾಪಸ್ ನೀಡಿ ನಂಬಿಸಿದ್ದಾರೆ. ದುಪ್ಪಟ್ಟು ಹಣ ಬಂದ ಮಾಹಿತಿ ತಿಳಿಯುತ್ತಿದ್ದಂತೆ ಲಾಭದ ಆಸೆಯಿಂದ ಕೆಲವರು ತಮ್ಮ ಜಮೀನು ಮಾರಿದ್ದ ಹಣ ಹಾಗೂ ಬಂಗಾರದ ಒಡವೆಗಳನ್ನು ಒತ್ತೆ ಇಟ್ಟು ಲಕ್ಷಗಟ್ಟಲೆ ದೊಡ್ಡ ಮೊತ್ತದ ಹಣವನ್ನು ಆರೋಪಿ ಸೂಚನೆಯಂತೆ ಆತನ ಖಾತೆಗೆ ಜಮಾ ಮಾಡಿದ್ದಾರೆ. ಆದರೆ ಎರಡನೇ ಹಂತದಲ್ಲಿ ತಿಂಗಳಾದರೂ ಆರೋಪಿ ದಂಪತಿ ಹಣ ಮರು ಪಾವತಿ ಮಾಡದೇ ಸತಾಯಿಸುತ್ತಾ ಬಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

ಎರಡು ಎಕರೆ ಜಮೀನು ಮಾರಾಟ ಮಾಡಿ ಬಂದಿದ್ದ ₹ 33 ಲಕ್ಷ ನೀಡಿದ್ದ ರೇಣುಕಮ್ಮ, ಮೀನಾ ₹ 40 ಲಕ್ಷ, ಹಾಗೂ ಮೀನಾ ಅವರ ಅಕ್ಕ ಪ್ರಿಯಾಂಕ ₹ 50 ಲಕ್ಷ ಸೇರಿದಂತೆ ₹ 1 ಕೋಟಿಗೂ ಹೆಚ್ಚು ಕಳೆದುಕೊಂಡಿದ್ದಾರೆ.

‘ಹಣವನ್ನು ಕಳೆದುಕೊಂಡು ಕಂಗಾಲಾದ ಮಹಿಳೆಯರು ಆಂಧ್ರಪ್ರದೇಶ ಅನಂತಪುರ ನಗರದಲ್ಲಿ ವಾರಗಟ್ಟಲೆ ಲಾಡ್ಜ್‌ಗಳಲ್ಲಿ ಕಾದರೂ ಆರೋಪಿ ದಂಪತಿ  ಸಿಗಲಿಲ್ಲ. ಈಗಲೂ ಎರಡು ದಿನಕ್ಕೊಮ್ಮೆ ಆರೋಪಿಗಳೇ ಫೋನ್ ಕರೆ ಮಾಡಿ ನಮ್ಮ ಮನೆ ಮೇಲೆ ಐಟಿ ರೇಡ್ ಆಗಿದೆ. ಒಂದೆರೆಡು ದಿನ ಕಾಯಿರಿ ಕೊಡುತ್ತೇವೆ. ಪೊಲೀಸರಿಗೆ ದೂರು ನೀಡಿದರೆ ನೀವು ಹಣವನ್ನು ಮರೆಯಬೇಕು. ಜಾಸ್ತಿ ಒತ್ತಡ ಹಾಕಿದರೆ ಕೊಲೆ ಮಾಡಲೂ ಹೇಸುವುದಿಲ್ಲವೆಂದು ಬೊಗ್ಗು ಶ್ರೀರಾಮುಲು ಪ್ರಾಣ ಬೆದರಿಕೆ ಹಾಕಿದ್ದಾನೆ’ ಎಂದು ಹಣ ಕಳೆದುಕೊಂಡ ಪಟ್ಟಣದ ಪೂಜಾ, ಮೀನಾ, ತಿಮ್ಮಕ್ಕ ಹಾಗೂ ರೇಣುಕಮ್ಮ ಮುಂತಾದವರು ಪಟ್ಟಣಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರಿಗೆ ದೂರು ನೀಡಿದ್ದಾರೆ.

ಈ ಕುರಿತು ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 ‘ಧೈರ್ಯವಾಗಿರಿ, ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳುತ್ತೇವೆ. ತನಿಖೆಗೆ ಸಹಕರಿಸಿ’ ಎಂದು ಎಸ್.ಪಿ. ಉಮಾ ಪ್ರಶಾಂತ್ ಮಹಿಳೆಯರಿಗೆ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.