ADVERTISEMENT

ಹಣ ದುರ್ಬಳಕೆ: 9 ಮಂದಿ ವಿರುದ್ಧ ಪ್ರಕರಣ ದಾಖಲು

ಭ್ರಷ್ಟಾಚಾರ ವಿರೋಧಿ ವೇದಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 19:51 IST
Last Updated 18 ಆಗಸ್ಟ್ 2019, 19:51 IST

ದಾವಣಗೆರೆ: ‘ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮ ಪಂಚಾಯಿತಿಯಲ್ಲಿ ಒಂದೂವರೆ ವರ್ಷದ ಅವಧಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದ್ದು, ತಾಲ್ಲೂಕು ಪಂಚಾಯಿತಿ ಇಒ ಸೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಿಲ್ಲ’ ಎಂದು ಭ್ರಷ್ಟಾಚಾರ ವಿರೋಧಿ ವೇದಿಕೆ–ಕರ್ನಾಟಕದ ರಾಜ್ಯಾಧ್ಯಕ್ಷ ಗುರುಪಾದಯ್ಯ ಮಠದ್ ಆರೋಪಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೌರಮ್ಮ, ಅಧ್ಯಕ್ಷೆ ಮಂಜಮ್ಮ, ಹಂಗಾಮಿ ನೌಕರ ವಿಜಯೇಂದ್ರ ಎಂ.ಎಚ್, ಎಚ್‌.ಆಂಜನೇಯ, ಹನುಮಂತಪ್ಪ, ಪಿಡಿಒಗಳಾದ ತಿಪ್ಪೇಸ್ವಾಮಿ, ಕೆ.ಎನ್‌. ದೇವರಾಜ, ರವಿ.ಎಸ್‌ ಹಾಗೂ ಅಂದಿನ ತಾಲ್ಲೂಕು ಪಂಚಾಯಿತಿ ಇಒ ಡಾ.ಶಿವಪ್ಪ ಹುಲಿಕೇರಿ ಅವರ ವಿರುದ್ಧ ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದರು.

‘ಕುಂದೂರು ಗ್ರಾಮ ಪಂಚಾಯಿತಿ ಸದಸ್ಯೆ ಪುಷ್ಪಾ ಪ್ರಸನ್ನಕುಮಾರ್ ಅವರು ತಾಲ್ಲೂಕು ಪಂಚಾಯಿತಿ ಇಒ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ದಾಖಲೆ ಸಮೇತ ದೂರು ನೀಡಿ ವರ್ಷ ಕಳೆದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಹೊನ್ನಾಳಿಯ ಸಿವಿಲ್ ಜಡ್ಜ್ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ದಾಖಲೆಗಳ ಸಮೇತ ಹೊನ್ನಾಳಿಯ ವಕೀಲ ಎಸ್.ಎನ್‌. ಪ್ರಕಾಶ್‌ ಅವರ ಮೂಲಕ ಖಾಸಗಿ ದೂರು ದಾಖಲಿಸಲಾಯಿತು. ಇದನ್ನು ಮಾನ್ಯ ಮಾಡಿದ ಕೋರ್ಟ್ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಹೊನ್ನಾಳಿ ಠಾಣೆಗೆ ಆದೇಶ ನೀಡಿದ್ದು, ಅದರಂತೆ ಆಗಸ್ಟ್ 14ರಂದು ದೂರು ದಾಖಲಾಗಿದೆ’ ಎಂದು ಹೇಳಿದರು.

ADVERTISEMENT

‘ತಾಲ್ಲೂಕು ಪಂಚಾಯಿತಿ ಇಒ ಅವರು ಅಧಿಕಾರ ಬಳಸಿ ಹಣದ ದುರ್ಬಳಕೆ ಮಾಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅವಕಾಶವಿದ್ದರೂ ಅವರು ಕ್ರಮ ವಹಿಸಿಲ್ಲ. ಆದ್ದರಿಂದ ನ್ಯಾಯಾಲಯ ಅವರ ಮೇಲೂ ಪ್ರಕರಣ ದಾಖಲಿಸಿದೆ. ಮೂವರು ಖಾಸಗಿ ವ್ಯಕ್ತಿಗಳಿದ್ದು, ಅವರ ಹೆಸರಿಗೆ ಚೆಕ್ ಮೂಲಕ ಹಣ ಸಂದಾಯವಾಗಿದೆ’ ಎಂದು ಆರೋಪಿಸಿದರು.

‘ಹಣ ದುರುಪಯೋಗಪಡಿಸಿಕೊಂಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಈ ಪ್ರಕರಣದಲ್ಲಿ ಸಿಇಒ ಅವರನ್ನು ಸೇರ್ಪಡೆಗೊಳಿಸಲು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯಬೇಕು. ಕೆಲವೇ ದಿನಗಳಲ್ಲಿ ಈ ಕುರಿತು ಮನವಿ ಸಲ್ಲಿಸಲಾಗುವುದು’ ಎಂದು ಹೇಳಿದರು.

‘ಆರೋಪಿಗಳು ಹಲ್ಲೆ ಮಾಡುವ ಸಂಭವವಿದ್ದು, ಸೂಕ್ತ ಭದ್ರತೆ ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದೇನೆ’ ದೂರುದಾರರಾದ ಆರ್.ಪುಷ್ಪಾ ಪ್ರಸನ್ನಕುಮಾರ್ ತಿಳಿಸಿದರು.

ವೇದಿಯ ಉಪಾಧ್ಯಕ್ಷ ಎ.ಉಮೇಶ್‌, ನಿರ್ದೇಶಕ ಡಾ. ಉಮೇಶ್ ಹಿರೇಮಠ್, ಉಪಾಧ್ಯಕ್ಷ ರಾಜು ಕಣಗಣ್ಣಾರ, ಬಿ.ಎಲ್‌. ಶಾಂತರಾಜ್, ಹನುಮಂತಪ್ಪ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.