ADVERTISEMENT

ಮಡಿವಾಳ ಸಮುದಾಯಕ್ಕೆ ಎಸ್ಸಿ ಮೀಸಲಾತಿಗೆ ಪ್ರಯತ್ನ: ಸಂಸದ ಸಿದ್ದೇಶ್ವರ ಭರವಸೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2023, 6:14 IST
Last Updated 29 ಆಗಸ್ಟ್ 2023, 6:14 IST
ಹರಿಹರ ತಾಲ್ಲೂಕು ಶ್ರೀ ಗುರುವೀರ ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸಂಘ, ಶರಣೆ ಮಲ್ಲಿಗೆಮ್ಮ, ಮಾಚಿದೇವ ಮಹಿಳಾ ಸ್ವ-ಸಹಾಯ ಸಂಘದಿಂದ ಶ್ರಾವಣ ಮಾಸದ ನಿಮಿತ್ತ ಹರಿಹರದಲ್ಲಿ ಸೋಮವಾರ ಆಯೋಜಿಸಿದ್ದ ಮನ, ಮನೆಗೆ ಮಾಚಿದೇವ ಕಾರ್ಯಕ್ರಮವನ್ನು ಸಂಸದ ಜಿ.ಎಂ.ಸಿದ್ದೇಶ್ವರ್ ಉದ್ಘಾಟಿಸಿದರು. ಚಿತ್ರದುರ್ಗದ ಮಡಿವಾಳ ಗುರುಪೀಠದ ಬಸವ ಮಾಚಿದೇವ ಶ್ರೀ ಇದ್ದರು
ಹರಿಹರ ತಾಲ್ಲೂಕು ಶ್ರೀ ಗುರುವೀರ ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸಂಘ, ಶರಣೆ ಮಲ್ಲಿಗೆಮ್ಮ, ಮಾಚಿದೇವ ಮಹಿಳಾ ಸ್ವ-ಸಹಾಯ ಸಂಘದಿಂದ ಶ್ರಾವಣ ಮಾಸದ ನಿಮಿತ್ತ ಹರಿಹರದಲ್ಲಿ ಸೋಮವಾರ ಆಯೋಜಿಸಿದ್ದ ಮನ, ಮನೆಗೆ ಮಾಚಿದೇವ ಕಾರ್ಯಕ್ರಮವನ್ನು ಸಂಸದ ಜಿ.ಎಂ.ಸಿದ್ದೇಶ್ವರ್ ಉದ್ಘಾಟಿಸಿದರು. ಚಿತ್ರದುರ್ಗದ ಮಡಿವಾಳ ಗುರುಪೀಠದ ಬಸವ ಮಾಚಿದೇವ ಶ್ರೀ ಇದ್ದರು   

ಹರಿಹರ: ಹಿಂದುಳಿದ ಮಡಿವಾಳ ಮಾಚಿದೇವ ಸಮುದಾಯವನ್ನು ಪರಿಶಿಷ್ಟ ಜಾತಿ ಮೀಸಲಾತಿ ಸೇರಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

ಹರಿಹರ ತಾಲ್ಲೂಕು ಶ್ರೀ ಗುರುವೀರ ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸಂಘ, ಶರಣೆ ಮಲ್ಲಿಗೆಮ್ಮ, ಮಾಚಿದೇವ ಮಹಿಳಾ ಸ್ವ-ಸಹಾಯ ಸಂಘದಿಂದ ಶ್ರಾವಣ ಮಾಸದ ನಿಮಿತ್ತ ನಗರದ ಕಾಟ್ವೆ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಮನ, ಮನೆಗೆ ಮಾಚಿದೇವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಮಡಿವಾಳ ಸಮುದಾಯದಿಂದ ಎಸ್‌ಸಿ ಮೀಸಲಾತಿ ಬೇಕೆಂಬ ಬೇಡಿಕೆ ಇಡಲಾಗಿದೆ. ಆದರೆ, ಈ ಕುರಿತು ರಾಜ್ಯ ಸರ್ಕಾರದಿಂದ ಮೊದಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಬೇಕು, ನಂತರ ಕೇಂದ್ರ ಸರ್ಕಾರ ಪರಿಶೀಲನೆ ಮಾಡುತ್ತದೆ. ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಬಂದರೆ ನಾನೇ ಮುಂದಾಳತ್ವ ವಹಿಸಿ ರಾಜ್ಯದ ಬಿಜೆಪಿ ಸಂಸದರು ಸೇರಿ ಒತ್ತಡ ಹೇರಿ ಸಮುದಾಯಕ್ಕೆ ಮೀಸಲಾತಿ ದೊರಕಿಸುವ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ADVERTISEMENT

ರಾಜ್ಯದ ಮಡಿವಾಳ ಸಮುದಾಯದ ಸ್ಥಿತಿಗತಿ ಕುರಿತು 2011ರಲ್ಲಿ ಸರ್ಕಾರಕ್ಕೆ ಅನ್ನಪೂರ್ಣ ಸಮಿತಿ ಸಲ್ಲಿಸಿದ ವರದಿ ದೂಳು ತಿನ್ನುತ್ತಾ ಬಿದ್ದಿದೆ. ಯಾವ ಸರ್ಕಾರವೂ ಕೂಡ ವರದಿಯನ್ನು ಪರಿಶೀಲಿಸಿಲ್ಲ ಎಂದು ಸಾನಿಧ್ಯ ವಹಿಸಿದ್ದ ಚಿತ್ರದುರ್ಗದ ಮಡಿವಾಳ ಗುರುಪೀಠದ ಬಸವ ಮಾಚಿದೇವ ಬೇಸರ ವ್ಯಕ್ತಪಡಿಸಿದರು. 

ಅಧ್ಯಾತ್ಮಿಕ ಕ್ರಾಂತಿ ಮಾಡಿದ ಬಸವಣ್ಣನವರ ಸಂಗಡಿಯಾಗಿ ಮಡಿವಾಳರ ಮಾಚಿದೇವ ಮಾಡಿದ ಸಾಧನೆ ಮೈಲಿಗಲ್ಲಾಗಿದೆ. ಸಣ್ಣ ಸಮುದಾಯ ಎಂಬ ಕೀಳರಿಮೆಯಿಂದ ಹೊರಕ್ಕೆ ಬಂದು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ ಸಮುದಾಯದ ಪೋಷಕರಿಗೆ ಸಲಹೆ ನೀಡಿದರು. 

ಇನ್‌ಸೈಟ್ ಐಎಎಸ್, ಕೆಎಎಸ್ ತರಬೇತಿ ಕೇಂದ್ರದ ಮುಖ್ಯಸ್ಥ ವಿನಯ್, ಮಾಜಿ ಶಾಸಕ ಎಸ್.ರಾಮಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಅರ್ಜುನ್ ಬಿ.ಪಿ., ಮಡಿವಾಳ ಸಮುದಾಯದ ಮುಖಂಡರಾದ ಎಂ.ಎಚ್.ಭೀಮಣ್ಣ, ರಂಗಣಾಥ ಕೊಮಾರನಹಳ್ಳಿ, ಎಸ್.ಜೆ.ಅರವಿಂದ ಸಂಭಾಪುರೆ, ನಿವೃತ್ತ ಪಾಚಾರ್ಯ ಬಸವರಾಜಪ್ಪ, ಶಿವಪ್ಪ ಮಡಿವಾಳ, ಅಣ್ಣಪ್ಪ ಮಡಿವಾಳರ್, ನಿವೃತ್ತ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಸವರಾಜಪ್ಪ ಮಾತನಾಡಿದರು.

ಗಂಜಿಗಟ್ಟಿ ಕೃಷ್ಣಮೂರ್ತಿ ಜನಪದ ಹಾಡು ಹಾಡಿದರು. ಬೆಳಿಗ್ಗೆ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಚಿತ್ರದುರ್ಗದ ಮಡಿವಾಳ ಗುರುಪೀಠದ ಬಸವ ಮಾಚಿದೇವ ಶ್ರೀಗಳ ಬೆಳ್ಳಿ ರಥದ ಮೆರವಣಿಗೆ ಹಾಗೂ ಕುಂಭಮೇಳ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.