ADVERTISEMENT

ಗೋಮಾಂಸ ರಫ್ತು ನಿಷೇಧಿಸಲು ಮುತಾಲಿಕ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 17:21 IST
Last Updated 26 ಜೂನ್ 2019, 17:21 IST

ದಾವಣಗೆರೆ: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡಬೇಕು. ಗೋಮಾಂಸ ರಫ್ತು ಮಾಡುವುದನ್ನು ನಿಷೇಧಿಸಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಆಗ್ರಹಿಸಿದರು.

ವರ್ಷಕ್ಕೆ ₹ 30 ಸಾವಿರ ಕೋಟಿ ಮೌಲ್ಯದ ಗೋಮಾಂಸ ರಫ್ತಾಗುತ್ತಿದೆ. ವಿಶ್ವದಲ್ಲಿ ಗೋಮಾಂಸ ರಫ್ತಿನಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗೋಹತ್ಯಾ ಕಾಯ್ದೆ ನಿಷೇಧಗೊಳಿಸಬೇಕು. ಈಗಿರುವ ಕಾನೂನನ್ನು ಬಿಗಿಗೊಳಿಸಬೇಕು. ಈಗ ಗೋಹಂತಕರು ಸುಲಭದಲ್ಲಿ ಜಾಮೀನು ಪಡೆದು ಹೊರಬರುತ್ತಾರೆ. ಅವರಿಗೆ 12 ವರ್ಷ ಜೈಲು ಶಿಕ್ಷೆ ವಿಧಿಸಬೇಕು. ಈ ಕಾನೂನು ಗುಜರಾತಿನಲ್ಲಿದೆ. ಎಲ್ಲ ರಾಜ್ಯಗಳಲ್ಲಿ ಬರಬೇಕು. ಗೋರಫ್ತು ಮಾಡುವವರಲ್ಲಿ ಹಿಂದೂಗಳು, ಜೈನರು, ಬಿಜೆಪಿ ಶಾಸಕರು, ಸಂಸದರು ಎಲ್ಲರೂ ಇದ್ದಾರೆ. ಅದೆಲ್ಲ ನಿಲ್ಲಬೇಕು ಎಂದು ಒತ್ತಾಯಿಸಿದರು.

ADVERTISEMENT

ಗೋವು ರಾಷ್ಟ್ರೀಯ ಪ್ರಾಣಿಯಾಗಬೇಕು ಎಂದು ಒತ್ತಾಯಿಸಲು ದೇಶದ ಸುಮಾರು 70 ಸಂಘಟನೆಗಳ ಜತೆಗೆ ಮಾತನಾಡಿರುವುದಾಗಿ ಮಾಹಿತಿ ನೀಡಿದರು.

ಜುಲೈ 8ರಂದು ಬೆಳಗಾವಿ ಚಲೋ: ಗೋರಕ್ಷಕ ಶಿವು ಉಪ್ಪಾರ ಅವರನ್ನು ಕೊಲೆ ಮಾಡಿ ನೇತು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಲಾಗಿದೆ. ನ್ಯಾಯ ಸಿಕ್ಕಿಲ್ಲ. ಹಿಂದೂ ಬದಲು ಮುಸ್ಲಿಮ್‌ ಯುವಕನ ಕೊಲೆಯಾಗಿದ್ದರೆ ಸರ್ಕಾರದ ಇಡೀ ಸಂಪುಟ ಅವರ ಮನೆಗೆ ತೆರಳಿ ಪರಿಹಾರ ನೀಡುತ್ತಿತ್ತು. ಹಿಂದೆ ಚಿಕ್ಕಮಗಳೂರಿನಲ್ಲಿ ಗೋಕಳ್ಳ ಕಬೀರ್‌ ಎಂಬಾತನ ಕೊಲೆಯಾದಾಗ ₹ 10 ಲಕ್ಷ ಪರಿಹಾರ ನೀಡಲಾಗಿತ್ತು. ಶಿವು ಉಪ್ಪಾರನ ಕುಟುಂಬಕ್ಕೂ ಅಷ್ಟು ಪರಿಹಾರ ನೀಡಬೇಕು. ಅದಕ್ಕಾಗಿ ಜುಲೈ 8ರಂದು ಶ್ರೀರಾಮಸೇನೆಯಿಂದ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

₹ 50 ಲಕ್ಷ ಸುಪಾರಿ ನೀಡಿ ಕೊಲೆ ಮಾಡುವುದಾಗಿ ಬೆದರಿಸಿದ್ದ ವಿಡಿಯೊ ಶಿವು ಉಪ್ಪಾರನ ಮೊಬೈಲ್‌ನಲ್ಲಿದೆ. ಹಾಗೆಯೇ ಗೋಸಾಗಾಟದ ಲಾರಿ ಸಂಖ್ಯೆ, ಕಸಾಯಿಖಾನೆಯವನ ಹೆಸರೆಲ್ಲ ಗೊತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋ‍ಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮಸೇನೆ ಜಿಲ್ಲಾ ಪದಾಧಿಕಾರಿಗಳಾದ ಶ್ರೀಧರ ಪಟೇಲ್‌, ನೂತನ್‌, ಕುಮಾರ ನಾಯ್ಕ್‌, ಪರಶುರಾಮ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.