ADVERTISEMENT

‘ಕೋವಿಡ್ ಮೃತಕುಟುಂಬಗಳಿಗೆ ದ್ರೋಹ ಬಗೆದ ನರೇಂದ್ರ ಮೋದಿ’

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 15:26 IST
Last Updated 21 ಜೂನ್ 2021, 15:26 IST
ಡಿ.ಬಸವರಾಜ್
ಡಿ.ಬಸವರಾಜ್   

ದಾವಣಗೆರೆ: ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಧನ ನೀಡುವುದು ಸಾಧ್ಯವಿಲ್ಲವೆಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಮೃತ ಕುಟುಂಬಗಳಿಗೆ ದ್ರೋಹ ಬಗೆದಿದೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಡಿ. ಬಸವರಾಜ್ ಟೀಕಿಸಿದ್ದಾರೆ.

ಕೊರೊನಾ ಸೋಂಕನ್ನು ರಾಷ್ಟ್ರೀಯ ವಿಪತ್ತು ಎಂದು ಈ ಹಿಂದೆ ಕೇಂದ್ರ ಸರ್ಕಾರವು ಘೋಷಿಸಿತ್ತು. ಹಾಗಾಗಿ ಕೋವಿಡ್‍ನಿಂದ ಮೃತಪಟ್ಟ ಕುಟುಂಬಕ್ಕೆ ತಲಾ ₹ 4 ಲಕ್ಷ ಪರಿಹಾರ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪರಿಹಾರ ನೀಡಲಾಗುವುದಿಲ್ಲವೆಂದು ಸುಪ್ರಿಂ ಕೋರ್ಟಿಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದೆ.ಮೋದಿ ಸರ್ಕಾರಕ್ಕೆ ಮಾನವೀಯತೆಯೇ ಇಲ್ಲ ಎಂದು ಟೀಕಿಸಿದ್ದಾರೆ.

ದೇಶದಲ್ಲಿ ಇಲ್ಲಿವರೆಗೆ ಕೋವಿಡ್‍ನಿಂದ ಮೃತ ಪಟ್ಟವರ ಸಂಖ್ಯೆ 3,88,164 ಎಂದು ಸರ್ಕಾರ ತಿಳಿಸಿದೆ. ನ್ಯೂಯಾರ್ಕ್‌ ಟೈಮ್ಸ್‌ ಪ್ರಕಾರ 43 ಲಕ್ಷ ಜನ ಮೃತಪಟ್ಟಿದ್ದಾರೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರವೇ ₹ 4 ಲಕ್ಷ ಪರಿಹಾರ ನೀಡಿದರೆ ₹ 15,526 ಕೋಟಿ ಆಗುತ್ತದೆ. ಪ್ರಧಾನಿ ತಮ್ಮ ಹೊಸ ಮನೆ ನಿರ್ಮಾಣಕ್ಕಾಗಿ ₹ 13,450 ನಿಗದಿ ಮಾಡಿದ್ದಾರೆ. ಅದನ್ನು ರದ್ದು ಮಾಡಿದರೂ ಪರಿಹಾರಕ್ಕೆ ಬೇಕಾದ ಹಣ ಸಿಗುತ್ತದೆ ಎಂದು ತಿಳಿಸಿದ್ದಾರೆ.

ADVERTISEMENT

ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಿಂದ ಕೇಂದ್ರ ಸರ್ಕಾರಕ್ಕೆ ತೆರಿಗೆಯ ರೂಪದಲ್ಲಿ ₹ 2.94 ಲಕ್ಷ ಕೋಟಿ ಆದಾಯ ಕೇವಲ 10 ತಿಂಗಳಲ್ಲಿ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಕೋವಿಡ್ ಸಂಕಷ್ಟ ಕಾಲದಲ್ಲಿ ಭಾರತೀಯರಿಗೆ ₹ 20 ಲಕ್ಷ ಕೋಟಿಯ ಆತ್ಮ ನಿರ್ಬರ ಯೋಜನೆಯನ್ನು ನೀಡಿದ್ದಾಗಿ ಹೇಳಿದ್ದರು. ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್‌ಗೆ ಏರಿಕೆ ಆಗಲಿದೆ ಎಂದು ಮಾತನಾಡಿದ್ದರು. ಮೃತ ಕುಟುಂಬಗಳಿಗೆ ₹ 15 ಸಾವಿರ ಕೋಟಿ ನೀಡುವ ವಿಚಾರ ದೊಡ್ಡದ್ದಲ್ಲ. ಅದಕ್ಕೆ ದೊಡ್ಡ ಮನಸ್ಸು ಮತ್ತು ಹೃದಯ ಇರಬೇಕು ಬೇಕು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.