ADVERTISEMENT

ರಾಷ್ಟ್ರೀಯ ಕ್ರಿಕೆಟ್‌: ಫ್ರೆಂಡ್ಸ್‌ ಬೆಂಗಳೂರು ಪ್ರಥಮ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 6:15 IST
Last Updated 29 ನವೆಂಬರ್ 2022, 6:15 IST
ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಲದಲ್ಲಿ ಪ್ರಥಮ ಸ್ಥಾನ ಪಡೆದ ಫ್ರೆಂಡ್ಸ್‌ ಬೆಂಗಳೂರು ತಂಡದ ಸದಸ್ಯರನ್ನು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅಭಿನಂದಿಸಿದರು
ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಲದಲ್ಲಿ ಪ್ರಥಮ ಸ್ಥಾನ ಪಡೆದ ಫ್ರೆಂಡ್ಸ್‌ ಬೆಂಗಳೂರು ತಂಡದ ಸದಸ್ಯರನ್ನು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅಭಿನಂದಿಸಿದರು   

ದಾವಣಗೆರೆ: ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘ ಹಾಗೂ ದಾವಣಗೆರೆ ಇಲೆವನ್ ಕ್ರಿಕೆಟ್ ಕ್ಲಬ್ ವತಿಯಿಂದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸ್ಮರಣಾರ್ಥ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆರು ದಿನಗಳಿಂದ ನಡೆದಿದ್ದ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಸೋಮವಾರ ಮುಗಿದಿದೆ. 50 ತಂಡಗಳಲ್ಲಿ ಫ್ರೆಂಡ್ಸ್‌ ಬೆಂಗಳೂರು ತಂಡ ಪ್ರಥಮ, ಮಧ್ಯಪ್ರದೇಶದ ಹಿಂದೂ–ಮುಸ್ಲಿಂ ಏಕತಾ ತಂಡ ದ್ವಿತೀಯ ಸ್ಥಾನಿಯಾಯಿತು.

ಪ್ರಥಮ ಸೆಮಿಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶದ ಹಿಂದೂ-ಮುಸ್ಲಿಂ ಏಕತಾ ತಂಡವು ದಾವಣಗೆರೆಯ ನವಭಾರತ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದರೆ, ಫ್ರೆಂಡ್ಸ್ ಬೆಂಗಳೂರು ತಂಡವು ಬೆಂಗಳೂರಿನ ಜಯ ಕರ್ನಾಟಕ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು.

ರೋಚಕ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶದ ಹಿಂದೂ-ಮುಸ್ಲಿಂ ಏಕತಾ ತಂಡವು ಮೊದಲು ಬ್ಯಾಟ್ ಮಾಡಿ 6 ಓವರ್‌ಗಳಲ್ಲಿ 54 ರನ್‍ಗಳಿಸಿತ್ತು. ಫ್ರೆಂಡ್ಸ್ ಬೆಂಗಳೂರು ತಂಡವು ಶಾಮನೂರು ಡೈಮಂಡ್ ಕಪ್‍ ಹಾಗೂ ₹ 4,05,555 ಪಡೆಯಿತು. ಹಿಂದೂ-ಮುಸ್ಲಿಂ ಏಕತಾ ತಂಡವು ಶಿವಗಂಗಾ ಕಪ್ ಮತ್ತು ₹ 3,05,555 ಬಹುಮಾನ ಪಡೆಯಿತು.

ADVERTISEMENT

ಸೆಮಿಫೈನಲ್‌ನಲ್ಲಿ ಸೋತಿದ್ದ ಜಯಕರ್ನಾಟಕ ಮತ್ತು ನವಭಾರತ ತಂಡಗಳು ಆಟವಾಡದ ಕಾರಣ ಟಾಸ್‍ ಮೂಲಕ ಮೂರನೇ ಸ್ಥಾನ ನಿರ್ಧರಿಸಲಾಯಿತು. ನವಭಾರತ ತಂಡಕ್ಕೆ ಆ ಅದೃಷ್ಟ ಒಲಿಯಿತು.

ಫ್ರೆಂಡ್ಸ್ ಬೆಂಗಳೂರು ತಂಡದ ಗಿರಿಯಾರ್ ನಾಗರಾಜ್, ಮಧ್ಯಪ್ರದೇಶದ ಹಿಂದೂ-ಮುಸ್ಲಿಂ ಏಕತಾ ತಂಡದ ಅಜಿಂ ಉತ್ತಮ ಬ್ಯಾಟ್ಸ್‌ಮನ್, ನವಭಾರತದ ಸಂಪತ್ ಉತ್ತಮ ಬೌಲರ್‌, ಸಾಗರ್ ಭಂಡಾರಿ ಮ್ಯಾನ್ ಆಫ್ ದಿ ಸಿರೀಸ್, ಹಿಂದೂ-ಮುಸ್ಲಿಂ ಏಕತಾ ತಂಡದ ದಿಲೀಪ್ ಉತ್ತಮ ವಿಕೆಟ್ ಕಿಪರ್ ಪ್ರಶಸ್ತಿ ಪಡೆದರು.

ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು, ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಉಪಾಧ್ಯಕ್ಷರಾದ ಶಿವಗಂಗಾ ಶ್ರೀನಿವಾಸ್, ರಾಜುರೆಡ್ಡಿ, ಉದಯ್ ಶಿವಕುಮಾರ್, ಮಹಾದೇವ್, ಟಿ.ಎಸ್. ವಸುಪಾಲ್, ಕುರುಡಿ ಗಿರೀಶ್, ಜಯಪ್ರಕಾಶ್ ಗೌಡ, ಸುರಭಿ ಶಿವಮೂರ್ತಿ, ರವಿಗಾಂಧಿ, ಹಾಲಪ್ಪ ಕರೂರು ಮತ್ತಿತರರು ಬಹುಮಾನ ವಿತರಿಸಿದರು.

ಆಫೀಶಿಯಲ್ ಕಪ್‍ನ ಪಂದ್ಯಾವಳಿಯಲ್ಲಿ ಮರ್ಚೆಂಟ್ಸ್ ಕ್ಲಬ್ ಪ್ರಥಮ, ಮಹಾನಗರ ಪಾಲಿಕೆ ತಂಡ ದ್ವಿತೀಯ ಸ್ಥಾನ ಪಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.