ADVERTISEMENT

ಯುವತಿಯರ ಕೊಲೆ ಪ್ರಕರಣ: ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಮೇ 2024, 5:12 IST
Last Updated 21 ಮೇ 2024, 5:12 IST
ರಾಜ್ಯದಲ್ಲಿ ನಡೆದಿರುವ ಯುವತಿಯರ ಮೇಲಿನ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಜಿಲ್ಲಾ ಮಡಿವಾಳ ಮಾಚಿದೇವ ಸಂಘವು ದಾವಣಗೆರೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು.
ರಾಜ್ಯದಲ್ಲಿ ನಡೆದಿರುವ ಯುವತಿಯರ ಮೇಲಿನ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಜಿಲ್ಲಾ ಮಡಿವಾಳ ಮಾಚಿದೇವ ಸಂಘವು ದಾವಣಗೆರೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು.   

ದಾವಣಗೆರೆ: ರಾಜ್ಯದಲ್ಲಿ ನಡೆದಿರುವ ಯುವತಿಯರ ಮೇಲಿನ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಜಿಲ್ಲಾ ಮಡಿವಾಳ ಮಾಚಿದೇವ ಸಂಘವು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು.

ನಗರದ ಜಯದೇವ ವೃತ್ತದಿಂದ ದಾವಣಗೆರೆ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದ ಮಡಿವಾಳ ಸಮುದಾಯದ ಪದಾಧಿಕಾರಿಗಳು ರಾಜ್ಯದ ಮುಖ್ಯ ಮಂತ್ರಿಗಳಿಗೆ ರವಾನಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

‘ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದು, ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಕೊಪ್ಪಳ ಜಿಲ್ಲೆಯ ಬಾಲಕಿ ಮೇಲೆ ವಾಮಾಚಾರ ಮಾಡಿ ಆಕೆಯನ್ನು ಕೊಲೆ ಮಾಡಲಾಗಿದೆ. ಹುಬ್ಬಳ್ಳಿಯ ನೇಹಾ ಹಿರೇಮಠ್ ಅವರನ್ನು ಕಾಲೇಜು ಆವರಣದಲ್ಲೇ ಕೊಲೆ ಮಾಡಿದ್ದು, ಇಡೀ ರಾಜ್ಯವೇ ಭಯಪಡುವಂತಾಗಿದೆ’ ಎಂದು ಸಂಘದ ಕಾರ್ಯಾಧ್ಯಕ್ಷ ಎಚ್.ಜಿ.ಉಮೇಶ್ ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಹುಬ್ಬಳ್ಳಿಯಲ್ಲಿ ಯುವತಿ ಅಂಜಲಿ ಅಂಬಿಗೇರ ಅವರನ್ನು ಕೊಲೆ ಮಾಡಿ, ಪರಾರಿಯಾಗುವ ವೇಳೆ ಆರೋಪಿ ಮಾಯಕೊಂಡ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯೊಬ್ಬಳ ಮೇಲೆ ಹತ್ಯೆಗೆ ಯತ್ನಿಸಿದ್ದಾನೆ. ಈ ಹಿಂದೆ ಎಸ್‍ಎಸ್‍ಎಲ್‌ಸಿ ವಿದ್ಯಾರ್ಥಿನಿ ಕೊಲೆ ನಡೆದಿತ್ತು. ರಾಜ್ಯದಲ್ಲಿ ಹಲವಾರು ಹಲ್ಲೆ, ಅತ್ಯಾಚಾರ, ಹತ್ಯೆಯಂತಹ ಪ್ರಕರಣಗಳು ಪದೇಪದೇ ನಡೆಯುತ್ತಿದ್ದರೂ ಗೃಹ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ’ ಎಂದು ಆರೋಪಿಸಿದರು.

‘ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲು ಗೃಹ ಇಲಾಖೆಗೆ ಪೊಲೀಸರಿಗೆ ನಿರ್ದೇಶನ ನೀಡಬೇಕು. ಇದಲ್ಲದೇ ಈ ಎಲ್ಲಾ ಪ್ರಕರಣಗಳಲ್ಲಿ ಅಮಾನವೀಯ, ವಿಕೃತವಾಗಿ ವರ್ತನೆ ಮಾಡಿರುವ ಎಲ್ಲಾ ಆರೋಪಿಗಳನ್ನು ಗಲ್ಲು ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹುಲಿಕಟ್ಟೆ ರಾಮಚಂದ್ರಪ್ಪ, ಎಂ.ವೈ. ಸತೀಶ್, ಜಿ. ಕಿಶೋರ್ ಕುಮಾರ್, ಆರ್.ಎನ್. ಮಾರುತಿ, ಅಂಜಿನಪ್ಪ ಪೂಜಾರ್, ಜಿ.ವಿಜಯ ಕುಮಾರ್, ಹನುಮಂತಪ್ಪ, ಕಕ್ಕರಗೊಳ್ಳ ಮಂಜುನಾಥ್, ಅಣಜಿ ಹನುಮಂತಪ್ಪ, ಐಗೂರು ಅಂಜಿನಪ್ಪ, ಅರಸೀಕೆರೆ ಬಸವರಾಜ್, ರವಿ ಚಿಕ್ಕಣ್ಣ, ಮಧುರಾ, ನಾಗಮ್ಮ, ಡೈಮಂಡ್ ಮಂಜುನಾಥ್, ಗೋಪಾಲ್, ಕೃಷ್ಣಮೂರ್ತಿ, ರವಿ, ಬಾತಿ ಶಂಕರ್, ಸುಭಾಷ್, ರಾಜಣ್ಣ, ಎಂ.ಕೆ. ಬಸವರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.