ADVERTISEMENT

ಮೌಲ್ಯಾಧಾರಿತ ಶಿಕ್ಷಣ ವ್ಯವಸ್ಥೆಗಾಗಿ ಎನ್‌ಇಪಿ ಜಾರಿ: ಶಿಕ್ಷಣ ಸಚಿವ ನಾಗೇಶ್‌

ಎಂ.ಎಸ್‌. ಶಿವಣ್ಣ ತರಬೇತಿ ಕೇಂದ್ರ ಉದ್ಘಾಟಿಸಿದ ಶಿಕ್ಷಣ ಸಚಿವ ನಾಗೇಶ್‌

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 13:08 IST
Last Updated 28 ಅಕ್ಟೋಬರ್ 2021, 13:08 IST
ದಾವಣಗೆರೆಯ ಸಿದ್ಧಗಂಗಾ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೊಂಡಜ್ಜಿಯಲ್ಲಿರುವ ಎಂ.ಎಸ್‌.ಶಿವಣ್ಣ ತರಬೇತಿ ಕೇಂದ್ರವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಗುಂಡಿ ಒತ್ತುವ ಮೂಲಕ ಉದ್ಘಾಟಿಸಿದರು. –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್
ದಾವಣಗೆರೆಯ ಸಿದ್ಧಗಂಗಾ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೊಂಡಜ್ಜಿಯಲ್ಲಿರುವ ಎಂ.ಎಸ್‌.ಶಿವಣ್ಣ ತರಬೇತಿ ಕೇಂದ್ರವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಗುಂಡಿ ಒತ್ತುವ ಮೂಲಕ ಉದ್ಘಾಟಿಸಿದರು. –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್   

ದಾವಣಗೆರೆ: ‘ಮಹಾತ್ಮ ಗಾಂಧಿ, ವಿವೇಕಾನಂದರಂತಹ ಮಹನಿಯರ ಆಶಯದಂತೆ ದೇಶದಲ್ಲಿ ಮೌಲ್ಯಾಧಾರಿತ ಶಿಕ್ಷಣ ವ್ಯವಸ್ಥೆಯನ್ನು ತರುವ ಪ್ರಯತ್ನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ನಡೆಯುತ್ತಿದೆ’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕೆ.ಸಿ. ನಾಗೇಶ್‌ ಹೇಳಿದರು.

ನಗರದ ಸಿದ್ಧಗಂಗಾ ವಿದ್ಯಾ ಸಂಸ್ಥೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಂ.ಎಸ್‌. ಶಿವಣ್ಣ ತರಬೇತಿ ಕೇಂದ್ರ ಹಾಗೂ ‘10x plus’ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜೀವನದಲ್ಲಿ ಸಂತೋಷ, ನೆಮ್ಮದಿಯ ಮಹತ್ವವನ್ನು ಹೇಳಿಕೊಡುವ ಪ್ರಯತ್ನಗಳನ್ನು ಇದುವರೆಗೂ ನಡೆದಿರಲಿಲ್ಲ. ಪೂರ್ಣವಾಗಿ ಯೋಚಿಸುವಂತಹ ಶಿಕ್ಷಣ ವ್ಯವಸ್ಥೆಯನ್ನು ಕೊಟ್ಟಿರಲಿಲ್ಲ. ಮಕ್ಕಳ ಮನಸ್ಸು ಸಂಕುಚಿತಗೊಳ್ಳುತ್ತಿತ್ತು. ಹೀಗಾಗಿ ದೇಶದ ಸಾಮಾಜಿಕ, ಆರ್ಥಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಹಾಗೂ ಗುರಿ ಸಾಧಿಸಿದ ಖುಷಿಯ ಅನುಭವ ನೀಡುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದೇವೆ. ವ್ಯಕ್ತಿ ಬೆಳೆದು, ಸಮಾಜವನ್ನೂ ಬೆಳೆಸುವ ಮೂಲಕ ದೇಶವನ್ನು ವಿಶ್ವ ಗುರುವನ್ನಾಗಿಸುವ ಪ್ರಯತ್ನ ಇದರಲ್ಲಿದೆ’ ಎಂದು ಹೇಳಿದರು.

ADVERTISEMENT

‘ಬ್ರಿಟಿಷರು ನಮ್ಮ ವ್ಯವಸ್ಥೆಯನ್ನು ಹಾಳು ಮಾಡಿದ್ದರಿಂದ ಸ್ವಾತಂತ್ರ್ಯ ಹೋರಾಟ ನಡೆಯಿತು. ಯಾವುದೇ ಪುಸ್ತಕದಲ್ಲೂ ಇದನ್ನು ಬರೆಯಲಿಲ್ಲ. ಮಕ್ಕಳಲ್ಲಿ ಮಾನಸಿಕ ದಿವಾಳಿತನ ತರುವಂತಹ ವಿಷಯಗಳನ್ನು ಪುಸ್ತಕದಲ್ಲಿ ತರಲಾಗಿತ್ತು. ಸ್ವಾವಲಂಬಿ, ಸ್ವಾಭಿಮಾನಿ ವ್ಯವಸ್ಥೆ ನಿರ್ಮಾಣಗೊಳ್ಳಬೇಕು ಎಂಬ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಈಡೇರಿಸಲು ಈಗೊಬ್ಬ ಶ್ರೇಷ್ಠ ಮನುಷ್ಯ (ಪ್ರಧಾನಿ ನರೇಂದ್ರ ಮೋದಿ) ಬಂದಿದ್ದಾನೆ’ ಎಂದು ಹೇಳುವ ಮೂಲಕ ಎನ್‌ಇಪಿಯನ್ನು ಸಮರ್ಥಿಸಿಕೊಂಡರು.

‘ಮನಸ್ಸಿಗೆ ಖುಷಿ ಕೊಡುವುದಕ್ಕಿಂತ ದುಡ್ಡು ಜಾಸ್ತಿ ಬರುವಂತಹ ಕೆಲಸ ಹುಡುಕಿಕೊಂಡು ಹೋಗುವಂತಹ ಪರಿಸ್ಥಿತಿಯನ್ನು ಇಂದಿನ ಶಿಕ್ಷಣ ವ್ಯವಸ್ಥೆ ನಿರ್ಮಿಸಿದೆ. ಖುಷಿಯಿಂದ ಶಿಕ್ಷಣ ಕಲಿಯುವಂತಹ ವ್ಯವಸ್ಥೆ ಹಿಂದೆ ಇತ್ತು. ಅದನ್ನು ಮತ್ತೆ ತರುವಂತಹ ಸಣ್ಣ–ಸಣ್ಣ ಪ್ರಯತ್ನಗಳು ಸಿದ್ಧಗಂಗಾ ಸಂಸ್ಥೆ ಸೇರಿ ಅನೇಕ ಕಡೆ ನಡೆಯುತ್ತಿವೆ’ ಎಂದು ಹೇಳಿದರು.

‘ಸಾಮೂಹಿಕ ಪ್ರಯತ್ನಗಳು ಕಳೆದ 50–60 ವರ್ಷಗಳ ಕಾಲ ನಿಂತು ಹೋಗಿದ್ದರಿಂದ ಸಾಮೂಹಿಕ ಚಿಂತನೆಗಳೂ ನಿಂತು ಹೋಗಿದ್ದವು. ಕೋವಿಡ್‌ ಬಂದಾಗ ಹೆಚ್ಚು ಜನಸಂಖ್ಯೆ ಇರುವ ಭಾರತ ನಾಶವಾಗುತ್ತದೆ ಎಂದು ಪ್ರಪಂಚದ ಅನೇಕ ದೇಶಗಳು ಅಂದುಕೊಂಡಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರು ಪುಟ್ಟ–ಪುಟ್ಟ ಸಾಮೂಹಿಕ ಪ್ರಯತ್ನದ ಮೂಲಕ ಕೋವಿಡ್‌ ನಿಯಂತ್ರಿಸಿದರು. ಸಾಮೂಹಿಕ ಯೋಚನೆಗಳನ್ನು ತಂದು, ಮತ್ತೊಮ್ಮೆ ಭಾರತ ಪ್ರಪಂಚದ ಗುರುವನ್ನಾಗಿಸಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ‘10x plus’ ತರಬೇತಿಯ ರೂವಾರಿ, ಸಿದ್ಧಗಂಗಾ ವಿದ್ಯಾ ಸಂಸ್ಥೆಯ ಡಾ.ಜಯಂತ್‌ ಡಿ.ಎಸ್‌., ‘ಕೋವಿಡ್‌ ಲಾಕ್‌ಡೌನ್‌ ಬಳಿಕ ಮಕ್ಕಳಲ್ಲಿ ಏಕಾಗ್ರತೆ ಕಡಿಮೆಯಾಗಿ ಚಂಚಲ ಸ್ವಭಾವ ಹೆಚ್ಚಾಗಿರುವುದನ್ನು ಶಿಕ್ಷಕರು ಗುರುತಿಸಿದರು. ಹೀಗಾಗಿ ನಮ್ಮ 20 ವರ್ಷಗಳ ಬೋಧನಾ ಪ್ರಯೋಗಗಳನ್ನು ಸೇರಿಸಿ ‘10x plus’ ತರಬೇತಿಯನ್ನು ರೂಪಿಸಿದೆವು. ಕಳೆದ ವರ್ಷದ ಎಸ್ಸೆಸ್ಸೆಲ್ಸಿಯ 100 ವಿದ್ಯಾರ್ಥಿಗಳ ಮೇಲೆ ಪ್ರಯೋಗ ನಡೆಸಿದೆವು. ಸಂಸ್ಥೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಇಬ್ಬರು ವಿದ್ಯಾರ್ಥಿನಿಯರು 625ಕ್ಕೆ 625 ಅಂಕಗಳನ್ನು ಗಳಿಸಿದ್ದರು’ ಎಂದು ಹೆಮ್ಮೆಯಿಂದ ನುಡಿದರು.

‘ಕೊಂಡಜ್ಜಿಯಲ್ಲಿ 13 ಎಕರೆ ಜಾಗದಲ್ಲಿ ಎಂ.ಎಸ್‌. ಶಿವಣ್ಣ ತರಬೇತಿ ಕೇಂದ್ರವನ್ನು ನಿರ್ಮಿಸಲಾಗಿದೆ. ಒಂದು ವಾರದ ಕಾಲ ತರಬೇತಿ ಪಡೆದುಕೊಂಡ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿ, ಕಲಿಕಾ ಮಟ್ಟದಲ್ಲಿ ಬದಲಾವಣೆಯಾಗುತ್ತಿದೆ. ರಾಜ್ಯದ ಎಲ್ಲಾ ಪ್ರೌಢಶಾಲೆಗಳ ಎಸ್ಸೆಸ್ಸೆಲ್ಸಿಯ ತಲಾ ಒಬ್ಬ ವಿದ್ಯಾರ್ಥಿ–ವಿದ್ಯಾರ್ಥಿನಿಗೆ ಉಚಿತವಾಗಿ ವಸತಿ, ಊಟ ಸಹಿತ ತರಬೇತಿ ನೀಡಲಾಗುವುದು. ಆ ವಿದ್ಯಾರ್ಥಿಗಳು ತಮ್ಮ ಶಾಲೆಗೆ ತೆರಳಿ ಉಳಿದ ವಿದ್ಯಾರ್ಥಿಗಳಿಗೆ ಇದನ್ನು ಹೇಳಿಕೊಡಬೇಕು. ವರ್ಷಪೂರ್ತಿ ತರಬೇತಿ ನೀಡುವ ಗುರಿ ಇದೆ’ ಎಂದು ಜಯಂತ್‌ ಹೇಳಿದರು.

ವಿಧಾನ ಪರಿಷತ್‌ ಮಾಜಿ ಸಚೇತಕ ಡಾ.ಎ.ಎಚ್‌. ಶಿವಯೋಗಿಸ್ವಾಮಿ ಶಿವಣ್ಣ ಪ್ರತಿಮೆ ಅನಾವರಣಗೊಳಿಸಿದರು. ಸಿದ್ಧಗಂಗಾ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿ’ಸೌಜ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಜಿ.ಎಸ್‌. ಅನಿತ್‌ಕುಮಾರ್‌, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ. ಶಿವರಾಜು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ, ಪ್ರಾಚಾರ್ಯ ಜಿ.ಸಿ. ನಿರಂಜನ್‌ ಹಾಜರಿದ್ದರು.

ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 626ಕ್ಕೆ 625 ಅಂಕ ಪಡೆದ ವಿದ್ಯಾರ್ಥಿನಿಯರಾದ ಅನುಷಾ ಗ್ರೇಸ್‌ ಡಿ.ಸಿ ಹಾಗೂ ವಿಜೇತಾ ಬಿ. ಮುತ್ತಗಿ ಅವರನ್ನು ಸನ್ಮಾನಿಸಲಾಯಿತು.

ಸಿದ್ಧಗಂಗಾ ಶಾಲೆಯ ವಿದ್ಯಾರ್ಥಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಜಸ್ಟಿನ್‌ ಡಿ’ಸೌಜ, ಬಿ.ಸಿ. ನಾಗೇಶ್‌ ಹಾಗೂ ಎಂ.ಎಸ್‌. ಶಿವಣ್ಣ ಅವರ ಭಾವಚಿತ್ರವನ್ನು ಬೃಹತ್‌ ಕ್ಯಾನ್ವಾಸ್‌ ಮೇಲೆ ಬಿಡಿಸಿ ಏಕಾಗ್ರತೆಯ ಮಹತ್ವವನ್ನು ಸಾರಿದರು.

ಗೀತಗಾಯನ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಲಕ್ಷ ಕಂಠಗಳ ಗೀತಗಾಯನ ಕಾರ್ಯಕ್ರಮದ ಭಾಗವಾಗಿ ಸಿದ್ಧಗಂಗಾ ಶಾಲೆಯಲ್ಲಿ ಶಿಕ್ಷಣ ಸಚಿವರ ಸಮ್ಮುಖದಲ್ಲಿ ‘ಬಾರಿಸು ಕನ್ನಡ ಡಿಂಡಿಮವ’, ‘ಜೋಗದ ಸಿರಿ ಬೆಳಕಿನಲ್ಲಿ’ ಕನ್ನಡದ ಗೀತೆಗಳನ್ನು ಹಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.