ADVERTISEMENT

ಮುಖವಾಡ ಎದುರಿಸಲು ಹೊಸ ಪ್ರತಿಮೆ ಅಗತ್ಯ

ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಮತ್ತು ಕಾವ್ಯ ಸಂಭ್ರಮ ಉದ್ಘಾಟಿಸಿದ ಡಾ. ಎಚ್‌.ಬಿ. ಕೋಲ್ಕಾರ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 13:53 IST
Last Updated 21 ಜುಲೈ 2019, 13:53 IST
ದಲಿತ ಸಾಹಿತ್ಯ ಪರಿಷತ್ತಿನ ದಾವಣಗೆರೆ ಜಿಲ್ಲಾ ಘಟಕವನ್ನು ಮತ್ತು ಕಾವ್ಯ ಸಂಭ್ರಮ ಕಾರ್ಯಕ್ರಮವನ್ನು ಭಾನುವಾರ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಡಾ. ಎಚ್‌.ಬಿ. ಕೋಲ್ಕಾರ ತಮಟೆ ಬಾರಿಸಿ ಉದ್ಘಾಟಿಸಿದರು
ದಲಿತ ಸಾಹಿತ್ಯ ಪರಿಷತ್ತಿನ ದಾವಣಗೆರೆ ಜಿಲ್ಲಾ ಘಟಕವನ್ನು ಮತ್ತು ಕಾವ್ಯ ಸಂಭ್ರಮ ಕಾರ್ಯಕ್ರಮವನ್ನು ಭಾನುವಾರ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಡಾ. ಎಚ್‌.ಬಿ. ಕೋಲ್ಕಾರ ತಮಟೆ ಬಾರಿಸಿ ಉದ್ಘಾಟಿಸಿದರು   

ದಾವಣಗೆರೆ: ಯಾವುದು ಒಳ್ಳೆಯದೋ ಅದು ಮುನ್ನೆಲೆಯಲ್ಲಿರಬೇಕಿತ್ತು. ಯಾವುದು ಕೆಟ್ಟದೋ ಅದು ನಾಶವಾಗುತ್ತಾ ಹೋಗಬೇಕಿತ್ತು. ಆದರೆ ಕೆಡುಕುಗಳೇ ಮೌಲ್ಯದ ಮುಖವಾಡ ಹಾಕಿಕೊಂಡು ಮುಂದೆ ಬಂತು ನಿಂತಿವೆ. ಹೊಸ ಹೊಸ ಪ್ರತಿಮೆಗಳನ್ನು ಸೃಷ್ಟಿಸುತ್ತಾ ಅವುಗಳನ್ನು ಮುಖಾಮುಖಿಯಾಗಬೇಕಿದೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಡಾ. ಎಚ್‌.ಬಿ. ಕೋಲ್ಕಾರ ಹೇಳಿದರು.

ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವನ್ನು ಮತ್ತು ಕಾವ್ಯ ಸಂಭ್ರಮ ಕಾರ್ಯಕ್ರಮವನ್ನು ಇಲ್ಲಿನ ರೋಟರಿ ಬಾಲಭವನದಲ್ಲಿ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ, ಮತ, ಕುಲ ನಾಶವಾಗುತ್ತಾ ಸಮಾಜ ಸುಂದರವಾಗಬೇಕಿತ್ತು. ಆದರೆ, ಈಗ ಅವು ಇನ್ನಷ್ಟು ಹೆಚ್ಚಾಗಿವೆ. ದಲಿತರು ಹಾಡುವುದು, ಮಾತನಾಡುವುದು, ಬರೆಯುವುದು ಎಂದೆಂದಿಗಿಂತಲೂ ಈಗ ಅನಿವಾರ್ಯವಾಗಿದೆ. ಬದುಕು ಮತ್ತು ಬರಹಗಳು ಒಂದಾಗಿರುವವರಲ್ಲಿ ಮಾತ್ರ ಸರಳತೆ, ಸತ್ಯ, ನಿಷ್ಕಲ್ಮಶ ಇರಲು ಸಾಧ್ಯ ಎಂದು ತಿಳಿಸಿದರು.

ADVERTISEMENT

‘ಅಂಬೇಡ್ಕರ್ ಕ್ರಾಂತಿ ಸಂಯಮದ ಕ್ರಾಂತಿ. ಈ ಕ್ರಾಂತಿ ಎಲ್ಲೂ ಬೆಂಕಿ ಹಚ್ಚಲು ಹೋಗುವುದಿಲ್ಲ. ನಮ್ಮಲ್ಲಿ ಕಾವ್ಯ, ಬರಹಗಳು ಸ್ವಾನುಭವದಿಂದ ಹುಟ್ಟುತ್ತವೆ. ಅದಕ್ಕೆ ಲೋಕಾನುಭವ ಸೇರಿಕೊಳ್ಳುತ್ತದೆ. ಆದರೆ, ಇತರರು ಸ್ವಾನುಭವ ಇಲ್ಲದೇ ಲೋಕಾನುಭವದಿಂದಷ್ಟೇ ಬರೆಯುತ್ತಾರೆ. ಸಾಮಾಜಿಕ, ಸ್ವಾಸ್ಥ ಉಳಿಸುವುದು, ಪರಿವರ್ತನೆಯನ್ನು ಉಂಟುಮಾಡುವುದೇ ಬರಹಗಾರನ ಗುರಿಯಾಗಬೇಕು’ ಎಂದರು.

ದಲಿತನೊಬ್ಬ ಕಾರು ಕೊಂಡಿದ್ದಕ್ಕಾಗಿ, ಕುದುರೆ ಸವಾರಿ ಮಾಡಿದ್ದಕ್ಕಾಗಿ ಹಲ್ಲೆ ಮಾಡುವ ಸಮಾಜ ಇದು. ಸಾಮಾಜಿಕ ಸ್ವಾತಂತ್ರ್ಯ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಗದೇ ಇದ್ದರೆ ರಾಜಕೀಯ ಸ್ವಾತಂತ್ರ್ಯ ವ್ಯರ್ಥ. ಅದನ್ನೇ ಈ ಹಲ್ಲೆಗಳು ತೋರಿಸುತ್ತಿವೆ. ಅದಕ್ಕಾಗಿ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯವನ್ನೇ ಗುರಿಯಾಗಿಸಿಕೊಂಡು ದಲಿತ ಸಾಹಿತ್ಯ ಪರಿಷತ್ತು ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.

ರಾಜ್ಯ ಘಟಕದ ಉಪಾಧ್ಯಕ್ಷ ಡಾ. ವೈ.ಎಂ. ಭಜಂತ್ರಿ ಆಶಯ ನುಡಿಗಳನ್ನಾಡಿ, ‘ಬುದ್ಧ, ಬಸವ, ಅಂಬೇಡ್ಕರ್‌ ದಾರಿಯಲ್ಲಿ ಹೆಜ್ಜೆಗಳನ್ನು ಇಟ್ಟುಕೊಂಡು ಬರಿಗಾಲಲ್ಲಿ ನಡೆದ ಹಾದಿಗೆ 25 ವರ್ಷ ತುಂಬಿದ ಸಂಭ್ರಮ. ಅಂಬೇಡ್ಕರ್‌ ಎಳೆದು ತಂದ ರಥವನ್ನು ಮುಂದಕ್ಕೆ ಒಯ್ಯುವ ಕೆಲಸವನ್ನು ದಲಿತ ಸಾಹಿತ್ಯ ಪರಿಷತ್ತು ಮಾಡುತ್ತಿದೆ. ದಲಿತ ಸಂಘರ್ಷ ಸಮಿತಿ ಸಾಮಾಜಿಕ ಹೋರಾಟಗಳನ್ನು ಮಾಡಿದರೆ, ದಲಿತ ಸಾಹಿತ್ಯ ಪರಿಷತ್ತು ಸಾಹಿತ್ಯಿಕವಾಗಿ ಹೋರಾಟ ಮಾಡುತ್ತಿದೆ’ ಎಂದು ಹೇಳಿದರು.

ದಲಿತರ ಬರಹ ಅಂದರೆ ಉಂಡು ಆರಾಮವಾಗಿ ಬರೆದ ಸಾಹಿತ್ಯವಲ್ಲ. ಅದು ಬದುಕಿನ ನೋವಿನ ಅಭಿವ್ಯಕ್ತಿ. ಬೆವರ ಹನಿಯಲ್ಲಿ ಹುಟ್ಟುವ ಅಕ್ಷರಗಳು ಅವು. ನೋವು, ಕಷ್ಟ–ಸಂಕಟವಿಲ್ಲದೆ ಹುಟ್ಟುವ ಸಾಹಿತ್ಯ ಶ್ರೇಷ್ಠ ಸಾಹಿತ್ಯವಾಗದು. ಸಮಾಜವನ್ನು ಸಶಕ್ತವಾಗಿ ಕಟ್ಟಲಾರದು ಎಂದು ಹೇಳಿದರು.

ಯಾರು ಒಳಗಿರಬೇಕಿತ್ತೋ ಅವರು ಹೊರಗುಳಿಯುವ, ಯಾರು ಹೊರಗಿರಬೇಕಿತ್ತೋ ಅವರು ಒಳಗಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ನಾವಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಒ.ಎಸ್‌. ನಾಗರಾಜ್‌ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತಿ ಚಿಂತಕ ಡಾ. ಅರ್ಜುನ ಗೊಳಸಂಗಿ, ದಲಿತ ಮುಖಂಡ ಆಲೂರು ನಿಂಗರಾಜ್‌, ರಾಜ್ಯ ಎಸ್‌ಸಿ, ಎಸ್‌ಟಿ ವಾರ್ಡನ್‌ಗಳ ಸಂಘದ ಅಧ್ಯಕ್ಷ ಕೆ. ಮಂಜುನಾಥ್‌, ಸಿದ್ದರಾಮಣ್ಣ ಬುಳಸಾಗರ ಉಪಸ್ಥಿತರಿದ್ದರು. ಹನುಮಂತಪ್ಪ ಆರ್‌. ಗಂಗನಕಟ್ಟೆ, ಮಹಾಂತೇಶ್‌ ವಚನಗಳನ್ನು ಹಾಡಿದರು. ಅನಿಲ್‌ ಬಾಪುಲೆ ಸ್ವಾಗತಿಸಿದರು. ದಸಾಪ ಜಿಲ್ಲಾ ಕಾರ್ಯದರ್ಶಿ ಹುಚ್ಚಂಗಿ ಪ್ರಸಾದ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.