ಸಂತೇಬೆನ್ನೂರು: ಸಮೀಪದ ಏಷ್ಯಾ ಖಂಡದ ಎರಡನೇ ದೊಡ್ಡ ಕೆರೆ ಸೂಳೆಕೆರೆ ಭರ್ತಿಗೆ ಕೇವಲ ಒಂದೂವರೆ ಅಡಿ ಬಾಕಿ ಇದೆ.
ಜಲಾನಯನ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದ ಕೆರೆ ನೀರಿನ ಮಟ್ಟ 25 ಅಡಿ ದಾಟಿದೆ. ಗರಿಷ್ಠ 27 ಅಡಿ ತಲುಪಿದರೆ ಕೋಡಿ ಬೀಳಲಿದೆ. ಸಿದ್ಧನನಾಲಾ ಮಂಟಪದ ಸ್ತಂಭದ ಮೇಲಿನ ಅಳತೆ ಮಾಪನಪಟ್ಟಿಯಲ್ಲಿ ಮಂಗಳವಾರ ನೀರಿನ ಮಟ್ಟ 25 ಅಡಿ ದಾಟಿದೆ. ಹಿರೇಹಳ್ಳ ತುಂಬಿ ಹರಿಯುತ್ತಿರುವುದರಿಂದ ಸೂಳೆಕೆರೆ ಸದ್ಯದಲ್ಲಿಯೇ 27 ಅಡಿ ತಲುಪಲಿದೆ. ಗರಿಷ್ಠ ಮಟ್ಟ ತಲುಪಿದರೆ ಕೆರೆಬಿಳಚಿ ಸಮೀಪದ ಕೋಡಿ ಪ್ರದೇಶದಿಂದ ನೀರು ಹೋರಬೀಳಲಿದೆ. ಮಳೆ ಮುಂದುವರಿದರೆ ನಿರೀಕ್ಷೆಗಿಂತ ಬೇಗನೆ ಕೋಡಿ ಬೀಳಲಿದೆ.
ಸೂಳೆಕರೆ ಹಿನ್ನೀರಿನ ವ್ಯಾಪ್ತಿಯಲ್ಲಿ 23ರಿಂದ 24 ಹಳ್ಳಿಗಳು ಇವೆ. ಸೂಳೆಕರೆ ನೀರು ಗರಿಷ್ಠ ಮಟ್ಟ ತಲುಪಿರುವುದರಿಂದ ಹೊಲಗಳಿಗೆ ನೀರು ನುಗ್ಗುವ ಭೀತಿ ರೈತರಲ್ಲಿದೆ. ರೈತರು ಮೆಕ್ಕೆಜೋಳ ಒಕ್ಕಣೆಗೆ, ಅಡಿಕೆ ಕೊಯ್ಲಿಗೆ ದೋಣಿ ಅವಲಂಬಿಸುವ ಪರಿಸ್ಥಿತಿ ಎದುರಾಗಲಿದೆ. 2022ರಲ್ಲಿ ಸೂಳೆಕೆರೆ ಕೋಡಿ ಬಿದ್ದು ಅಲ್ಪ ಪ್ರಮಾಣದ ನೀರು ನದಿ ಸೇರಿತ್ತು. 2023ರಲ್ಲಿ ಮಳೆ ಕೊರತೆಯಿಂದ ಕೆರೆ ನೀರು ಬಹುತೇಕ ಬರಿದಾಗುವ ಹಂತ ತಲುಪಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.