ADVERTISEMENT

ಹೆಚ್ಚುವರಿ ₹ 7 ಕೋಟಿಗೆ ಪ್ರಸ್ತಾವನೆ: ಶಾಸಕ

ಹೊನ್ನಾಳಿ ನಗರಕ್ಕೆ ತುಂಗಭದ್ರಾ ನದಿಯಿಂದ ಶುದ್ಧ ಕುಡಿಯುವ ನೀರು

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 4:31 IST
Last Updated 22 ಜನವರಿ 2022, 4:31 IST
ಹೊನ್ನಾಳಿ ಪ್ರವಾಸಿ ಮಂದಿರದ ಪಕ್ಕದಲ್ಲಿರುವ ಪಂಪ್‍ಹೌಸ್‌ನಲ್ಲಿ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ಶಾಸಕ ಎಂ.ಪಿ. ರೇಣುಕಾಚಾರ್ಯ ಗುದ್ದಲಿಪೂಜೆ ನೆರವೇರಿಸಿದರು.
ಹೊನ್ನಾಳಿ ಪ್ರವಾಸಿ ಮಂದಿರದ ಪಕ್ಕದಲ್ಲಿರುವ ಪಂಪ್‍ಹೌಸ್‌ನಲ್ಲಿ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ಶಾಸಕ ಎಂ.ಪಿ. ರೇಣುಕಾಚಾರ್ಯ ಗುದ್ದಲಿಪೂಜೆ ನೆರವೇರಿಸಿದರು.   

ಹೊನ್ನಾಳಿ: ಹೊನ್ನಾಳಿ ನಗರಕ್ಕೆ ತುಂಗಭದ್ರಾ ನದಿಯಿಂದ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಗೆ ಸರ್ಕಾರದಿಂದ ₹ 18 ಕೋಟಿ ಮಂಜೂರಾಗಿದ್ದು, ಇನ್ನೂ ₹ 7 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಟ್ಟು ₹ 25 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.

ನಗರದ ಪ್ರವಾಸಿ ಮಂದಿರದ ಪಂಪ್‍ಹೌಸ್ ಆವರಣದಲ್ಲಿ ₹ 25 ಕೋಟಿ ವೆಚ್ಚದ ಶುದ್ಧ ಕುಡಿಯುವ ನೀರು ಯೋಜನೆಗೆ ಶುಕ್ರವಾರ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.

2006ರಲ್ಲಿ ಮೊದಲ ಹಂತದ ಯೋಜನೆಗೆ ₹ 8 ಕೋಟಿ ಅನುದಾನದಡಿ ಯೋಜನೆ ಮಂಜೂರು ಮಾಡಿಸಿದ್ದು, ನಗರಕ್ಕೆ ನೀರು ಪೂರೈಸಲಾಗುತ್ತಿದೆ. ಇದೀಗ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ 2ನೇ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ. ನಗರದ ದೇವನಾಯಕನಹಳ್ಳಿ, ಹಿರೇಕಲ್ಮಠ, ಮಲ್ಲದೇವರಕಟ್ಟೆ ಗ್ರಾಮಗಳನ್ನು ಸೇರಿಸಿಕೊಂಡು ಯೋಜನೆಯನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಮಲ್ಲದೇವರಕಟ್ಟೆಯಲ್ಲಿ ನಿವೇಶನ: ನಗರಕ್ಕೆ ಸಮೀಪದ ಮಲ್ಲದೇವರಕಟ್ಟೆಯಲ್ಲಿ 29.37 ಎಕರೆ ಭೂಮಿ ಮಂಜೂರಾಗಿದ್ದು, ಲೇಔಟ್‌ ಅಭಿವೃದ್ಧಿಪಡಿಸಿ ನಿವೇಶನರಹಿತರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಅವರು ಹೇಳಿದರು.

ಎಂ.ಪಿ.ಆರ್ ಬಡಾವಣೆ: ಮಲ್ಲದೇವರಕಟ್ಟೆಯಲ್ಲಿ ಸುಸಜ್ಜಿತ ಲೇಔಟ್ ಮಾಡಿ ಅದಕ್ಕೆ ಎಂ.ಪಿ.ಆರ್. ಬಡಾವಣೆ ಎಂದು ನಾಮಕಾರಣ ಮಾಡಲಾಗುವುದು. ಈ ಸಂಬಂಧ ಪುರಸಭೆಯಲ್ಲಿ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭಾ ಅಧ್ಯಕ್ಷ ಬಾಬು ಹೋಬಳದಾರ್ ಹೇಳಿದರು.

₹ 60 ಕೋಟಿ ಯುಜಿಡಿಗೆ ಮಂಜೂರು: ಪುರಸಭೆ ವ್ಯಾಪ್ತಿಯಲ್ಲಿ ಯುಜಿಡಿ ಕಾಮಗಾರಿ ಕೈಗೊಳ್ಳಲು ₹ 60 ಕೋಟಿ ಮಂಜೂರಾಗಿದ್ದು, ಟೆಂಡರ್ ಕೂಡಾ ಆಗಿದೆ. ಹಾಗೆಯೇ ನಗರದ ಹಿರೇಕಲ್ಮಠ ಕೆರೆಯ ಸಂಪೂರ್ಣ ಅಭಿವೃದ್ಧಿಗೆ ₹ 14.35 ಕೋಟಿ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಗರೋತ್ಥಾನ ಯೋಜನೆಯಡಿ ₹ 10 ಕೋಟಿ ಅನುದಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರೋತ್ಥಾನ-4 ಯೋಜನೆಯಡಿ
₹ 10 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಪುರಸಭೆಯ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ಕುಳಿತು ನಗರದ ಸಿಸಿ ರಸ್ತೆ, ಚರಂಡಿ ಇತರೆ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ರೇಣುಕಾಚಾರ್ಯ ಹೇಳಿದರು. ಪುರಸಭಾ ಸದಸ್ಯರಾದ ರಂಗಪ್ಪ, ಮುಖಂಡರಾದ ಮಂಜುನಾಥ್ ಇಂಚರ, ಮಹೇಶ್ ಹುಡೇದ್, ಚಂದ್ರು, ಪ್ರಶಾಂತ್, ನಾಮಿನಿ ಸದಸ್ಯ ಕಿಟ್ಟಿ, ಕುಮಾರ್, ಮುಖ್ಯಾಧಿಕಾರಿ ಪಂಪಾಪತಿ ನಾಯ್ಕ್, ಎಂಜಿನಿಯರ್ ದೇವರಾಜ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಇಇ ಕುಮಾರಪ್ಪ, ಎಇ ಮಧು, ಗುತ್ತಿಗೆದಾರರ ಎಂ.ಎನ್. ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.