ADVERTISEMENT

ಸ್ಮಶಾನ ಜಾಗವಿಲ್ಲದೆ ಸಂಬಂಧಿಗಳ ಪರದಾಟ

ದಿಡಗೂರು ಕೃಷ್ಣಪ್ಪ ನಗರದವರಿಗೆ ಹೆದ್ದಾರಿ ಪಕ್ಕದ ಜಾಗವೇ ಗತಿ

ಎನ್.ಕೆ.ಆಂಜನೇಯ
Published 5 ಜುಲೈ 2022, 4:10 IST
Last Updated 5 ಜುಲೈ 2022, 4:10 IST
ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ ಕೆರೆ ಏರಿ ಮೇಲೆಯೇ ಅಂತ್ಯಸಂಸ್ಕಾರ ನಡೆಸಿರುವುದು
ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ ಕೆರೆ ಏರಿ ಮೇಲೆಯೇ ಅಂತ್ಯಸಂಸ್ಕಾರ ನಡೆಸಿರುವುದು   

ಹೊನ್ನಾಳಿ: ತಾಲ್ಲೂಕಿನ ಸೊರಟೂರು, ಹಿರೇಮಠ, ಹೊಸಕಟ್ಟೆ, ಹೊಳೆಮಾದಾಪುರ ಹಾಗೂ ಮಾವಿನಕೋಟೆ ಗ್ರಾಮಗಳಲ್ಲಿ ಸ್ಮಶಾನಗಳಿಲ್ಲ. ಶವ ಸಂಸ್ಕಾರಕ್ಕಾಗಿ ಈ ಗ್ರಾಮಗಳ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಹೊನ್ನಾಳಿಯಿಂದ 3 ಕಿ.ಮೀ. ದೂರದಲ್ಲಿ ಇರುವ ಡಿಡಗೂರಿನ ಪ್ರೊ. ಬಿ.ಕೃಷ್ಣಪ್ಪ ನಗರದ ನಿವಾಸಿಗಳು ಸ್ಮಶಾನವಿಲ್ಲದೇ ಮೃತರ ಅಂತ್ಯ ಸಂಸ್ಕಾರಕ್ಕಾಗಿ ಶಿವಮೊಗ್ಗ ಹೆದ್ದಾರಿ ಪಕ್ಕದ ಜಾಗಕ್ಕೆ ಬರಬೇಕಾಗಿದೆ. 800ರಷ್ಟು ಜನಸಂಖ್ಯೆ ಇರುವ ಈ ಬಡಾವಣೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರೇ ಹೆಚ್ಚಾಗಿದ್ದಾರೆ. ಈಗಾಗಲೇ ಸ್ಮಶಾನಕ್ಕೆ ಜಾಗ ನಿಗದಿ ಮಾಡಿದ್ದು, ಗ್ರಾಮದಿಂದ ದೂರ ಇರುವುದರಿಂದ ಅಲ್ಲಿಗೆ ಹೋಗಲು ಗ್ರಾಮಸ್ಥರು ತಯಾರಿಲ್ಲ. ಅಲ್ಲದೆ, ಆ ಜಮೀನಿನಲ್ಲಿ ರೈತರೊಬ್ಬರು ಉಳುಮೆ ಮಾಡುತ್ತಿದ್ದಾರೆ.

‘ಸ್ಮಶಾನಕ್ಕಾಗಿ 5 ಎಕರೆ ಭೂಮಿ ಮಂಜೂರಾಗಿದೆ ಎಂದು ಪಹಣಿಯಲ್ಲಿ ತೋರಿಸಲಾಗಿದೆ. ಸಾಮಾನ್ಯ ವರ್ಗದವರಿಗೆ 3, ಪರಿಶಿಷ್ಟ ಜಾತಿಗೆ 1, ಪರಿಶಿಷ್ಟ ವರ್ಗದವರಿಗೆ 1 ಎಕರೆ ಮೀಸಲಿಡಲಾಗಿದೆ. ಆದರೆ ಈ ಜಾಗ ಎಲ್ಲಿ ಬರುತ್ತದ ಎಂಬುದು ಇದುವರೆಗೂ ಗೊತ್ತಿಲ್ಲ. ಸರ್ಕಾರ ಕೂಡಲೇ ಈ ಭೂಮಿಯನ್ನು ಗುರುತಿಸಿ ಹದ್ದುಬಸ್ತು ಮಾಡಿಕೊಡಬೇಕು’ ಎಂದು ದಿಡಗೂರು ತಮ್ಮಣ್ಣ ಆಗ್ರಹಿಸುತ್ತಾರೆ.

ADVERTISEMENT

ಸೊರಟೂರು ಗ್ರಾಮದಲ್ಲಿ ಶವಸಂಸ್ಕಾರಕ್ಕಾಗಿ ಅರ್ಧ ಕಿ.ಮೀ. ದೂರಕ್ಕೆ ಚಾನಲ್ ಏರಿ ಹತ್ತಿ ಹರಸಾಹಸ ಪಡಬೇಕಾಗಿದೆ. ಗ್ರಾಮದಲ್ಲಿ 5,000ದಷ್ಟುಜನಸಂಖ್ಯೆ ಇದೆಯಾದರೂ, ಒಂದು ಸ್ಮಶಾನವೂ ಇಲ್ಲ. ಗ್ರಾಮದವರು ಅವರವರ ಜಮೀನುಗಳಲ್ಲಿ ಶವಸಂಸ್ಕಾರ ಮಾಡುತ್ತಿದ್ದಾರೆ.

ಹೊಳೆಮಾದಾಪುರಗ್ರಾಮದಲ್ಲೂ ರುದ್ರಭೂಮಿ ಇಲ್ಲದೇ ಗ್ರಾಮಸ್ಥರು ಸ್ವಂತ ಜಮೀನುಗಳಲ್ಲೇ ಶವಸಂಸ್ಕಾರ ಮಾಡುತ್ತಿದ್ದಾರೆ. ಜಮೀನು ಇಲ್ಲದವರಿಗೆ ಸಮಸ್ಯೆ ಇದೆ.

ಹಿರೇಮಠ ಗ್ರಾಮವು ಹೊನ್ನಾಳಿಯಿಂದ ಕೇವಲ 1 ಕಿ.ಮೀ. ದೂರದಲ್ಲಿದ್ದು, ಅಂದಾಜು 2,500 ಜನರು ವಾಸಿಸುತ್ತಿದ್ದಾರೆ. ಜಮೀನು ಇಲ್ಲದವರು ಊರ ಹೊರಗಡೆ ರಸ್ತೆಬದಿಯಲ್ಲಿ ಶವಸಂಸ್ಕಾರ ಮಾಡಬೇಕಾದ ಪರಿಸ್ಥಿತಿ ಬಂದಿದೆ.

‘ತಾಲ್ಲೂಕಿನ ಮುಕ್ತೇನಹಳ್ಳಿ ಗ್ರಾಮದ ಸ್ಮಶಾನಕ್ಕೆಂದೇ 2.28 ಎಕರೆ ಮಂಜೂರು ಮಾಡಲಾಗಿದ್ದು, ಆ ಜಾಗಕ್ಕೆ ಹಸ್ತುಬಸ್ತು ಆಗಿಲ್ಲ. ಗ್ರಾಮಸ್ಥರು ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದು, ಶೀಘ್ರದಲ್ಲಿಯೇ ಹದ್ದುಬಸ್ತು ಮಾಡಿಕೊಡುವ ಭರವಸೆ ನೀಡಿದ್ದಾರೆ’ ಎಂದು ಗ್ರಾಮಸ್ಥರು ಮಾಹಿತಿ ನೀಡುತ್ತಾರೆ.

‘ತಾಲ್ಲೂಕಿನಲ್ಲಿ 97 ಗ್ರಾಮಗಳಿದ್ದು, ಅವುಗಳಲ್ಲಿ 7 ಬೇಚರಾಕ್ ಗ್ರಾಮಗಳಿದ್ದು (ಕಂದಾಯರಹಿತ), 85 ಹಳ್ಳಿಗಳಲ್ಲಿ ರುದ್ರಭೂಮಿ ಸೌಲಭ್ಯ ಇದೆ. ಈ ಐದು ಗ್ರಾಮಗಳಿಗೆ ಸ್ಮಶಾನಕ್ಕೆ ಭೂಮಿ ಮಂಜೂರು ಮಾಡಲಾಗುವುದು. ತಾಲ್ಲೂಕಿನಲ್ಲಿ ಎಲ್ಲಿಯೂ ಸ್ಮಶಾನಗಳ ಒತ್ತುವರಿಯಾಗಿಲ್ಲ’ ಎನ್ನುತ್ತಾರೆ ತಹಶೀಲ್ದಾರ್ ಎಚ್.ಜೆ. ರಶ್ಮಿ.

***

ಸ್ಮಶಾನಕ್ಕೆ ಭೂಮಿ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಗ್ರಾಮ ವ್ಯಾಪ್ತಿಯಲ್ಲಿ 2 ಎಕರೆ ಸರ್ಕಾರಿ ಭೂಮಿ ಇದೆ. ಆದರೆ ಅದು ಗ್ರಾಮದಿಂದ 3 ಕಿ.ಮೀ. ದೂರವಿರುವುದರಿಂದ ಗ್ರಾಮಸ್ಥರು ಶವ ಹೊತ್ತು ಅಲ್ಲಿಗೆ ಹೋಗಲು ಸಾಧ್ಯವಾಗುವುದಿಲ್ಲ.
–ಹನುಮಂತಪ್ಪ, ದೊಗ್ಗಳ್ಳಿ ಗ್ರಾಮದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.