ದಾವಣಗೆರೆ: ರಾಮಕೃಷ್ಣ ಹೆಗಡೆ ನಗರದ 350 ಗುಡಿಸಲು ನಿವಾಸಿಗಳಿಗೆ ಪರ್ಯಾಯ ನಿವೇಶನ ನೀಡಿ ರಿಂಗ್‍ರೋಡ್ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಮಂಗಳವಾರ ನಡೆದ ಸ್ಮಾರ್ಟ್ಸಿಟಿ ಯೋಜನೆಯ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ರಾಷ್ಟ್ರೀಯ ಹೆದ್ದಾರಿ ಶಾಮನೂರು ರಸ್ತೆಯಿಂದ ಸಂಗೊಳ್ಳಿರಾಯಣ್ಣ ವೃತ್ತ, ರೈಲ್ವೇ ಮೇಲುಸೇತುವೆ ಮಾರ್ಗವಾಗಿ ಅಖ್ತರ್ ರಜಾ ವೃತ್ತದಿಂದ ಮಾಗನಹಳ್ಳಿ ರಸ್ತೆ ಸಂಪರ್ಕಿಸುವ ಮಾರ್ಗದಲ್ಲಿ ಬಾಕಿ ಉಳಿದಿರುವ ಕಾಮಗಾರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿ ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು’ ಎಂದು ಹೇಳಿದರು.
‘ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಎಲ್ಲಾ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ರಾಜನಹಳ್ಳಿಯ ಬಳಿ ತುಂಗಭದ್ರ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಬ್ಯಾರೇಜ್ ಕಾಮಗಾರಿಯನ್ನು ನದಿ ನೀರು ಹರಿಯುವಿಕೆಯ ಪ್ರಮಾಣ ಕಡಿಮೆಯಾದ ನಂತರ ಕೈಗೆತ್ತಿಕೊಂಡು ಏಪ್ರಿಲ್ ಒಳಗೆ ಪೂರ್ಣಗೊಳಿಸಬೇಕು’ ಎಂದು ತಾಕೀತು ಮಾಡಿದರು.
‘ವಿವಿಧೆಡೆ ಕೈಗೊಂಡಿರುವ ಶಾಲಾ ಕಟ್ಟಡ, ಕೆಎಸ್‍ಆರ್‌ಟಿಸಿ ಮತ್ತು ಬೇತೂರು ಬಸ್ ನಿಲ್ದಾಣ, ರಸ್ತೆ ಕಾಮಗಾರಿಗಳನ್ನು ದಿಶಾ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟವನ್ನು ಪರೀಕ್ಷಿಸಬೇಕು. ವಿಶೇಷವಾಗಿ ಯರಗುಂಟೆ ಹಾಗೂ ಬಸಾಪುರಗಳಲ್ಲಿ ನಿರ್ಮಿಸಿರುವ ಶಾಲಾ ಕೊಠಡಿಗಳ ಕುರಿತು ದೂರುಗಳಿದ್ದು, ಸಂಬಂಧಪಟ್ಟ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಬೇಕು’ ಎಂದರು.
‘ಬಸಾಪುರ ಶಾಲೆಯ ಶೌಚಾಲಯ ಸಮಸ್ಯೆಗೆ ಸಂಬಂಧಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಹರಿಸಬೇಕು’ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚಿಸಿದರು.
ಸ್ಮಾರ್ಟ್‌ಸಿಟಿ ಯೋಜನೆಯಡಿ ಒಟ್ಟು 115 ಕಾಮಗಾರಿಗಳು ನಡೆಯುತ್ತಿವೆ. 62 ಕಾಮಗಾರಿಗಳು ಪೂರ್ಣಗೊಂಡಿದ್ದು, ₹200.59 ಕೋಟಿ ಪಾವತಿಸಲಾಗಿದೆ. 13 ಕಾಮಗಾರಿಗಳು ಸಂಪೂರ್ಣವಾಗಿ ಪೂರ್ಣಗೊಂಡಿದ್ದು ಅಂತಿಮ ಹಂತದ ಬಿಲ್ಲು ಸೇರಿ ₹118.14 ಕೋಟಿ ಪಾತಿಸಲಾಗಿದೆ. 40 ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದು ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎ.ಚನ್ನಪ್ಪ, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಹಾಗೂ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.