ರಾಮೇಶ್ವರ (ನ್ಯಾಮತಿ): ‘ಸರ್ಕಾರಗಳು ಕಾಯಕವೇ ಕೈಲಾಸ ಎಂಬ ತತ್ವದಡಿ ಮುನ್ನಡೆಯಬೇಕೇ ಹೊರತು, ಬೇಡಿ ಬದುಕುವ ಪರಿಸ್ಥಿತಿಗೆ ಜನರನ್ನು ನೂಕಬಾರದು. ಜನತೆಗೆ ದುಡಿಯುವ ದಾರಿ ತೋರಬೇಕು. ಇಲ್ಲವಾದಲ್ಲಿ ಅವರು ಬೇಡಿ ಬದುಕುವ ದಾರಿ ಹಿಡಿಯುತ್ತಾರೆ’ ಎಂದು ಸಾಣೇಹಳ್ಳಿ ತರಳಬಾಳು ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಸವಳಂಗ ವಲಯ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ರಾಮೇಶ್ವರ ಗ್ರಾಮದ ವತಿಯಿಂದ ತಾಲ್ಲೂಕಿನ ರಾಮೇಶ್ವರ ಗ್ರಾಮದಲ್ಲಿ ಗುರುವಾರ ನಡೆದ ಸಾಮೂಹಿಕ ಸತ್ಯ ನಾರಾಯಣಸ್ವಾಮಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಗ್ರಾಮೀಣ ಪ್ರದೇಶಗಳಲ್ಲಿ ಹಿಂದಿಗಿಂತ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಆದರೆ ನೈತಿಕ ನೆಲೆಗಟ್ಟು ಕುಸಿದಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಭೂತಾಯಿಯನ್ನು ಪೂಜಿಸುವವರು ಕಡಿಮೆಯಾಗುತ್ತಿದ್ದಾರೆ. ಶಿಕ್ಷಣವಂತರಾಗಿ ಉದ್ಯೋಗ ಮಾಡುತ್ತಿದ್ದರೂ ವ್ಯವಸಾಯ ಬಿಡಬಾರದು. ನಮ್ಮ ಪರಂಪರೆಯನ್ನು ನೆನಪಿಸಿಕೊಳ್ಳಬೇಕು’ ಎಂದರು.
‘ಸರ್ಕಾರಗಳು ಮಾಡುವ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ’ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ಹಸ್ತಾಂತರ, ಜಾಗತಿಕ ಲಿಂಗಾಯತ ಮಹಾಸಭಾ ಪದಾಧಿಕಾರಿಗಳ ಘೋಷಣೆ ಮಾಡಲಾಯಿತು. ಪೂಜಾ ಸಮಿತಿ ಅಧ್ಯಕ್ಷ ಮಲ್ಲೇಶಪ್ಪ ಬಿ. ಬಾವಿಮನೆ ಅಧ್ಯಕ್ಷತೆ ವಹಿಸಿದ್ದರು. ಸಿದ್ದನಮಠದ ಯುಗಧರ್ಮ ರಾಮಣ್ಣ ತತ್ವಪದಗಳನ್ನು ಹಾಡಿದರು. ಗ್ರಾಮದ ಹಿರಿಯ ಡಿ.ತೀರ್ಥಲಿಂಗಪ್ಪ ಮಾತನಾಡಿದರು.
ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ಬಾಬು, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ಶಿವ ಬ್ಯಾಂಕ್ ಅಧ್ಯಕ್ಷ ಚಂದ್ರೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ, ಎನ್.ಮಲ್ಲೇಶಪ್ಪ, ಡಿ.ಎಸ್.ಮಲ್ಲೇಶಪ್ಪ, ವಲಯ ಮೇಲ್ವಿಚಾರಕ ಜಿ.ಎಸ್.ಮಧುಸೂದನ, ಸೇವಾ ಪ್ರತಿನಿಧಿ ವೇದಾವತಿ ,ಶ್ವೇತಾ, ಎಚ್.ರವಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.