ADVERTISEMENT

90 ವರ್ಷದ ವೃದ್ಧ ಸಾವು

ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 7ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 14:49 IST
Last Updated 20 ಜೂನ್ 2020, 14:49 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ದಾವಣಗೆರೆ: ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ 90 ವರ್ಷದ ವೃದ್ಧ ಶನಿವಾರ ಮೃತಪಟ್ಟಿದ್ದಾರೆ. ಅಲ್ಲಿಗೆ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿದೆ.

ಸರ್ವೇಕ್ಷಣಾ ತಂಡ ಮನೆಮನೆಗೆ ತೆರಳಿ ಆರೋಗ್ಯವಾಗಿ ದುರ್ಬಲವಾಗಿರುವವರ ಮಾಹಿತಿ ಸಂಗ್ರಹ ಮಾಡುತ್ತಿದ್ದರು. ಆಗ ಹೊಂಡದ ಸರ್ಕಲ್‌ನ ನಿವಾಸಿಯಾಗಿರು ಈ ವೃದ್ಧರಿಗೆ ಉಸಿರಾಟದ ಸಮಸ್ಯೆ ಇರುವುದು ಪತ್ತೆಯಾಗಿತ್ತು. ಜೂನ್‌ 13ರಂದು ಅವರನ್ನು ಸರ್ವೇಕ್ಷಣಾ ತಂಡ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿತ್ತು. ಅವರಿಗೆ ಕೊರೊನಾ ಸೋಂಕು ಇರುವುದು ಜೂನ್‌ 15ರಂದು ಖಚಿತವಾಗಿತ್ತು.

ಮೂವರಿಗೆ ಸೋಂಕು: ಜಿಲ್ಲೆಯಲ್ಲಿ ಮತ್ತೆ ಮೂವರಿಗೆ ಸೋಂಕು ಇರುವುದು ಶನಿವಾರ ದೃಢಪಟ್ಟಿದೆ.

ADVERTISEMENT

ಚನ್ನಗಿರಿ ಕುಂಬಾರ ಬೀದಿಯ ಎದುರು ಬದರು ಮನೆಯ ಇಬ್ಬರು ಮಹಿಳೆಯರು ಬೇರೆ ಜಿಲ್ಲೆಗಳಲ್ಲಿ ಮೃತಪಟ್ಟಿದ್ದರು. 56 ವರ್ಷದ ಮಹಿಳೆ (ಪಿ.7573) ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಮೇ 17ರಂದು ಮೃತಪಟ್ಟಿದ್ದರೆ, 72 ವರ್ಷದ ಮಹಿಳೆ (ಪಿ.7778) ಜೂನ್‌ 18ರಂದು ಚಿಕ್ಕಮಗಳೂರಿನಲ್ಲಿ ಮೃತಪಟ್ಟಿದ್ದರು. ಇದೀಗ ಇವರ ಸಂಪರ್ಕಿತರಲ್ಲಿ ಕೊರೊನಾ ಕಾಣಿಸಿಕೊಂಡಿದೆ.

7778 ಸಂಪರ್ಕದಿಂದ 38 ವರ್ಷದ ಪುರುಷ (ಪಿ.8490), 30 ವರ್ಷದ ಮಹಿಳೆಗೆ (ಪಿ.8491) ಕೊರೊನಾ ಬಂದಿದೆ. ಎದುರು ಮನೆಯಲ್ಲಿಯೂ ಕೊರೊನಾ ಇರುವುದು ದೃಢಪಟ್ಟಿದ್ದು, ಅದು ಭಾನುವಾರದ ಬುಲೆಟಿನ್‌ನಲ್ಲಿ ನಮೂದಾಗಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ದಾವಣಗೆರೆ ಬೀಡಿ ಲೇಔಟ್‌ನ 54 ವರ್ಷದ ಮಹಿಳೆಗೆ (ಪಿ.8492) ತೀವ್ರ ಉಸಿರಾಟದ ತೊಂದರೆ ಎಂದು ಗುರುತಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 248ಕ್ಕೇರಿದೆ. ಅದರಲ್ಲಿ 220 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 7 ಮಂದಿ ಮೃತಪಟ್ಟಿದ್ದಾರೆ. 21 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.