ADVERTISEMENT

ಕಾರಿನಲ್ಲಿ ಸಾಗಿಸುತ್ತಿದ್ದ ₹1.47 ಕೋಟಿ ವಶ, ಕಲಬುರ್ಗಿಯ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 2:52 IST
Last Updated 6 ಫೆಬ್ರುವರಿ 2021, 2:52 IST
ದಾವಣಗೆರೆಯ ಕೆ.ಆರ್.ರಸ್ತೆ ಗ್ಯಾಲಕ್ಸಿ ಶಾದಿ ಮಹಲ್ ಬಳಿ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ₹ 1.47 ಕೋಟಿಯನ್ನು ಪೊಲೀಸರು ವಶಕ್ಕೆ ಪಡೆದಿರುವುದು.
ದಾವಣಗೆರೆಯ ಕೆ.ಆರ್.ರಸ್ತೆ ಗ್ಯಾಲಕ್ಸಿ ಶಾದಿ ಮಹಲ್ ಬಳಿ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ₹ 1.47 ಕೋಟಿಯನ್ನು ಪೊಲೀಸರು ವಶಕ್ಕೆ ಪಡೆದಿರುವುದು.   

ದಾವಣಗೆರೆ: ನಗರದ ಕೆ.ಆರ್.ರಸ್ತೆ ಗ್ಯಾಲಕ್ಸಿ ಶಾದಿ ಮಹಲ್ ಬಳಿ ದಾಖಲೆ ಇಲ್ಲದೇ ಕಾರಿನಲ್ಲಿ ಶುಕ್ರವಾರ ರಾತ್ರಿ ಸಾಗಿಸುತ್ತಿದ್ದ ₹ 1.47 ಕೋಟಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.

ಕಲಬುರ್ಗಿ ನಿವಾಸಿಗಳಾದ ಶ್ರೀಕಾಂತ್ (26), ಮಹೇಶ್ (23) ಹಾಗೂ ಕಾರಿನ ಚಾಲಕ ಬೀರಲಿಂಗ (25) ಬಂಧಿತ ಆರೋಪಿಗಳು.

ಕಲಬುರ್ಗಿಯಿಂದ ದಾವಣಗೆರೆಗೆ ಬರುತ್ತಿದ್ದ ಕಾರನ್ನು ಉತ್ತರ ಸಂಚಾರ ಠಾಣೆಯಎಎಸ್ಐ ಜಗನ್ನಾಥ್, ಕಾನ್‌ಸ್ಟೆಬಲ್‌ಗಳಾದ ಆಂಜನೇಯ, ರವಿ, ರುದ್ರೇಶ್ ಗುಡಿಕೇರಿ ಅವರು ತಡೆದು ತಪಾಸಣೆ ಮಾಡಿದಾಗ ಮೂರು ಬ್ಯಾಗ್‌ಗಳಲ್ಲಿ ಹಣ ಪತ್ತೆಯಾಗಿದೆ.

ADVERTISEMENT

ಹಣದ ಬಗ್ಗೆ ದಾಖಲೆ ಕೇಳಿದಾಗ ಸರಿಯಾದ ಮಾಹಿತಿ ನೀಡದೇ ಇರುವುದರಿಂದ ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಬಳಿಕ ಆರೋಪಿಗಳನ್ನು ಆಜಾದ್ ನಗರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಯಿತು. ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸ್ಥಳಕ್ಕೆ ನಗರ ಡಿವೈಎಸ್ಪಿ ನಾಗೇಶ್ ಐತಾಳ್ ಭೇಟಿ ನೀಡಿ ಪರಿಶೀಲಿಸಿದರು.

‘ಸರಿಯಾದ ದಾಖಲೆಗಳು ಇಲ್ಲದ ಕಾರಣ ತನಿಖೆ ನಡೆಸಲು ತೆರಿಗೆ ಇಲಾಖೆಗೆ ಹಣವನ್ನು ನೀಡಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ತಿಮ್ಮಣ್ಣ, ಗಜೇಂದ್ರಪ್ಪ, ಆಜಾದ್ ನಗರ ಠಾಣೆಯ ಪಿಎಸ್ಐ ಶೈಲಜಾ ಇದ್ದರು. ಆಜಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.