ADVERTISEMENT

ಎಚ್. ಕಡದಕಟ್ಟೆ ಗ್ರಾ.ಪಂ: ಮೂಲ ಸ್ಥಾನಕ್ಕೆ ಪಿಡಿಒ ನಿಯೋಜಿಸಲು ಆದೇಶ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 10:04 IST
Last Updated 12 ಮಾರ್ಚ್ 2020, 10:04 IST

ಹೊನ್ನಾಳಿ: ‘ತಾಲ್ಲೂಕಿನ ಎಚ್. ಕಡದಕಟ್ಟೆ ಗ್ರಾಮ ಪಂಚಾಯಿತಿಗೆ ಡಿ.ಆರ್. ಜಯಕುಮಾರ್ ಅವರನ್ನು ಪಿಡಿಒ ಆಗಿ ನಿಯೋಜನೆ ಮಾಡಿದ್ದ ಆದೇಶವನ್ನು ರದ್ದುಗೊಳಿಸಿ ಅವರವರ ಮೂಲಸ್ಥಾನ ಹರಿಹರ ತಾಲ್ಲೂಕಿನ ಭಾನುವಳ್ಳಿಗೆ ನೇಮಕ ಮಾಡಬೇಕು ಎಂದು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ’ ಎಂದು ರಾಜ್ಯ ಭ್ರಷ್ಟಾಚಾರ ವಿರೋಧಿ ವೇದಿಕೆಯ ಗೌರವಾಧ್ಯಕ್ಷ ಗುರುಪಾದಯ್ಯ ಮಠದ್ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ರಾಮ ಪಂಚಾಯಿತಿಗೆ ಜಯಕುಮಾರ್ ಅವರನ್ನು ಸರ್ಕಾರದ ಸುತ್ತೋಲೆ, ಮಾರ್ಗಸೂಚಿ ವಿರುದ್ಧವಾಗಿ ಮಾಡಿರುವ ಮರು ನಿಯೋಜನೆಯನ್ನು ಕೂಡಲೇ ರದ್ದುಗೊಳಿಸಿ ಮೂಲ ಪಿಡಿಒ ಆಗಿದ್ದ ವಿಜಯಗೌಡರ ಅವರಿಗೆ ನೀಡಿರುವ ಕಾನೂನುಬಾಹಿರ ರಜೆ ಮಂಜೂರಾತಿ ಹಿಂಪಡೆಯಬೇಕು. ಕಾನೂನುಬಾಹಿರ ಮರು ನಿಯೋಜನೆ ಮತ್ತು ರಜೆ ಮಂಜೂರಾತಿ ಮಾಡಿರುವ ತಾಲ್ಲೂಕು ಪಂಚಾಯಿತಿ ಇಒ ಎಸ್.ಎಲ್. ಗಂಗಾಧರಮೂರ್ತಿ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ದೂರು ಸಲ್ಲಿಸಿದ್ದರು.ದೂರನ್ನು ಪರಿಶೀಲಿಸಿದ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ’ ಎಂದು ತಿಳಿಸಿದರು.

ಶಾಸಕ ರೇಣುಕಾಚಾರ್ಯ ಮತ್ತು ಅವರ ಕುಟುಂಬದವರ ಒತ್ತಡಕ್ಕೆ ಮಣಿದು, ಸರ್ಕಾರದ ಮಾರ್ಗಸೂಚಿ, ಮತ್ತು ಆದೇಶಗಳ ಧಿಕ್ಕರಿಸಿ ಎಚ್. ಕಡದಕಟ್ಟೆ ಗ್ರಾಮ ಪಂಚಾಯಿತಿಗೆ ಹರಿಹರ ತಾಲ್ಲೂಕಿನ ಭಾನುವಳ್ಳಿ ಪಿಡಿಒ ಅವರನ್ನು ಕಾರ್ಯನಿರ್ವಹಣಾಧಿಕಾರಿ ನಿಯೋಜಿಸಿದ್ದರು ಎಂದು ದೂರಿದರು.

ADVERTISEMENT

ಪಂಚಾಯಿತಿ ಅಧ್ಯಕ್ಷೆಯಾಗಿದ್ದ ಲಕ್ಷ್ಮಮ್ಮ ಅವಿಶ್ವಾಸದ ಹಿನ್ನೆಲೆಯಲ್ಲಿ ಅಧಿಕಾರ ಕಳೆದುಕೊಂಡಿದ್ದರು. ಮತ್ತೆ ನಡೆದ ಚುನಾವಣೆಯಲ್ಲಿ ಅವರು ಅಧ್ಯಕ್ಷರಾಗಿ ನೇಮಕವಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಅಧ್ಯಕ್ಷರಾಗಿ ಆಡಳಿತ ನಡೆಸಬಾರದು ಎನ್ನುವ ದುರುದ್ದೇಶ ಕೂಡಾ ಇತ್ತು ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಅಧ್ಯಕ್ಷ ಎ. ಉಮೇಶ್, ಉಪಾಧ್ಯಕ್ಷ ರಾಜು ಕಡಗಣ್ಣಾರ್, ಕಾರ್ಯದರ್ಶಿ ಬಿ.ಎಲ್. ಶಾಂತರಾಜ್, ಸಂಘಟನಾ ಕಾರ್ಯದರ್ಶಿ ಸೊರಟೂರು ಹನುಮಂತಪ್ಪ, ಎಚ್. ಕಡದಕಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.