ADVERTISEMENT

ಸಮಾಜವನ್ನು ಸಂಘಟಿಸಿ ಕನಕದಾಸರ ಕಂಚಿನ ಪ್ರತಿಮೆ ಸ್ಥಾಪನೆ: ಬಿ. ಸಿದ್ದಪ್ಪ

​ಪ್ರಜಾವಾಣಿ ವಾರ್ತೆ
Published 1 ಮೇ 2022, 4:10 IST
Last Updated 1 ಮೇ 2022, 4:10 IST

ಹೊನ್ನಾಳಿ: ನಗರದ ದೇವನಾಯ್ಕನಹಳ್ಳಿಯ ಕನಕದಾಸ ವೃತ್ತಕ್ಕೆ ನಾಮಕರಣ ಮಾಡುವಾಗಲೇ ದಾಸ ಶ್ರೇಷ್ಠ ಕನಕದಾಸರ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಲು ನಿರ್ಣಯ ಮಾಡಲಾಗಿತ್ತು ಎಂದು ತಾಲ್ಲೂಕು ಕುರುಬ ಸಮಾಜದ ಕಾರ್ಯಾಧ್ಯಕ್ಷ ಬಿ. ಸಿದ್ದಪ್ಪ ಹೇಳಿದರು.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ‘ತಾಲ್ಲೂಕು ಕುರುಬ ಸಮಾಜದಿಂದ ಪ್ರತಿ ವರ್ಷ ಕನಕದಾಸರ ಜಯಂತಿ ಕಾರ್ಯಕಮ ಆಚರಿಸುತ್ತಾ ಬರಲಾಗಿತ್ತು. ಎರಡು ವರ್ಷಗಳಿಂದ ಕೊರೊನಾ ಕಾರಣ ಕಾರ್ಯಕ್ರಮ ಹಮ್ಮಿಕೊಳ್ಳಲು ಆಗಿರಲಿಲ್ಲ. ಕನಕದಾಸರ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಲು ರಸ್ತೆ ವಿಸ್ತರಣೆ ಸಮಸ್ಯೆ ಎದುರಾಗಿದೆ. ಲೋಕೋಪಯೋಗಿ ಇಲಾಖೆಯವರಿಗೆ ಸೂಕ್ತ ಜಾಗ ಗುರುತಿಸಿ ಕೊಡುವಂತೆ ಸಮಾಜದಿಂದ ಮನವಿ ಮಾಡಿದ್ದೇವೆ. ಅವಳಿ ತಾಲ್ಲೂಕಿನಲ್ಲಿ ಸಮಾಜವನ್ನು ಸಂಘಟಿಸಿ ಕನಕದಾಸರ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು’ ಎಂದರು.

ಕಾರ್ಯದರ್ಶಿ ಕುಬೇರಪ್ಪ ಮಾತನಾಡಿ, ‘ಸಮಾಜದ ಎಲ್ಲಾ ಮುಖಂಡರ ಸಭೆ ಕರೆದು ಕಂಚಿನ ಪ್ರತಿಮೆ ಸ್ಥಾಪನೆ ಸಂಬಂಧ ತಿರ್ಮಾನ ಕೈಗೊಳ್ಳಲಾಗುವುದು. ಯಾವುದೇ ಲೋಪ ಆಗದಂತೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯಕ್ರಮ ಮಾಡೋಣ’ ಎಂದು ಕರೆ ನೀಡಿದರು.

ADVERTISEMENT

ಮುಖಂಡ ಎಚ್.ಎ. ಉಮಾಪತಿ ಮಾತನಾಡಿ, ‘ಕನಕದಾಸರು ನಾವೆಲ್ಲರೂ ಮನುಕುಲದವರು ಎಂಬ ಸಂದೇಶವನ್ನು ಸಾರಿದ್ದರು. ಕೆಲವರು ಸ್ಥಳೀಯ ಮುಖಂಡರ ಸಂಪರ್ಕದ ಕೊರತೆಯಿಂದ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದು ಸರಿಯಲ್ಲ’ ಎಂದರು.

ಈಚೆಗೆ ಶಾಸಕರು ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಸೇನೆಯವರು ಕನಕದಾಸರ ಕಂಚಿನ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ನಿಮ್ಮ ಸಂಘದಿಂದ ಪ್ರತಿಮೆಯನ್ನು ಎಲ್ಲಿ ಪ್ರತಿಷ್ಠಾಪಿಸುತ್ತೀರಿ ಎಂಬ ಸಮಾಜದ ಪ್ರತಿನಿಧಿಯೊಬ್ಬರ ಪ್ರಶ್ನೆಗೆ, ‘ಶಾಸಕರು, ಸಂಗೊಳ್ಳಿ ರಾಯಣ್ಣ ಯುವಸೇನೆ ಮತ್ತು ತಾಲ್ಲೂಕು ಕುರುಬ ಸಮಾಜದ ಸಂಘದವರು ಸೇರಿ, ಚರ್ಚಿಸಿ, ತಿರ್ಮಾನ ಕೈಗೊಂಡು ಪ್ರತಿಮೆ ಪ್ರತಿಷ್ಠಾಪಿಸುತ್ತೇವೆ’ ಎಂದು ಕುಬೇರಪ್ಪ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಕುರುಬ ಸಮಾಜದ ಗೌರವಾಧ್ಯಕ್ಷ ಎಚ್.ಬಿ. ಶಿವಯೋಗಿ, ಮುಖಂಡರಾದ ಕಡಗಣ್ಣಾರ ರಾಜು, ಗಾಳಿ ನಾಗರಾಜ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ. ರಮೇಶ್, ನೆಲಹೊನ್ನೆ ಹನುಮಂತಪ್ಪ, ಆಂಜನೇಯ, ಕರವೇ ಮುಖಂಡ ವಿನಯ್, ದಾನಪ್ಪ ತೆಗ್ಗಿಹಳ್ಳಿ, ಪಿರಿಗಿ ಹಳದಪ್ಪ, ಪ್ರಶಾಂತ ಬಣ್ಣಜ್ಜಿ, ಮನು ವಾಲಜ್ಜಿ ಮತ್ತು ಸಮಾಜದ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.