ADVERTISEMENT

ದಾವಣಗೆರೆ: ಭತ್ತ ಕೊಯ್ಲಿಗೆ ಯಂತ್ರಗಳ ಬರ

ಹೆಚ್ಚು ಹಣ ಕೊಟ್ಟರೂ ಸಿಗದ ಯಂತ್ರಗಳು * ಬೆಳೆಗಾರರಿಗೆ ಎದುರಾದ ಮತ್ತೊಂದು ಸಮಸ್ಯೆ

ನಾಗರಾಜ ಎನ್‌
Published 7 ಡಿಸೆಂಬರ್ 2018, 17:40 IST
Last Updated 7 ಡಿಸೆಂಬರ್ 2018, 17:40 IST
ದಾವಣಗೆರೆ ಜಿಲ್ಲೆಯ ಕೊಂಡಜ್ಜಿಯಲ್ಲಿ ಭತ್ತ ಕೊಯ್ಲು ಮಾಡಿ, ಟ್ರ್ಯಾಕ್ಟರ್‌ಗೆ ಧಾನ್ಯ ತುಂಬುತ್ತಿರುವ ಕಟಾವು ಯಂತ್ರಪ್ರಜಾವಾಣಿ ಚಿತ್ರ: ಅನೂಪ್‌ ಆರ್‌. ತಿಪ್ಪೇಸ್ವಾಮಿ
ದಾವಣಗೆರೆ ಜಿಲ್ಲೆಯ ಕೊಂಡಜ್ಜಿಯಲ್ಲಿ ಭತ್ತ ಕೊಯ್ಲು ಮಾಡಿ, ಟ್ರ್ಯಾಕ್ಟರ್‌ಗೆ ಧಾನ್ಯ ತುಂಬುತ್ತಿರುವ ಕಟಾವು ಯಂತ್ರಪ್ರಜಾವಾಣಿ ಚಿತ್ರ: ಅನೂಪ್‌ ಆರ್‌. ತಿಪ್ಪೇಸ್ವಾಮಿ   

ದಾವಣಗೆರೆ: ಜಿಲ್ಲೆಯ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಈಗ ಎಲ್ಲೆಡೆ ಭತ್ತ ಕೊಯ್ಲಿನ ಕೆಲಸ. ಇತ್ತ ಭತ್ತದ ಧಾರಣೆಯೂ ದಿನೇ ದಿನೆ ಹೆಚ್ಚುತ್ತಿದೆ. ಆದರೆ, ಈ ಸಂಭ್ರಮಕ್ಕೆ ಕಟಾವು ಯಂತ್ರಗಳ ಕೊರತೆ ಬರೆ ಎಳೆದಿದೆ.

ಕೃಷಿ ಕಾರ್ಮಿಕರ ಕೊರತೆಯಿಂದಾಗಿ ದಶಕದ ಹಿಂದಿನಿಂದಲೇ ಜಿಲ್ಲೆಯ ಭತ್ತ ಬೆಳೆಗಾರರು ಯಂತ್ರಗಳನ್ನು ಬಳಸಲಾರಂಭಿಸಿದರು. ಆದರೆ, ಈ ವರ್ಷ ಯಂತ್ರಗಳಿಗೂ ಬರ. ಹೆಚ್ಚು ದುಡ್ಡು ಕೊಟ್ಟರೂ ಭತ್ತ ಕೊಯ್ಲು ಮಾಡುವ ಯಂತ್ರಗಳು ಸಿಗುತ್ತಿಲ್ಲ ಎಂಬುದು ರೈತರನ್ನು ಚಿಂತೆಗೀಡುಮಾಡಿದೆ.

ಜಿಲ್ಲೆಯಲ್ಲಿ ಸುಮಾರು 77 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದೆ. ಇನ್ನೂ ಕಾಲು ಭಾಗದಷ್ಟು ಕಟಾವು ಆಗಬೇಕಿದೆ. ಈಗಾಗಲೇ ಭತ್ತ ಕಟಾವಿನ ಕಾಲ ಮೀರುತ್ತಿದ್ದು, ಕಾಳು ಉದುರಲಾರಂಭಿಸಿದೆ. ಕೊಯ್ಲು ತಡವಾದಷ್ಟೂ ಇಳುವರಿ ಕುಸಿಯುತ್ತದೆ. ಹೀಗಾಗಿ, ಎಲ್ಲಾ ರೈತರೂ ಆದಷ್ಟು ಬೇಗನೇ ಕಟಾವು ಮುಗಿಸಿಬಿಡಬೇಕು ಎಂಬ ದಾವಂತಕ್ಕೆ ಬಿದ್ದಿದ್ದಾರೆ. ಇದರಿಂದಾಗಿ ಯಂತ್ರಗಳಿಗೆ ಬೇಡಿಕೆ ಸಹಜವಾಗಿ ಹೆಚ್ಚಾಗಿದೆ.

ADVERTISEMENT

ಇಡೀ ಜಿಲ್ಲೆಯಲ್ಲಿ ಒಂದೇ ತಳಿ:ಮಳೆ ಕೊರತೆಯಿಂದಾಗಿ ಕಳೆದ ಮೂರು ವರ್ಷಗಳಲ್ಲಿ ರೈತರು ಭತ್ತ ಬೆಳೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಈ ಬಾರಿ ಹೆಚ್ಚಿನ ರೈತರು ಸ್ವಂತ ಬಳಕೆಗಾಗಿ ಆರ್‌ಎನ್‌ಆರ್‌ (ಊಟದ ಭತ್ತ) ತಳಿಯನ್ನೇ ಹಾಕಿದ್ದಾರೆ. ಎಲ್ಲೆಡೆ ಇದೇ ತಳಿ ಹೆಚ್ಚಾಗಿ ಇರುವುದರಿಂದ ಒಮ್ಮೆಗೇ ಕೊಯ್ಲಿಗೆ ಬಂದಿದೆ. ಇದೂ ಕೂಡ ಸಮಸ್ಯೆ ಹೆಚ್ಚಾಗಲು ಕಾರಣ ಎನ್ನುತ್ತಾರೆ ರೈತ ಬೂದಿಹಾಳ್‌ ಗ್ರಾಮದ ಕೆಂಚನಗೌಡ.

ಬಾಡಿಗೆ ಹೆಚ್ಚಿಸಿದ ಮಾಲೀಕರು: ಈ ಹಿಂದೆ ಒಂದು ಗಂಟೆಗೆ ₹ 1,700 ಬಾಡಿಗೆ ಪಡೆಯುತ್ತಿದ್ದ ಭತ್ತ ಕಟಾವು ಯಂತ್ರಗಳ ಮಾಲೀಕರು ಈ ವರ್ಷ ದರ ಹೆಚ್ಚಿಸಿದ್ದಾರೆ. ಇದೇ ಹಂಗಾಮಿನ ಆರಂಭದಲ್ಲಿ ಪ್ರತಿ ಗಂಟೆಗೆ ₹ 2,200 ಬಾಡಿಗೆ ಪಡೆಯುತ್ತಿದ್ದರು. ಯಂತ್ರಗಳಿಗೆ ಬೇಡಿಕೆ ಹೆಚ್ಚುತ್ತಿರುವುದನ್ನೇ ಅವಕಾಶವಾಗಿ ಬಳಸಿಕೊಂಡಿರುವ ಅವರು ಏಕಾಏಕಿ ಬಾಡಿಗೆಯನ್ನು ₹ 3,000 ರಿಂದ ₹ 3,500ಕ್ಕೆ ಹೆಚ್ಚಿಸಿದ್ದಾರೆ. ಬಾಡಿಗೆ ದರ ಹೆಚ್ಚಾಗಿದ್ದು, ರೈತರನ್ನು ಇನ್ನಷ್ಟು ಕಂಗೆಡಿಸಿದೆ.

* * *

ಹೊರ ರಾಜ್ಯಗಳಿಂದ ಬಾರದ ಯಂತ್ರಗಳು
ಸತತವಾಗಿ ಮೂರು ವರ್ಷ ಈ ಭಾಗದಲ್ಲಿ ಭತ್ತ ಬೆಳೆಯಲಿಲ್ಲ. ಹೀಗಾಗಿ, ಹೊರ ರಾಜ್ಯಗಳಿಂದ ಬರುತ್ತಿದ್ದ ಕಟಾವು ಯಂತ್ರಗಳು ಇತ್ತ ಸುಳಿದಿಲ್ಲ. ಹೀಗಾಗಿ, ಇರುವ ಯಂತ್ರಗಳಿಗೆ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್‌.

‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜಾನ್‌ ಡೀರ್ ಸಂಸ್ಥೆಯ 11 ಯಂತ್ರಗಳನ್ನು ರೈತರ ಬಳಕೆಗಾಗಿ ನೀಡಲಾಗಿದೆ. ಈ ಯಂತ್ರಗಳು ಹಗಲೂ–ರಾತ್ರಿ ಭತ್ತ ಕೊಯ್ಲು ಮಾಡುತ್ತಿವೆ. ಸರ್ಕಾರದ ನಿಯಮಾವಳಿಯಂತೆ ಪ್ರತಿ ಗಂಟೆಗೆ ₹ 1,850 ಬಾಡಿಗೆ ನಿಗದಿ ಮಾಡಲಾಗಿದೆ. ನೆರೆಯ ಜಿಲ್ಲೆಗಳಲ್ಲೂ ಭತ್ತ ಕೊಯ್ಲು ನಡೆಯುತ್ತಿದೆ. ಹೀಗಾಗಿ, ಅಲ್ಲಿನ ಕೃಷಿ ಯಂತ್ರಧಾರೆಗಳಿಂದಲೂ ಯಂತ್ರಗಳಿಗೆ ಬಿಡುವಿಲ್ಲ. ಇಲ್ಲದಿದ್ದರೆ ಅಲ್ಲಿನ ಯಂತ್ರಗಳನ್ನು ತರಿಸಿಕೊಳ್ಳಬಹುದಿತ್ತು’ ಎಂದು ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.