ADVERTISEMENT

ಭತ್ತ: ಕಟಾವು ಮುಗಿಯುವವರೆಗೂ ನೋಂದಣಿ ವಿಸ್ತರಿಸಿ

ಜಿಲ್ಲೆಯಲ್ಲಿ ನವೆಂಬರ್ ಮೊದಲ ವಾರದಿಂದ ಕಟಾವು; ನೋಂದಾಯಿಸಿದ್ದು 10 ರೈತರು!

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 4:25 IST
Last Updated 29 ಅಕ್ಟೋಬರ್ 2025, 4:25 IST
ದಾವಣಗೆರೆ ತಾಲ್ಲೂಕಿನ ಆರನೇಕಲ್ಲು ಗ್ರಾಮದ ಬಳಿ ಕಟಾವಿಗೆ ಬಂದಿರುವ ಭತ್ತದ ಬೆಳೆಯಲ್ಲಿ ರೈತರು ನಿಂತಿರುವುದು
ದಾವಣಗೆರೆ ತಾಲ್ಲೂಕಿನ ಆರನೇಕಲ್ಲು ಗ್ರಾಮದ ಬಳಿ ಕಟಾವಿಗೆ ಬಂದಿರುವ ಭತ್ತದ ಬೆಳೆಯಲ್ಲಿ ರೈತರು ನಿಂತಿರುವುದು   

ದಾವಣಗೆರೆ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ (ಎಂಎಸ್‌ಪಿ) ಭತ್ತ ಖರೀದಿ ನೋಂದಣಿ ಪ್ರಕ್ರಿಯೆ ದಿನಾಂಕ ಅಂತ್ಯಗೊಳ್ಳಲು ಇನ್ನೆರೆಡು ದಿನಗಳು ಬಾಕಿ ಇವೆ. ಜಿಲ್ಲೆಯಲ್ಲಿನ್ನು ಭತ್ತದ ಕಟಾವು ಆರಂಭವಾಗಿಲ್ಲ. ಖರೀದಿಯ ನೋಂದಣಿ ಪ್ರಕ್ರಿಯೆಯನ್ನು ಅ.31ರ ಬದಲು ಕಟಾವು ಪೂರ್ಣವಾಗುವವರೆಗೂ ಮುಂದುವರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಭತ್ತ ಖರೀದಿ ನೋಂದಣಿ ಕೊನೆಯ ದಿನಾಂಕದ ಬಗ್ಗೆ ರೈತರಿಗೆ ಸಮರ್ಪಕ ಮಾಹಿತಿಯೂ ಇಲ್ಲದ್ದರಿಂದ ಜಿಲ್ಲೆಯಲ್ಲಿ 10 ರೈತರು ಮಾತ್ರವೇ ಮಂಗಳವಾರದವರೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. 

‘ಭತ್ತ ಖರೀದಿ ನೋಂದಣಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದರೆ, ಮುಕ್ತ ಮಾರುಕಟ್ಟೆಯಲ್ಲಿ ದರ ಕುಸಿತವಾಗುವ ಸಾಧ್ಯತೆ ಇದೆ. ಹೀಗಾಗಿ ಭತ್ತ ಬೆಳೆಗಾರರಿಗೆ ನಷ್ಟವಾಗುವುದನ್ನು ತಡೆಯಲು ಕಟಾವು ಪೂರ್ಣಗೊಳ್ಳುವವರೆಗೂ ಖರೀದಿ ನೋಂದಣಿ ಪ್ರಕ್ರಿಯೆ ಮುಂದುವರಿಸಬೇಕು’ ಎಂದು ರೈತರು ಹೇಳಿದ್ದಾರೆ.

ADVERTISEMENT

ಕೇಂದ್ರ ಸರ್ಕಾರ ಕ್ವಿಂಟಲ್‌  ಭತ್ತಕ್ಕೆ (ಸಾಮಾನ್ಯ) ₹ 2,369 ಹಾಗೂ ಗ್ರೇಡ್ ‘ಎ’ ಭತ್ತಕ್ಕೆ ₹ 2,389 ಎಂಎಸ್‌ಪಿ ದರ ನಿಗದಿ ಮಾಡಿದೆ. ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 63,700 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದ್ದು, ಅಂದಾಜು 2,86,650 ಟನ್‌ ಇಳುವರಿ ನಿರೀಕ್ಷಿಸಲಾಗಿದೆ.

ಅಧಿಕ ಪ್ರಮಾಣದ ಭತ್ತ ಬಿತ್ತನೆಯ ಪ್ರದೇಶಗಳಾದ ದಾವಣಗೆರೆ, ಚನ್ನಗಿರಿ, ಹೊನ್ನಾಳಿ ಹಾಗೂ ಹರಿಹರ ತಾಲ್ಲೂಕುಗಳಲ್ಲಿ ಭತ್ತ ನೋಂದಣಿ ಕೇಂದ್ರಗಳನ್ನು ಸೆ.15ರಿಂದ ತೆರೆಯಲಾಗಿದೆ. ಅ.31ರ ವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಈ ಕುರಿತು ಮಾಹಿತಿಯೇ ಇಲ್ಲ ಎಂದು ರೈತರು ದೂರಿದ್ದು, ಇದುವರೆಗೂ ದಾವಣಗೆರೆ ಎಪಿಎಂಸಿಯಲ್ಲಿರುವ ನೋಂದಣಿ ಕೇಂದ್ರದಲ್ಲಿ 8 ರೈತರು ಹಾಗೂ ಹರಿಹರದಲ್ಲಿ ಇಬ್ಬರು ರೈತರು ಮಾತ್ರವೇ ನೋಂದಾಯಿಸಿಕೊಂಡಿದ್ದಾರೆ.  

ರೈತರು ಹೇಳುವುದೇನು?:

‘ಜಿಲ್ಲೆಯಲ್ಲಿ ಭತ್ತದ ಕಟಾವು ಇನ್ನಷ್ಟೇ ಆರಂಭವಾಗಬೇಕಿದೆ. ಜುಲೈನಲ್ಲಿ ಬಿತ್ತನೆಯಾದ ಭತ್ತವು ಇದೀಗ ಕಟಾವಿಗೆ ಬಂದಿದೆ. ನವೆಂಬರ್‌ ಮೊದಲ ವಾರದಿಂದ ಕಟಾವು ಆರಂಭಗೊಳ್ಳುತ್ತಿದೆ. ಭತ್ತ ಖರೀದಿ ನೋಂದಣಿ ಕೇಂದ್ರದ ಬಗ್ಗೆ ಸಮರ್ಪಕ ಮಾಹಿತಿ ನೀಡಿಲ್ಲ. ಈ ಬಗ್ಗೆ ಜಿಲ್ಲಾಡಳಿತವು ರೈತರಿಗೆ ಕರಪತ್ರ ಹಂಚಿ ಮಾಹಿತಿ ನೀಡಿಲ್ಲ. ರೈತರು ಭತ್ತ ಕಟಾವು ಮಾಡುವ ಸಿದ್ಧತೆಯಲ್ಲಿದ್ದು, ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ’ ಎನ್ನುತ್ತಾರೆ ಭತ್ತ ಬೆಳೆಗಾರ ಆರನೇಕಲ್ಲು ಗ್ರಾಮದ ವಿಜಯಕುಮಾರ್. 

‘ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆಯ (ಫ್ರೂಟ್ಸ್‌) ಗುರುತಿನ ಸಂಖ್ಯೆ ನೀಡುವ ಮೂಲಕ ಭತ್ತ ಖರೀದಿಗೆ ನೋಂದಣಿ ಮಾಡಿಸಬಹುದು ಎಂದು ಟಾಸ್ಕ್‌ಫೋರ್ಸ್‌ ಸಭೆಯಲ್ಲಿ ಜಿಲ್ಲಾಧಿಕಾರಿ ಹೇಳಿದ್ದರು. ಆದರೆ, ಖರೀದಿ ಕೇಂದ್ರಕ್ಕೆ ತೆರಳಿದರೆ ಅಲ್ಲಿನ ಸಿಬ್ಬಂದಿಯು ಆಧಾರ್‌ ಕಾರ್ಡ್‌, ಪಹಣಿ ಹಾಗೂ ಬ್ಯಾಂಕ್‌ ಪಾಸ್‌ಬುಕ್‌ ಜೆರಾಕ್ಸ್ ಪ್ರತಿಯನ್ನು ಕೇಳುತ್ತಾರೆ. ಜೊತೆಗೆ ಜಮೀನು ಮಾಲೀಕನ ಬೆರಳಚ್ಚು (ಥಂಬ್‌) ಬೇಕು ಎನ್ನುತ್ತಿದ್ದಾರೆ. ಈ ಕಾರಣಕ್ಕೆ ಹೆಚ್ಚಿನ ರೈತರಿಗೆ ನೋಂದಣಿ ಮಾಡಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಹೇಳುತ್ತಾರೆ. 

ಪ್ರಚಾರದ ಕೊರತೆ ಇಲ್ಲ: 

ರೈತರ ದೂರಿನ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಅವರು ಬೇರೆಯದ್ದೇ ಕಾರಣ ನೀಡುತ್ತಾರೆ. ‘ಈ ಬಾರಿ ಮುಕ್ತ ಮಾರುಕಟ್ಟೆಯಲ್ಲಿ ಭತ್ತಕ್ಕೆ ಉತ್ತಮ ದರ ದೊರೆಯುತ್ತಿದೆ. ಹೀಗಾಗಿಯೇ ರೈತರು ನೋಂದಣಿ ಕೇಂದ್ರದತ್ತ ಹೆಜ್ಜೆ ಹಾಕುತ್ತಿಲ್ಲ. ರೈತರಿಗೆ ಮಾಹಿತಿಯ ಕೊರತೆ ಇಲ್ಲ. ಇಲಾಖೆಯಿಂದ ಸಾಕಷ್ಟು ಪ್ರಚಾರ ನಡೆಸಿದ್ದೇವೆ. ರಾಗಿ ಖರೀದಿಗೆ ಹೆಚ್ಚಿನ ರೈತರು ನೋಂದಾಯಿಸಿಕೊಂಡಿದ್ದಾರೆ. ಭತ್ತಕ್ಕೆ ಮುಕ್ತ ಮಾರುಕಟ್ಟೆಯಲ್ಲಿ ಉತ್ತಮ ದರ ಇರುವ ಕಾರಣ ಹೆಚ್ಚಿನ ರೈತರು ನೋಂದಾಯಿಸಲು ಆಸಕ್ತಿ ತೋರದಿರುವ ಸಾಧ್ಯತೆ ಇದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್‌ ಕೆ.ಪಿ. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

ರೈತರಿಗೆ ಹೊರೆ: 

‘ಎಂಎಸ್‌ಪಿ ದರದಲ್ಲಿ ಖರೀದಿಸಿದ ಭತ್ತವನ್ನು ಗೋಣಿಚೀಲದಲ್ಲೇ ಖರೀದಿ ಕೇಂದ್ರಕ್ಕೆ ಒಯ್ಯಬೇಕು. ಸರ್ಕಾರ ಪ್ರತೀ ಗೋಣಿಚೀಲಕ್ಕೆ ₹ 3 ದರ ನಿಗದಿ ಪಡಿಸಿದೆ. ಆದರೆ, ಮಾರುಕಟ್ಟೆಯಲ್ಲಿ ಗೋಣಿಚೀಲದ ದರ ಜಾಸ್ತಿ ಇದೆ. ಇದರ ಜೊತೆಗೆ ಲೋಡ್‌, ಅನ್‌ಲೋಡ್‌ ಹಾಗೂ ಸಾಗಣೆ ವೆಚ್ಚವೂ ರೈತರಿಗೆ ಹೊರೆಯಾಗುತ್ತಿದೆ. ನೋಂದಣಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದರೆ, ಮುಕ್ತ ಮಾರುಕಟ್ಟೆಯಲ್ಲಿ ಭತ್ತದ ದರ ಕುಸಿತವಾಗುವ ಅಪಾಯ ಇದೆ’ ಎಂದು ರೈತ ಬಿ.ಎಂ.ಸತೀಶ್ ಆತಂಕ ವ್ಯಕ್ತಪಡಿಸಿದರು.

ಗ್ರಾಮಗಳಲ್ಲೇ ವ್ಯಾಪಾರಿಗಳಿಗೆ ಮಾರಾಟ

ಕ್ವಿಂಟಲ್‌ ಭತ್ತಕ್ಕೆ ಸರ್ಕಾರ ₹ 2389 ಎಂಎಸ್‌ಪಿ ದರ ನಿಗದಿಪಡಿಸಿದೆ. ಹೆಚ್ಚು ಕಡಿಮೆ ಅಷ್ಟೇ ದರ ಮುಕ್ತ ಮಾರುಕಟ್ಟೆಯಲ್ಲಿ ರೈತರಿಗೆ ದೊರೆಯುತ್ತಿದೆ. ಗ್ರಾಮದಲ್ಲೇ ರೈಸ್‌ಮಿಲ್‌ನವರು ವ್ಯಾಪಾರಿಗಳು ರೈತರಿಂದ ನೇರವಾಗಿ ಭತ್ತವನ್ನು ಖರೀದಿಸುತ್ತಿದ್ದಾರೆ.  ‘ರೈಸ್‌ಮಿಲ್‌ನವರು ₹ 2150 ರಿಂದ ₹ 2250ರ ದರದಂತೆ ಗ್ರಾಮದಲ್ಲೇ ಭತ್ತ ಖರೀದಿಸುತ್ತಿದ್ದಾರೆ. ಎಂಎಸ್‌ಪಿ ಖರೀದಿ ಕೇಂದ್ರಕ್ಕೆ ಭತ್ತ ಮಾರಾಟ ಮಾಡುವುದು ಕಷ್ಟಕರವಾಗಿದೆ. ನ.1ರಿಂದ ಖರೀದಿ ಪ್ರಕ್ರಿಯೆ ಆರಂಭಿಸಿದರೂ ಕಟಾವು ಮಾಡಿದ ಬಳಿಕ ಭತ್ತವನ್ನು ಕಾಪಾಡಿಕೊಳ್ಳುವುದು ಅಸಾಧ್ಯ. ಮಳೆ ಬಂದರೆ ಇರುವ ಫಸಲನ್ನೂ ಕಳೆದುಕೊಳ್ಳಬೇಕಾಗುತ್ತದೆ. ಜಮೀನಿನಲ್ಲೇ ವ್ಯಾಪಾರಿಗಳಿಗೆ ಭತ್ತ ಮಾರಾಟ ಮಾಡುವುದರಿಂದ ಹಣವೂ ಬೇಗ ಕೈಸೇರುತ್ತದೆ’ ಎಂದು ಆರನೇಕಲ್ಲು ಗ್ರಾಮದ ರೈತ ಡಿ.ಬಿ.ರವಿಕುಮಾರ್ ಹೇಳಿದರು.

ಎಪಿಎಂಸಿಯಲ್ಲಿ ₹2250 ದರ

ದಾವಣಗೆರೆ ಎಪಿಎಂಸಿಯಲ್ಲಿ ಭತ್ತವು ₹ 1900 ರಿಂದ ₹ 2250ರ ವರೆಗೆ ಮಾರಾಟವಾಗಿದೆ. ಮಂಗಳವಾರ 15 ಕ್ವಿಂಟಲ್‌ ಮಾತ್ರ ಆವಕವಾಗಿದೆ. ನವೆಂಬರ್ ಮೊದಲ ವಾರದಿಂದ ಆವಕ ಪ್ರಮಾಣ ಹೆಚ್ಚಲಿದೆ ಎಂದು ಎಪಿಎಂಸಿಯ ಸಹಾಯಕ ನಿರ್ದೇಶಕ ಜೆ.ಪ್ರಭು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.