ADVERTISEMENT

ಆಕರ್ಷಣೆ ಕಳೆದುಕೊಂಡ ಆರ್‌ಟಿಇ ಸೀಟು

ಜಿಲ್ಲೆಯ 1,052 ಸೀಟಿಗೆ ಬಂದಿದ್ದು ಕೇವಲ 818 ಅರ್ಜಿಗಳು!

ವಿನಾಯಕ ಭಟ್ಟ‌
Published 29 ಏಪ್ರಿಲ್ 2019, 11:02 IST
Last Updated 29 ಏಪ್ರಿಲ್ 2019, 11:02 IST
ಸಿ.ಆರ್‌. ಪರಮೇಶ್ವರಪ್ಪ
ಸಿ.ಆರ್‌. ಪರಮೇಶ್ವರಪ್ಪ   

ದಾವಣಗೆರೆ: ಶಿಕ್ಷಣ ಹಕ್ಕು ಕಾಯ್ದೆಗೆ ರಾಜ್ಯದಲ್ಲಿ ತಿದ್ದುಪಡಿ ತಂದಿರುವ ಪರಿಣಾಮ ಜಿಲ್ಲೆಯಲ್ಲಿ ಆರ್‌.ಟಿ.ಇ ಅಡಿ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಈ ವರ್ಷ ಪೋಷಕರು ನಿರಾಸಕ್ತಿ ತೋರಿಸಿದ್ದಾರೆ. 2019–20ನೇ ಸಾಲಿಗೆ ಜಿಲ್ಲೆಯಲ್ಲಿ ಆರ್‌ಟಿಇ ಅಡಿ 1,052 ಸೀಟು ಹಂಚಿಕೆಯಾಗಿದ್ದು, ಕೊನೆಯ ದಿನವಾದ ಏಪ್ರಿಲ್‌ 25ರವರೆಗೆ ಕೇವಲ 818 ಅರ್ಜಿಗಳು ಮಾತ್ರ ಬಂದಿರುವುದೇ ಇದಕ್ಕೆ ಸಾಕ್ಷಿ.

ಶಿಕ್ಷಣ ಹಕ್ಕು ಕಾಯ್ದೆ (ಆರ್‌.ಟಿ.ಇ) ಅಡಿ ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೇರಿಸಲು ಪೋಷಕರು ಕಳೆದ ವರ್ಷದವರೆಗೂ ತೀವ್ರ ಪೈಪೋಟಿಗೆ ಇಳಿಯುತ್ತಿದ್ದರು. ಬಡವರಿಗೆ ಆರ್‌ಟಿಇ ಆಸರೆಯಾಗಿತ್ತು. ಕಾನೂನು ಬದಲಾಯಿಸಿದ ಪರಿಣಾಮ ಖಾಸಗಿ ಶಾಲೆಗಳ ಸೀಟು ಕಡಿತಗೊಂಡವು. ಇದರ ಜೊತೆಯಲ್ಲೇ ಆರ್‌ಟಿಇ ಜನಾಕರ್ಷಣೆಯನ್ನೂ ಕಳೆದುಕೊಂಡಿತು.

2018–19ನೇ ಸಾಲಿಗೆ ಜಿಲ್ಲೆಯಲ್ಲಿ ಆರ್‌.ಟಿ.ಇ ಅಡಿ ಒಟ್ಟು 5,287 ಸೀಟು ನಿಗದಿಗೊಂಡಿದ್ದವು. ಇದರಲ್ಲಿ ಲಾಟರಿ ಮೂಲಕ ಮೂರು ಸುತ್ತಿನಲ್ಲಿ ಒಟ್ಟು 4,746 ಸೀಟುಗಳನ್ನು ಹಂಚಿಕೆ ಮಾಡಲಾಗಿತ್ತು. ಅದರ ಪೈಕಿ 4,050 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದುಕೊಂಡಿದ್ದರು.

ADVERTISEMENT

ಈ ಬಾರಿ ದಾವಣಗೆರೆ ದಕ್ಷಿಣ ವಲಯಕ್ಕೆ 366 ಸೀಟುಗಳು ಹಂಚಿಕೆಯಾಗಿದ್ದು, 599 ಅರ್ಜಿಗಳು ಬಂದಿವೆ. ಇದನ್ನು ಹೊರತುಪಡಿಸಿದರೆ ಉಳಿದ ಏಳು ವಲಯದಗಳಲ್ಲೂ ನಿಗದಿತ ಸೀಟುಗಳಿಗಿಂತ ಅರ್ಧಕ್ಕಿಂತಲೂ ಕಡಿಮೆ ಅರ್ಜಿಗಳು ಬಂದಿವೆ.

ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರುವಂತೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಆರ್‌.ಟಿ.ಇ. ಕಾಯ್ದೆಯನ್ನು ತಿದ್ದಪಡಿ ಮಾಡಿದೆ. ಇದರ ಪ್ರಕಾರ ಮೂರು ಯುನಿಟ್‌ಗಳನ್ನಾಗಿ ವಿಂಡಗಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಂದಾಯ ಗ್ರಾಮ ಒಂದು ಯುನಿಟ್‌; ಪಟ್ಟಣ ಹಾಗೂ ನಗರಗಳಲ್ಲಿ ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆಗಳನ್ನೇ ಒಂದು ಯುನಿಟ್‌ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್‌ಗಳನ್ನೂ ಪ್ರತ್ಯೇಕ ಯುನಿಟ್‌ಗಳೆಂದು ಪರಿಗಣಿಸಲಾಗಿದೆ.

ಈ ವರ್ಷದಿಂದ ಯುನಿಟ್‌ ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆ ಇದ್ದರೆ ಖಾಸಗಿ ಶಾಲೆಗಳಲ್ಲಿ ಆರ್‌.ಟಿ.ಇ. ಸೀಟು ಲಭ್ಯವಾಗುವುದಿಲ್ಲ. ಅನುದಾನಿತ ಶಾಲೆಗೆ ಸೀಟು ಹಂಚಿಕೆ ಮಾಡಿ, ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಯುನಿಟ್‌ ವ್ಯಾಪ್ತಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆ ಎರಡೂ ಇದ್ದರೂ ಅನುದಾನಿತ ಶಾಲೆಗೆ ಆರ್‌ಟಿಇ ಸೀಟು ಹಂಚಿಕೆಯಾಗುವುದಿಲ್ಲ. ಅನುದಾನಿತ ಮತ್ತು ಖಾಸಗಿ ಶಾಲೆ ಮಾತ್ರ ಇದ್ದರೆ ಅನುದಾನಿತ ಶಾಲೆಯನ್ನು ಮಾತ್ರ ಆರ್‌ಟಿಇಗೆ ಪರಿಗಣಿಸಲಾಗುತ್ತದೆ. ಸರ್ಕಾರಿ ಹಾಗೂ ಅನುದಾನಿತ ಎರಡೂ ಶಾಲೆ ಇಲ್ಲದಿದ್ದರೆ ಮಾತ್ರ ಅಲ್ಲಿನ ಖಾಸಗಿ ಶಾಲೆಯಲ್ಲಿ ಆರ್‌ಟಿಇ ಅಡಿ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದರ ಪರಿಣಾಮ ಬಹುತೇಕ ಖಾಸಗಿ ಶಾಲೆಗಳ ಆರ್‌ಟಿಇ ಸೀಟಿಗೆ ಕತ್ತರಿ ಬಿದ್ದಿದೆ. ಈ ಕಾಯ್ದೆಯ ಪರಿಣಾಮ ಜಿಲ್ಲೆಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಆರ್‌ಟಿಇ ಸೀಟು ಕಡಿಮೆಯಾಗಿವೆ. ಆರ್‌ಟಿಇ ಸೀಟುಗಳಲ್ಲಿ ಹೆಚ್ಚಿನವು ಅನುದಾನಿತ ಶಾಲೆಗಳದ್ದೇ ಆಗಿವೆ. ಹೀಗಾಗಿಯೇ ಪೋಷಕರು ಆರ್‌ಟಿಇ ಅಡಿ ಪ್ರವೇಶ ಪಡೆಯಲು ಈ ಬಾರಿ ಉತ್ಸಾಹ ತೋರಿಸಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಆರ್‌ಟಿಇ ಸೀಟು ಹಂಚಿಕೆ ವಿವರ

ವಲಯ–ಸೀಟು ಹಂಚಿಕೆ–ಬಂದ ಅರ್ಜಿ

ಚನ್ನಗಿರಿ–128–26

ದಾವಣಗೆರೆ (ಉ)–204–84

ದಾವಣಗೆರೆ (ದ)–366–599

ಹರಪನಹಳ್ಳಿ–64–15

ಹರಿಹರ–155–69

ಹೊನ್ನಾಳಿ–110–22

ಜಗಳೂರು–25–03

ಒಟ್ಟು–1,052–818

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.