ADVERTISEMENT

ಹೊನ್ನಾಳಿ: ತುಂಗಭದ್ರಾ ನದಿಯಲ್ಲಿ ಹಂದಿಗಳ ಮೃತದೇಹ, ರೋಗ ಭೀತಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 14:35 IST
Last Updated 9 ಆಗಸ್ಟ್ 2020, 14:35 IST
ತುಂಗಭದ್ರಾ ನದಿ ದಡದಲ್ಲಿ ಮಸೀದಿ ಸಮೀಪದಲ್ಲಿ ಕಸದ ರಾಸಿಯನ್ನು ಕಾಣಬಹುದು.
ತುಂಗಭದ್ರಾ ನದಿ ದಡದಲ್ಲಿ ಮಸೀದಿ ಸಮೀಪದಲ್ಲಿ ಕಸದ ರಾಸಿಯನ್ನು ಕಾಣಬಹುದು.   

ಹೊನ್ನಾಳಿ: ಪಟ್ಟಣದಿಂದ ಒಂದು ಕಿ.ಮೀ. ದೂರದಲ್ಲಿರುವ ದೇವನಾಯಕನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ತುಂಗಭದ್ರಾ ನದಿಯಲ್ಲಿ ಎರಡು ದಿನಗಳಿಂದ ಹಂದಿಗಳ ಮೃತದೇಹ ಪತ್ತೆಯಾಗಿವೆ.

ಸತ್ತ ಹಂದಿಗಳನ್ನು ನದಿಗೆ ಎಸೆಯುವ ಮೂಲಕ ಗ್ರಾಮ ಪಂಚಾಯಿತಿ ಸಿಬ್ಬಂದಿ ಕರ್ತವ್ಯ ಮರೆತಿದ್ದಾರೆ ಎಂದು ಈ ಭಾಗದ ನಿವಾಸಿಗಳು ದೂರಿದ್ದಾರೆ.ಭಾನುವಾರವೂ ಹಂದಿಗಳ ಮೃತದೇಹ ಎಲ್ಲೆಂದರಲ್ಲಿ ಕಂಡುಬಂದಿದೆ.

ಕೊರೊನಾ ಸೋಂಕಿಗೆ ಇಡೀ ಜಗತ್ತು ತಲ್ಲಣಗೊಂಡಿದೆ. ಇಂತಹ ಸಮಯದಲ್ಲಿ ಸತ್ತ ಹಂದಿಗಳ ಮೃತದೇಹ ಪತ್ತೆಯಾಗಿರುವುದು ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.ಸತ್ತು ಬಿದ್ದಿರುವ ಹಂದಿಗಳು ನದಿಯಲ್ಲಿನ ಮುಳ್ಳುಕಂಟಿಗಳಲ್ಲಿ ಸಿಕ್ಕಿ ಬಿದ್ದಿದ್ದ ವಿಡಿಯೊ ಹರಿದಾಡಿದ್ದು, ನದಿಪಾತ್ರದ ನಿವಾಸಿಗಳು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದಾರೆ.

ADVERTISEMENT

‘ಈ ಭಾಗದ ನಿವಾಸಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಸ್ಯಾನಿಟೈಸ್‌ ಮಾಡಲಾಗಿತ್ತು. ಇದರಿಂದ ಹಂದಿಗಳು ಸತ್ತಿರಬಹುದು. ಅದನ್ನು ನದಿಗೆ ಎಸೆದಿರುವ ಸಾಧ್ಯತೆ ಇದೆ’ ಎಂದುನಿವಾಸಿ ಜಫ್ರುಲ್ಲಾ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕಡದಕಟ್ಟೆ ಗ್ರಾಮ ಪಂಚಾಯಿತಿ ಪಿಡಿಒ ಅರುಣ್, ‘ನಿವಾಸಿಗಳು ತಮ್ಮ ಮನೆಯ ಕಸವನ್ನು ನದಿ ಸಮೀಪಕ್ಕೆ ತಂದು ಹಾಕಿದ್ದು, ಕಸದಲ್ಲಿ ವಿಷ ಬೆರೆಸಿರುವ ಅನುಮಾನವಿದೆ. ಇದರಿಂದ ಹಂದಿಗಳು ಸತ್ತಿರಬಹುದು.ಸತ್ತ ಕೆಲ ಹಂದಿಗಳನ್ನು ಹೊರಕ್ಕೆ ಸಾಗಿಸಲಾಗಿದೆ. ಬೀದಿಯಲ್ಲಿನ ತ್ಯಾಜ್ಯ ವಿಲೇವಾರಿ ಮಾಡಲಾಗಿದೆ. ಸ್ಯಾನಿಟೈಸ್‌ ಕೂಡ ಮಾಡಲಾಗಿದೆ. ನಿವಾಸಿಗಳು ಆತಂಕ ಪಡುವ ಅಗತ್ಯವಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಇಒ ಗಂಗಾಧರಮೂರ್ತಿ, ‘ಮಸೀದಿ ಪಕ್ಕದಲ್ಲಿ ಹಾಕಿರುವ ಕಸಕ್ಕೆ ಯಾರೋ ವಿಷ ಬೆರೆಸಿರುವ ಸಾಧ್ಯತೆ ಇದೆ. ಇದನ್ನು ತಿಂದು ಹಂದಿಗಳು ಸತ್ತಿರಬಹುದು. ಹಂದಿಗಳ ಮೃತದೇಹವನ್ನು ಊರಿನ ಹೊರವಲಯದಲ್ಲಿ ಗುಂಡಿ ತೆಗೆದು ಹೂಳಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.