ADVERTISEMENT

ದಾವಣಗೆರೆ | ಪ್ಲಾಸ್ಟಿಕ್‌ ಕರಗಲು ಬೇಕು 300 ವರ್ಷ: ವಿನೋದ್ ಬೋದನ್‍ಕರ್

ಪುಣೆಯ ಪರಿಸರ ತಜ್ಞ ವಿನೋದ್ ಬೋದನ್‍ಕರ್ ಕಳವಳ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 7:11 IST
Last Updated 19 ಜುಲೈ 2025, 7:11 IST
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ಲಾಸ್ಟಿಕ್ ನಿರ್ವಹಣೆ ಕುರಿತ ವೆಬಿನಾರ್‌ನಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಗಿಟ್ಟೆ ಮಾಧವ್ ವಿಠ್ಠಲರಾವ್ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ಲಾಸ್ಟಿಕ್ ನಿರ್ವಹಣೆ ಕುರಿತ ವೆಬಿನಾರ್‌ನಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಗಿಟ್ಟೆ ಮಾಧವ್ ವಿಠ್ಠಲರಾವ್ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ನೀರಿನ ಪ್ಲಾಸ್ಟಿಕ್‌ ಬಾಟಲಿಯೊಂದು ಮಣ್ಣಿನಲ್ಲಿ ಸಂಪೂರ್ಣವಾಗಿ ಕರಗಲು 300 ವರ್ಷ ಬೇಕು. ಮುಚ್ಚಳ ಕರಗಲು 800 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಪ್ಲಾಸ್ಟಿಕ್ ಬಳಕೆಯನ್ನು ಗಣನೀಯವಾಗಿ ತಗ್ಗಿಸುವ ತುರ್ತು ಎದುರಾಗಿದೆ’ ಎಂದು ಪುಣೆಯ ಪರಿಸರ ತಜ್ಞ ವಿನೋದ್ ಬೋದನ್‍ಕರ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತದ ವತಿಯಿಂದ ಸ್ಥಳೀಯ ಸಂಸ್ಥೆಗಳು, ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಸಂಘ– ಸಂಸ್ಥೆಗಳ ಪದಾಧಿಕಾರಿಗಳಿಗೆ ಶುಕ್ರವಾರ ಏರ್ಪಡಿಸಿದ್ದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

‘ಜಗತ್ತಿನಲ್ಲಿ ಶೇ 29ರಷ್ಟು ಮಾತ್ರ ಭೂಮಿ ಇದೆ. ಶೇ 71 ರಷ್ಟು ನೀರಿನಿಂದ ಆವೃತ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ನಗರೀಕರಣ ಹೆಚ್ಚಾಗಿ ಪ್ಲಾಸ್ಟಿಕ್ ಬಳಕೆ ವ್ಯಾಪಕವಾಗಿದೆ. ಸಾರ್ವಜನಿಕರು ಪ್ಲಾಸ್ಟಿಕ್ ಬಳಸಿ ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಇದು ನದಿಗಳ ಮೂಲಕ ಸಮುದ್ರ ಸೇರಿ ಹೊಸದೊಂದು ಸಮಸ್ಯೆ ಸೃಷ್ಟಿಸುತ್ತಿದೆ. ಇದರಿಂದ ಜಲಚರ ಸಂತತಿಯೂ ನಾಶವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಸಾಗರ ಸೇರುವ ಪ್ಲಾಸ್ಟಿಕ್‌ 2 ಅಥವಾ 3 ಅಡಿ ಮುಚ್ಚಿಕೊಂಡಾಗ ಸೂರ್ಯನ ಕಿರಣಗಳು ನೇರವಾಗಿ ನೀರಿಗೆ ತಾಗುವುದಿಲ್ಲ. ಇದರಿಂದ ನೀರು ಆವಿಯಾಗುವ ಸಮಸ್ಯೆ ಸೃಷ್ಟಿಯಾಗುತ್ತದೆ. ಮೋಡಗಳ ರಚನೆಯಾಗಿ ಮಳೆ ಕಡಿಮೆಯಾಗುವ ಸಾಧ್ಯತೆ ಇದೆ. ಆಮ್ಲಜನಕದ ಉತ್ಪಾದನೆ ಕೊರತೆಯೂ ಉಂಟಾಗಲಿದೆ’ ಎಂದರು.

‘ಪ್ಲಾಸ್ಟಿಕ್ ಬಳಕೆಯನ್ನು ಗಣನೀಯವಾಗಿ ತಗ್ಗಿಸಬೇಕು. ಬಳಕೆಯಾದ ಪ್ಲಾಸ್ಟಿಕ್ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಇದಕ್ಕೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ ಪ್ಲಾಸ್ಟಿಕ್ ಸಂಗ್ರಹಕ್ಕೆ ಒತ್ತು ನೀಡಬೇಕಿದೆ. ಈ ಮೂಲಕ ಪಾಲಕರಿಗೆ ಮನವರಿಕೆ ಮಾಡುವ ಅಗತ್ಯವಿದೆ. ವಿದ್ಯಾರ್ಥಿಗಳು, ಪಾಲಕರನ್ನು ಒಳಗೊಂಡ ತಂಡವನ್ನು ರಚಿಸಬೇಕಿದೆ’ ಎಂದು ಹೇಳಿದರು.

‘ಧೂಡಾ’ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿಟ್ಟೆ ಮಾಧವ ವಿಠ್ಠಲರಾವ್, ರೈತ ಮುಖಂಡರಾದ ತೇಜಸ್ವಿ ಪಟೇಲ್, ಬಲ್ಲೂರು ರವಿಕುಮಾರ್ ಹಾಜರಿದ್ದರು.

ಸಮುದ್ರದ ನೀರಿನ ಆವಿ ತಡೆಹಿಡಿಯುವ ಪ್ಲಾಸ್ಟಿಕ್‌ ಕಡಿಮೆ ಆಗಲಿದೆ ಆಮ್ಲಜನಕ ಉತ್ಪಾದನೆ ಪ್ಲಾಸ್ಟಿಕ್‌ ವೈಜ್ಞಾನಿಕ ವಿಲೇವಾರಿ ಅತ್ಯಗತ್ಯ

ಪ್ಲಾಸ್ಟಿಕ್‌ ಕೊನೆಗಾಣಿಸಲು ಒಬ್ಬಿಬ್ಬರಿಂದ ಸಾಧ್ಯವಿಲ್ಲ. ಇದು ಜನಾಂದೋಲನದ ರೂಪದಲ್ಲಿ ನಡೆಯಬೇಕಿದೆ. ಅಧಿಕಾರಿಗಳು ತಂಡೋಪಾದಿಯಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ
ಜಿ.ಎಂ.ಗಂಗಾಧರಸ್ವಾಮಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.