ADVERTISEMENT

ಪಿಎಲ್‍ಡಿ ಬ್ಯಾಂಕ್ ಚುನಾವಣೆ : ಕಾಂಗ್ರೆಸ್‍ಗೆ ಬಹುಮತ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 9:05 IST
Last Updated 16 ಫೆಬ್ರುವರಿ 2020, 9:05 IST
ಹರಪನಹಳ್ಳಿ ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದು, ಮುಖಂಡರು ಸಂಭ್ರಮ ಆಚರಿಸಿದರು.
ಹರಪನಹಳ್ಳಿ ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದು, ಮುಖಂಡರು ಸಂಭ್ರಮ ಆಚರಿಸಿದರು.   

ಹರಪನಹಳ್ಳಿ: ತಾಲ್ಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಬ್ಯಾಂಕ್‍ನ 14 ಕ್ಷೇತ್ರಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತರು ಬಹುಮತ ಪಡೆದಿದ್ದಾರೆ.

ಬಿಜೆಪಿ ಬೆಂಬಲಿಗರಿಗೆ ಹಿನ್ನೆಡೆ ಆಗಿದ್ದು, ಮತ್ತಿಹಳ್ಳಿ ಕ್ಷೇತ್ರದಲ್ಲಿ ಮಾತ್ರ ಗೆಲುವು ಪಡೆದಿದೆ. ಕಾಂಗ್ರೆಸ್ ಬಹುಮತ ಸಾಧಿಸುವಲ್ಲಿ ಯಶಸ್ವಿಯಾಗಿದೆ. 14 ಕ್ಷೇತ್ರಗಳ ಪೈಕಿ ಬಾಗಳಿ ಕ್ಷೇತ್ರ- ಆರ್. ಶಿವಕುಮಾರಗೌಡ, ನೀಲಗುಂದ-ಬೇಲೂರು ಸಿದ್ದೇಶ ಮತ್ತು ಲಕ್ಷ್ಮೀಪುರದಿಂದ ಪಿ.ಎಲ್‍.ಪೋಮ್ಯನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಳಿದ 11 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 1077 ಮತಗಳು ಚಲಾವಣೆಗೊಂಡಿವೆ. ಬೆಳಿಗ್ಗೆಯಿಂದ ಸಂಜೆವರೆಗೂ ನಡೆದ ಮತದಾನ ಮತ್ತು ಮತ ಎಣಿಕೆ ಪ್ರಕ್ರಿಯೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಕಣದಲ್ಲಿದ್ದ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದ ದೃಶ್ಯಗಳು ಕಂಡುಬಂದವು. 42 ಜನ ಕಣದಲ್ಲಿದ್ದರು.

ADVERTISEMENT

ಹರಪನಹಳ್ಳಿ-1ನೇ ಕ್ಷೇತ್ರ – ಹೊನ್ನಪ್ಪರ ವಿಶಾಲಾಕ್ಷಮ್ಮ, ಹರಪನಹಳ್ಳಿ-2ನೇ ಕ್ಷೇತ್ರ- ಪಿ.ಬಿ. ಗೌಡ, ಚಿಗಟೇರಿ- ಸಾಬಳ್ಳಿ ಜಂಬಣ್ಣ, ಮತ್ತಿಹಳ್ಳಿ-ಎಚ್.ಸುಮಂಗಲ, ತೊಗರಿಕಟ್ಟಿ–ಟಿ.ಜಗದೀಶ, ಹಲುವಾಗಲು-ಅಜ್ಜೋಳ ಬಸವರಾಜಪ್ಪ, ತೆಲಿಗಿ-ಕರಣಂ ಸಿದ್ದಲಿಂಗಪ್ಪ, ಕಂಚಿಕೇರಿ- ರೆಡ್ಡಿ ಶಾಂತಕುಮಾರ, ಅರಸಿಕೇರಿ-ಪಿ.ಕೆ.ಮಹಾದೇವಪ್ಪ, ಉಚ್ಚಂಗಿದುರ್ಗ- ಭರ್ಮಪ್ಪ ರಾಜಕುಮಾರ, ಸಾಲಪಡೆಯದ ಕ್ಷೇತ್ರದಿಂದ ಎಲ್‍.ದಾದಾಪೀರ್ ಗೆಲುವು ಸಾಧಿಸಿದ್ದಾರೆ.

ಅಭ್ಯರ್ಥಿಗಳನ್ನು ಮುಖಂಡರು, ಬೆಂಬಲಿಗರು ಅಬಿನಂಧಿಸಿದರು. ಚುನಾವಣೆ ಅಧಿಕಾರಿಗಳಾಗಿ ತಹಶೀಲ್ದಾರ್‌ ಈಶ್ವರಕುಮಾರ, ಸಹಾಯಕ ಚುನಾವಣೆ ಅಧಿಕಾರಿಯಾಗಿ ಉದಯಶಂಕರ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.