
ದಾವಣಗೆರೆ: ದರೋಡೆಯಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಪೊಲೀಸರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತಿದೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಸೇವೆಯಿಂದ ವಜಾ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
‘ಬೆಂಗಳೂರಿನ ₹ 7.11 ಕೋಟಿ ದರೋಡೆ ಪ್ರಕರಣ ಹಾಗೂ ಮಾಲೂರಿನ ಪ್ರಕರಣದಲ್ಲಿ ಇಬ್ಬರು ಪೊಲೀಸರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ದಾವಣಗೆರೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೊಬೇಷನರಿ ಪಿಎಸ್‌ಐ ಸೇವೆಯಿಂದ ವಜಾಗೊಂಡಿದ್ದಾರೆ. ಮತ್ತೊಬ್ಬರನ್ನು ಅಮಾನತು ಮಾಡಲಾಗಿದ್ದು, ವರದಿ ಸಿಕ್ಕ ತಕ್ಷಣ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಭಾನುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
‘ಪೊಲೀಸ್ ಇಲಾಖೆಗೆ ಶಿಸ್ತು ಮುಖ್ಯ. ದರೋಡೆಯಂತಹ ಪ್ರಕರಣದಲ್ಲಿ ಪೊಲೀಸರು ಭಾಗಿಯಾಗಿದ್ದು ಖಚಿತವಾದರೆ ತಕ್ಷಣ ವಜಾ ಮಾಡಲಾಗುತ್ತದೆ. ಆ ಬಳಿಕ ತನಿಖೆ ನಡೆಸಲಾಗುತ್ತದೆ’ ಎಂದು ಹೇಳಿದರು.
‘ರಾಜ್ಯದಲ್ಲಿ 14,000ಕ್ಕೂ ಅಧಿಕ ಕಾನ್‌ಸ್ಟೆಬಲ್ ಹುದ್ದೆಗಳು ಖಾಲಿ ಇವೆ. ಹಲವು ಕಾರಣಗಳಿಗಾಗಿ ನೇಮಕಾತಿ ಪ್ರಕ್ರಿಯೆ ನಡೆಸಲು ಸಾಧ್ಯವಾಗಿರಲಿಲ್ಲ. ಇದರಲ್ಲಿ 3,600 ಕಾನ್‌ಸ್ಟೆಬಲ್‌ಗಳ ನೇಮಕಕ್ಕೆ ಅವಕಾಶ ಸಿಕ್ಕಿದೆ. 600 ಪಿಎಸ್‌ಐ ನೇಮಕಕ್ಕೆ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ಅಧಿವೇಶನದಲ್ಲಿ ಅವಿಶ್ವಾಸ ಮಂಡಿಸುವ ಹಕ್ಕು ವಿರೋಧ ಪಕ್ಷಕ್ಕಿದೆ. ಬಿಜೆಪಿ ಜೆಡಿಎಸ್ ಇಂತಹ ಪ್ರಯತ್ನಕ್ಕೆ ಮುಂದಾದರೆ ತಕ್ಕ ಉತ್ತರ ನೀಡಲು ಆಡಳಿತ ಪಕ್ಷವೂ ಸಜ್ಜಾಗಿದೆಜಿ.ಪರಮೇಶ್ವರ ಗೃಹ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.