ADVERTISEMENT

ದಾವಣಗೆರೆ | 'ಪೊಲೀಸರಿಂದ 54 ಯೂನಿಟ್‌ ರಕ್ತದಾನ'

​ಪ್ರಜಾವಾಣಿ ವಾರ್ತೆ
Published 13 ಮೇ 2025, 14:26 IST
Last Updated 13 ಮೇ 2025, 14:26 IST
ದಾವಣಗೆರೆಯ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಪೊಲೀಸರು ರಕ್ತದಾನ ಮಾಡಿದರು
ದಾವಣಗೆರೆಯ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಪೊಲೀಸರು ರಕ್ತದಾನ ಮಾಡಿದರು   

ದಾವಣಗೆರೆ: ಇಲ್ಲಿನ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ (ಡಿಎಆರ್‌) ಆವರಣದಲ್ಲಿ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಹಾಗೂ ಪೊಲೀಸ್‌ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ 54 ಯೂನಿಟ್‌ ರಕ್ತವನ್ನು ಸಂಗ್ರಹಿಸಲಾಯಿತು.

ವಿಶೇಷವಾಗಿ ಪೊಲೀಸರಿಗೆ ಆಯೋಜಿಸಿದ್ದ ಈ ಶಿಬಿರಕ್ಕೆ ಪೂರ್ವ ವಲಯದ ಐಜಿಪಿ ಬಿ.ಆರ್.ರವಿಕಾಂತೇಗೌಡ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌, ಚನ್ನಗಿರಿ ಉಪವಿಭಾಗದ ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ ಸ್ಯಾಮ್‌ ವರ್ಗೀಸ್‌ ಸೇರಿ 50ಕ್ಕೂ ಅಧಿಕ ಪೊಲೀಸರು ರಕ್ತದಾನ ನೀಡಿದರು.

‘ಸಾಮಾಜಿಕ ಕಳಕಳಿ ಹೊಂದಿದ ಪೊಲೀಸ್‌ ಇಲಾಖೆ, ರಕ್ತದಾನ ಶಿಬಿರವನ್ನು ಏರ್ಪಡಿಸಿದೆ. ಸ್ವಯಂ ಪ್ರೇರಿತ ರಕ್ತದಾನಕ್ಕೆ ಪೊಲೀಸರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಕಾಯಿಲೆ, ಅಪಘಾತದ ಸಂದರ್ಭದಲ್ಲಿ ರಕ್ತದ ಅಗತ್ಯವಿರುತ್ತದೆ. ಪೊಲೀಸರು ನೀಡುವ ರಕ್ತದಾನ ಜನರಿಗೆ ನೆರವಾಗಲಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಹೇಳಿದರು.

ADVERTISEMENT

ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷ ಡಾ.ಸುರೇಶ್ ಹನಗವಾಡಿ, ಮಹಿಳಾ ವಿಭಾಗದ ಅಧ್ಯಕ್ಷೆ ಡಾ.ಮೀರಾ ಹನಗವಾಡಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳಾದ ವಿಜಯ್‌ ಕುಮಾರ್ ಸಂತೋಷ್, ಜಿ.ಮಂಜುನಾಥ್, ನಗರ ಉಪವಿಭಾಗದ ಡಿವೈಎಸ್‌ಪಿ ಬಿ.ಶರಣಬಸವೇಶ್ವರ, ಡಿಎಆರ್‌ ಡಿವೈಎಸ್‌ಪಿ ಪಿ.ಬಿ.ಪ್ರಕಾಶ್‌, ಸಿಇಎನ್ ಡಿವೈಎಸ್ಪಿ ಪದ್ಮಶ್ರೀ ಗುಂಜಿಕರ್, ನಿವೃತ್ತ ಪೊಲೀಸ್ ಅಧಿಕಾರಿ ರವಿನಾರಾಯಣ್‌ ಹಾಜರಿದ್ದರು.

ಬಂಧಿತರ ಸಂಖ್ಯೆ 20ಕ್ಕೆ ಏರಿಕೆ ರೌಡಿಶೀಟರ್‌ ಸಂತೋಷ್‌ ಅಲಿಯಾಸ್‌ ಕಣುಮನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ 10 ಆರೋಪಿಗಳನ್ನು ಬಂಧಿಸಿದ್ದಾರೆ. ಇದರಿಂದ ಬಂಧಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ‘ಕೊಲೆ ನಡೆದ ಮರುದಿನ 10 ಆರೋಪಿಗಳು ಶರಣಾಗಿದ್ದರು. ತನಿಖಾ ತಂಡ ಮತ್ತೆ 10 ಆರೋಪಿಗಳನ್ನು ಸೋಮವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಇವರನ್ನು ಪೊಲೀಸ್‌ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಸುದ್ದಿಗಾರರಿಗೆ ಮಂಗಳವಾರ ಮಾಹಿತಿ ನೀಡಿದರು. ‘ಚಾವಳಿ ಸಂತೋಷ್‌ ಪ್ರಕರಣದ ಪ್ರಮುಖ ರೂವಾರಿ. ಕಣುಮನ ಜೊತೆಗಿನ ಹಗೆತನದಿಂದ ಈ ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ವೈಯಕ್ತಿಕ ದ್ವೇಷ ಹಣಕಾಸಿನ ವ್ಯವಹಾರದಲ್ಲಿ ಆಗಿರುವ ಅಡಚಣೆಯಿಂದ ಕೊಲೆ ನಡೆದಿದೆ. ಕೊಲೆಗೆ ಷಡ್ಯಂತ್ರ ರೂಪಿಸಿದವರು ಹಾಗೂ ಕೃತ್ಯ ಎಸಗಿದ ಎಲ್ಲರನ್ನೂ ಬಂಧಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.