
ದಾವಣಗೆರೆ: ಎಲೆಕ್ಟ್ರಾನಿಕ್ ಉಪಕರಣಗಳ ಕ್ರಾಂತಿಯ ಯುಗದಲ್ಲಿದ್ದೇವೆ. ಆದರೂ ಶಿಕ್ಷೆಯ ಪ್ರಮಾಣದಲ್ಲಿ ತೀರಾ ಹಿಂದೆ ಬಿದ್ದಿದ್ದೇವೆ. ಅಪರಾಧ ಪ್ರಕರಣಗಳ ತನಿಖೆಯಲ್ಲಿ ಸುಧಾರಣೆ ಆಗಬೇಕಿದೆ ಎಂದು ಅಪರಾಧ ಮತ್ತು ತಾಂತ್ರಿಕ ಸೇವೆಗಳ ವಿಭಾಗದ ಎಡಿಜಿಪಿ ಪಿ. ಹರಿಶೇಖರನ್ ಸಲಹೆ ನೀಡಿದರು.
ಇಲ್ಲಿನ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪರಿವೀಕ್ಷಣಾ ಕವಾಯತು ವೀಕ್ಷಿಸಿ ಅವರು ಮಾತನಾಡಿದರು.
‘ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಹೆಚ್ಚು ನಿಗಾ ಇಡುವ ಅಗತ್ಯವಿದೆ. ಪೋಕ್ಸೊ ಹಾಗೂ ಅತ್ಯಾಚಾರ ಪ್ರಕರಣಗಳ ತನಿಖೆಯ ಸಾಮರ್ಥ್ಯ ಇನ್ನೂ ಹೆಚ್ಚಾಗಬೇಕಿದೆ. ಮಾದಕವಸ್ತು ಜಾಲ, ಸೈಬರ್ ಅಪರಾಧ ತನಿಖೆ ಕೂಡ ಸುಧಾರಣೆ ಕಾಣಬೇಕಿದೆ. ಅಪರಾಧ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ನಿವೃತ್ತ ಪೊಲೀಸ್ ಅಧಿಕಾರಿಗಳು ಸಲಹೆ ನೀಡಬಹುದು’ ಎಂದು ಹೇಳಿದರು.
‘ಜಿಲ್ಲೆಯಲ್ಲಿ ವಾರ್ಷಿಕ 25 ಕೊಲೆ ಪ್ರಕರಣ ವರದಿಯಾಗುತ್ತಿವೆ. ಆದರೆ, ರಾಜ್ಯದಲ್ಲಿ ನಿತ್ಯ ಸಂಭವಿಸುವ ರಸ್ತೆ ಅಪಘಾತದಲ್ಲಿ ಸರಾಸರಿ 20 ಜನರು ಮೃತಪಡುತ್ತಿದ್ದಾರೆ. ಎರಡೂ ರೀತಿಯ ಸಾವಿನ ಪರಿಣಾಮ ಒಂದೇ. ಅಪಘಾತ ನಿಯಂತ್ರಣಕ್ಕೆ ಪೊಲೀಸರು ಗಮನ ಹರಿಸಬೇಕು. ಅಪಘಾತ ಪ್ರಕರಣ ವಿಶ್ಲೇಷಣೆ ಮಾಡಿ ಕ್ರಮ ಕೈಗೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಕವಾಯತು ನೇತೃತ್ವ ವಹಿಸಿದ್ದರು. ಪೂರ್ವ ವಲಯದ ಐಜಿಪಿ ಬಿ.ಆರ್. ರವಿಕಾಂತೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸ್ಯಾಮ್ ವರ್ಗೀಸ್ ಹಾಜರಿದ್ದರು.
ಕವಾಯತು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಗೆ ಸೀಮಿತವಲ್ಲ. ಡಿವೈಎಸ್‌ಪಿ ವಾರದಲ್ಲಿ ಒಮ್ಮೆಯಾದರೂ ಕವಾಯತು ನಡೆಸಬೇಕು. ಪೊಲೀಸರು ಶಿಸ್ತು ಪಾಲನೆ ಮಾಡಬೇಕುಪಿ. ಹರಿಶೇಖರನ್ ಎಡಿಜಿಪಿ ಅಪರಾದ ತಾಂತ್ರಿಕ ಸೇವೆಗಳ ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.