ADVERTISEMENT

ಗೃಹ ಸಚಿವರ ಕಾರ್ಯಕ್ರಮಕ್ಕೆ ಪೊಲೀಸ್ ಸರ್ಪಗಾವಲು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 4:28 IST
Last Updated 3 ಸೆಪ್ಟೆಂಬರ್ 2021, 4:28 IST

ದಾವಣಗೆರೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಸಚಿವರ ದಂಡು ನಗರಕ್ಕೆ ಧಾವಿಸಿದ್ದು, ಎಲ್ಲೆಡೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.

ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಿಂದ ಒಂದು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು ಎನ್ನಲಾಗಿದೆ.

ಆರಂಭದಲ್ಲಿ ಕಾರ್ಯಕ್ರಮ ನಡೆಯುವ ಸ್ಥಳಗಳಾದ ಜಿಎಂಐಟಿ ವಿದ್ಯಾಲಯ, ಗಾಂಧಿಭವನ, ಕೊಂಡಜ್ಜಿಯ ಪೊಲೀಸ್‌ ಪಬ್ಲಿಕ್‌ ವಸತಿ ಶಾಲೆಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಆದರೆ ಕಾರ್ಯಕ್ರಮದಲ್ಲಿ ದಿಢೀರ್ ಬದಲಾವಣೆಯಾಗಿ ಎಲ್ಲಾ ಕಾರ್ಯಕ್ರಮಗಳನ್ನು ಜಿಎಂಐಟಿ ಕ್ಯಾಂಪಸ್‌ನಲ್ಲೇ ವರ್ಚುವಲ್ ಮೂಲಕ ಉದ್ಘಾಟಿಸಲಾಯಿತು.

ADVERTISEMENT

ಜಿಎಂಐಟಿಯಲ್ಲಿ ಹದ್ದಿನ ಕಣ್ಣು: ಎಲ್ಲಾ ಕಾರ್ಯಕ್ರಮಗಳು ಜಿಎಂಐಟಿಯಲ್ಲಿ ನಡೆದಿದ್ದರಿಂದ ಕ್ಯಾಂಪಸ್‌ಗೆ ಹೆಜ್ಜೆ ಹೆಜ್ಜೆಗೂ ಪೊಲೀಸ್ ಬಂದೋಬಸ್ತ್ ಸೌಲಭ್ಯ ಕಲ್ಪಿಸಲಾಗಿತ್ತು. ಮಧ್ಯಾಹ್ನ ಹೆಲಿಕಾಪ್ಟರ್‌ ಮೂಲಕ ಜಿಎಂಐಟಿಗೆ ಬಂದಿಳಿದ ಗೃಹಸಚಿವರಿಗೆ
ಅಲ್ಲಿಂದ ಝಡ್‌ ಪ್ಲಸ್‌ ಭದ್ರತೆ ಕಲ್ಪಿಸಲಾಗಿತ್ತು.

ಜಿಎಂಐಟಿ ವಿಶ್ರಾಂತಿ ಗೃಹದಲ್ಲಿ ಊಟ ಮಾಡಿದ ಬಳಿಕ ಜಿ.ಎಂ. ತಾಂತ್ರಿಕ ವಿದ್ಯಾಲಯದ ವತಿಯಿಂದ ₹ 10.5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಜಿ.ಎಂ. ಕೇಂದ್ರ ಗ್ರಂಥಾಲಯ ಕಟ್ಟಡವನ್ನು ಉದ್ಘಾಟಿಸಿದರು. ಅಲ್ಲಿಂದ ಕಾರಿನಲ್ಲೇ ವೇದಿಕೆಯ ಬಳಿ ಬಂದಾಗ ಭದ್ರತಾ ಸಿಬ್ಬಂದಿ ಸುತ್ತುವರಿದಿದ್ದರು.

ಪತ್ರಕರ್ತರು ಹಾಗೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ತಪಾಸಣೆಗೆ ಒಳಪಡಿಸಿ ಒಳ ಬಿಡಲಾಯಿತು. ಕ್ಯಾಂಪಸ್ ಗೇಟ್‌ನಲ್ಲಿಯೇ ಎಲ್ಲರನ್ನು ತಪಾಸಣೆಗೆ ಒಳಪಡಿಸಲಾಯಿತು.

ಕೊಂಡಜ್ಜಿ ಭಾಗದಲ್ಲಿ ಅರಣ್ಯ ಮತ್ತು ಕೆರೆ ಪ್ರದೇಶವಿದೆ. ಅಲ್ಲದೇ ಭದ್ರತೆ ಕಾರಣದಿಂದ ಒಂದೇ ಕಡೆ ಉದ್ಘಾಟನೆಗೆ ವ್ಯವಸ್ಥೆ ಮಾಡಲಾಗಿದೆಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮಕ್ಕೂ 3 ಗಂಟೆ ಮುಂಚೆ ಜಿಎಂಐಟಿ ವೇದಿಕೆಯ ಸುತ್ತಮುತ್ತ ಶ್ವಾನದಳ ತಂಡ ಪರಿಶೀಲಿಸಿತು. ದಾವಣಗೆರೆ ಪೂರ್ವ ವಲಯ ಐಜಿಪಿ ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಸೇರಿದಂತೆ ಹಲವು ಅಧಿಕಾರಿಗಳು ವೇದಿಕೆಯನ್ನು ಪರಿಶೀಲಿಸಿದರು. ಸಮಾರಂಭ ಆರಂಭವಾಗುವುದಕ್ಕೂ ಮೊದಲು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪೂರ್ವವಲಯ ಐಜಿಪಿ ರವಿ ಎಸ್‌. ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಡಾ. ವಿಜಯ ಮಹಾಂತೇಶ ದಾನಮ್ಮನವರ್ ಅವರು ಬಂದು ಪರಿಶೀಲಿಸಿ ಎಲ್ಲವೂ ಸರಿಯಾದ ಬಳಿಕವೇ ಕಾರ್ಯಕ್ರಮ ಆರಂಭಿಸಲಾಯಿತು.

ವಾಹನಗಳಿಗೆ ಪ್ರವೇಶ ನಿಷೇಧ: ಗೃಹ ಸಚಿವರ ಕಾರ್ಯಕ್ರಮಕ್ಕೆ ವಿಐಪಿ ಹಾಗೂ ಪತ್ರಕರ್ತರ ವಾಹನಗಳಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು. ಉಳಿದವರು ವಾಹನಗಳನ್ನು ಕ್ಯಾಂಪಸ್‌ನ ಹೊರಗಡೆ ಪಾರ್ಕ್ ಮಾಡಿ ನಡೆದುಕೊಂಡು ಬರಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.