ADVERTISEMENT

ಮೀಸಲಾತಿಗೆ ಆಗ್ರಹಿಸಿ ಶಕ್ತಿ ಪ್ರದರ್ಶನ

ಹರಿಹರದಲ್ಲಿ ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ l ಸತ್ಯಾಗ್ರಹದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 5:06 IST
Last Updated 19 ಸೆಪ್ಟೆಂಬರ್ 2021, 5:06 IST
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಆಗ್ರಹಿಸಿ ಸಮಾಜದವರು ಹರಿಹರದ ಮಿನಿ ವಿಧಾನಸೌಧ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‍ ಕೆ.ಬಿ. ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಆಗ್ರಹಿಸಿ ಸಮಾಜದವರು ಹರಿಹರದ ಮಿನಿ ವಿಧಾನಸೌಧ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‍ ಕೆ.ಬಿ. ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.   

ಹರಿಹರ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ತಾಲ್ಲೂಕಿನ ಪಂಚಮಸಾಲಿ ಸಮಾಜದವರು ಶನಿವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‍ ಕೆ.ಬಿ. ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.

ನಗರದ ಪೇಟೆ ಆಂಜನೇಯ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಶೋಭಾ ಟಾಕೀಸ್ ರಸ್ತೆ, ರಾಣಿ ಚನ್ನಮ್ಮ ವೃತ್ತ, ಮುಖ್ಯರಸ್ತೆ, ಮಹಾತ್ಮ ಗಾಂಧಿ ವೃತ್ತದ ಮೂಲಕ ಮಿನಿ ವಿಧಾನಸೌಧಕ್ಕೆ ತಲುಪಿತು.

ಹೋರಾಟ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತ
ನಾಡಿ, ‘ಸರ್ಕಾರ ಕೊಟ್ಟ ಮಾತಿನಂತೆ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ತಿಂಗಳೊಳಗೆ 2ಎ ಮೀಸಲಾತಿ ಘೋಷಿಸ
ಬೇಕು. ವಿಳಂಬವಾದರೆ ಅ.1ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ
ದಲ್ಲಿ ಜಗದ್ಗುರು ಸಾನ್ನಿಧ್ಯದಲ್ಲಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದಿಂದ ಬೆಂಗಳೂರಿನವರೆಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಐತಿಹಾಸಿಕ ಪಾದಯಾತ್ರೆ ಮೂಲಕ ಶಕ್ತಿ ಪ್ರದರ್ಶನ ನಡೆಸಲಾಗಿತ್ತು. ಆ ಸಂಧರ್ಭದಲ್ಲಿ ಸರ್ಕಾರ, ಸಮಾಜಕ್ಕೆ 2ಎ ಮೀಸಲಾತಿ ನೀಡುವುದಾಗಿ ಘೋಷಿಸಿತ್ತು ಎಂದು ನೆನಪಿಸಿದರು.

ಸರ್ಕಾರ ಪಡೆದಿದ್ದ 6 ತಿಂಗಳ ಗಡುವು ಪೂರ್ಣಗೊಂಡಿದೆ. ಆದಕಾರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಪ್ರವರ್ಗ 2ಎ ಹಾಗೂ ಲಿಂಗಾಯತ ಸಮುದಾಯಗಳಿಗೆ ಒಬಿಸಿ ಮೀಸಲಾತಿಗೆ ಶಿಫಾರಸು ಮಾಬೇಕು ಎಂದು ಮನವಿ ಮಾಡಿದರು.

ಸಮಾಜಕ್ಕೆ ಮೀಸಲಾತಿ ಹಾಗೂ ಸಂಘಟನೆಗಾಗಿ ಶ್ರೀಗಳು ಈಗಾಗಲೇ ಮೂರು ಹಂತದ ಚಳವಳಿ ಪೂರ್ಣಗೊಳಿಸಿದ್ದಾರೆ. ನಾಲ್ಕನೇ ಹಂತದ ಚಳವಳಿಗೆ ರಾಜ್ಯದಾದ್ಯಂತ ಸಂಚರಿಸುತ್ತಿದ್ದಾರೆ. ಮೈಸೂರು ಹಾಗೂ ಕರಾವಳಿ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಗುರುತಿಸಿಕೊಂಡಿರುವ ಪಂಚಮಸಾಲಿ ಸಮಾಜದಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಿದರು.

ಸಮಾಜದ ಅಧ್ಯಕ್ಷ ದೀಟೂರು ಶೇಖರಪ್ಪ ಮಾತನಾಡಿ, ‘ಲಿಂಗಾಯತ ಪಂಚಮಸಾಲಿ ಹಾಗೂ ಸಮಾಜದ ಉಪನಾಮಗಳಾದ ಗೌಡ ಲಿಂಗಾಯತ, ದೀಕ್ಷಾ ಲಿಂಗಾಯತ, ಮಲೆ ಗೌಡ ಲಿಂಗಾಯತರಿಗೂ 2ಎ ಮೀಸಲಾತಿ ನೀಡಲು ಆಗ್ರಹಿಸಿ ಶ್ರೀಗಳು ಪ್ರತಿಜ್ಞಾ ಪಂಚಾಯತ್ ಯಾತ್ರೆ ನಡೆಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಸಮಾಜದ ಉಪಾಧ್ಯಕ್ಷ ಚಂದ್ರಪ್ಪ ಮಿಟ್ಲಕಟ್ಟೆ, ದಾವಣಗೆರೆ ನಗರಪಾಲಿಕೆ ಮಾಜಿ ಮೇಯರ್ ಅಜಯ್ ಕುಮಾರ್, ಸದಸ್ಯ ಶಾಂತಕುಮಾರ್, ನಗರಸಭಾ ಸದಸ್ಯ ಜಂ‌ಬಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಎಚ್. ನಾಗಪ್ಪ, ಹೊಳೆ ಸಿರಿಗೆರೆ ನಿಂಗಪ್ಪ, ಮುಖಂಡರಾದ ಮಲೇಬೆನ್ನೂರು ಬಿ. ಚಿದಾನಂದಪ್ಪ, ಎಂ.ಜಿ. ಪರಮೇಶ್ವರ ಗೌಡ್ರು, ಜಿ. ನಂಜಪ್ಪ. ವಕೀಲ ಕೆ.ಜಿ.ಎಸ್. ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.