ADVERTISEMENT

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಆಯೋಜಿಸಿದ ಶೈಕ್ಷಣಿಕ ಮೇಳಕ್ಕೆ ಚಾಲನೆ

ಉಜ್ವಲ ಭವಿಷ್ಯಕ್ಕೆ ದಿಕ್ಕು ತೋರಿದ ‘ಜ್ಞಾನದೇಗುಲ’

​ಪ್ರಜಾವಾಣಿ ವಾರ್ತೆ
Published 16 ಜನವರಿ 2025, 8:05 IST
Last Updated 16 ಜನವರಿ 2025, 8:05 IST
   

ದಾವಣಗೆರೆ: ಉಜ್ವಲ ಭವಿಷ್ಯದ ಕನವರಿಕೆಯಲ್ಲಿ ಪ್ರೌಢ ಶಾಲಾ ಶಿಕ್ಷಣ ಮುಗಿಸಲು ಸಜ್ಜಾಗಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಆಯೋಜಿಸಿದ ‘ಜ್ಞಾನ ದೇಗುಲ’ ಶೈಕ್ಷಣಿಕ ಮೇಳಕ್ಕೆ ಗುರುವಾರ ಚಾಲನೆ ಸಿಕ್ಕಿತು.

ಇಲ್ಲಿನ ಹದಡಿ ರಸ್ತೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಹಮ್ಮಿಕೊಂಡ ಮೇಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಹಾಗೂ ವೈದ್ಯ ಡಾ.ಮಂಜುನಾಥ್‌ ಅವರು ದೀಪ ಬೆಳಗಿದರು.

‘ನಾನು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್‌ಎಸ್‌ಎಲ್‌ಸಿಯನ್ನು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದೆ. ಕೆಎಎಸ್‌ ಉತ್ತೀರ್ಣ ಮಾಡಿ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ಜಗಳೂರು ತಾಲ್ಲೂಕಿನ ಗಡಿಭಾಗದ ನನ್ನ ಹಳ್ಳಿಗೆ ‘ಪ್ರಜಾವಾಣಿ’ ಸೇರಿ ಎರಡು ದಿನಪತ್ರಿಕೆಗಳು ಬರುತ್ತಿದ್ದವು. ಚಿಕ್ಕಂದಿನಲ್ಲಿ ‘ಪ್ರಜಾವಾಣಿ’ ಓದಿದ್ದು ಬದುಕಿಗೆ ದಿಕ್ಕು ತೋರಿತು’ ಎಂದು ಹೇಳಿದರು.

ADVERTISEMENT

‘ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಹಂತ ವಾದ್ಯ ಪರಿಕರವಿದ್ದಂತೆ. ಶ್ರುತಿಬದ್ಧವಾಗಿದ್ದರೆ ಮಾತ್ರ ಮೌಲ್ಯ ಹೆಚ್ಚು. ವಿದ್ಯಾರ್ಥಿ ಜೀವನ ಕಲ್ಲು ಶಿಲೆಯಾಗುವ ಹಂತ. ಇದಕ್ಕೆ ಸರಿಯಾದ ರೀತಿಯಲ್ಲಿ ಉಳಿಪೆಟ್ಟು ಬಿದ್ದರೆ ಶಿಲೆಯಾಗಲು ಸಾಧ್ಯ. ಎಸ್‌ಎಸ್‌ಎಲ್‌ಸಿ ಮತ್ತು ಪಿಯು ವಿದ್ಯಾರ್ಥಿಗಳು ಸರಿಯಾದ ದಿಕ್ಕು ಆಯ್ಕೆ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ದೇಶದಲ್ಲಿ ನಿರುದ್ಯೋಗ ಹೆಚ್ಚಿದೆ. ಎಲ್ಲ ಪದವೀಧರರಿಗೆ ಉದ್ಯೋಗ ಸಿಗುತ್ತಿಲ್ಲ. ಕೌಶಲಗಳನ್ನು ಅರಿತಾಗ ಮಾತ್ರ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯ. ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸುಲಭವಾಗುತ್ತದೆ’ ಎಂದು ಕಿವಿಮಾತು ಹೇಳಿದರು.

ಮನೋವೈದ್ಯ ಡಾ.ಮಂಜುನಾಥ್‌, ‘ಶಿಕ್ಷಣ ಬದುಕಿನ ಸಾರ್ಥಕತೆ, ಪರಿಪೂರ್ಣತೆ ಬೆಳಗಬೇಕು. ಆದರೆ, ಶಿಕ್ಷಣ ಬದುಕಿಗೆ ಹಣ ಗಳಿಸುವ ದಾರಿ, ವಿದ್ಯಾರ್ಥಿಗಳು ಯಂತ್ರ ಎಂದು ಪರಿಭಾವಿಸುವುದು ತಪ್ಪು. ಈ ವಿಚಾರದಲ್ಲಿ ಪೋಷಕರು ಮನಸ್ಥಿತಿ ಬದಲಾಯಿಸಿಕೊಳ್ಳಬೇಕು’ ಎಂದು ಹೇಳಿದರು.

‘ಹುಚ್ಚುಕೋಡಿ ಮನಸು ಹದಿಹರೆಯದ ವಯಸ್ಸು’ ಎಂಬುದು ಕವಿವಾಣಿ. ಈ ಹುಚ್ಚುಕೋಡಿ ಮನಸ್ಸು ನಿಯಂತ್ರಣದಲ್ಲಿ ಇಟ್ಟುಕೊಂಡಾಗ ಮಾತ್ರ ಬದುಕಿನಲ್ಲಿ ಯಶಸ್ಸು ಅರಸಿ ಬರಲಿದೆ. ಎರಡು ತಿಂಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರುತ್ತಿದೆ. ಈ ಪರೀಕ್ಷೆಗೆ ಭಯ ಇಟ್ಟುಕೊಳ್ಳಬೇಡಿ. ಕ್ರಮಬದ್ಧವಾಗಿ ವ್ಯಾಸಂಗ ಮಾಡಿದಾಗ ಪರೀಕ್ಷೆಯ ಬಗ್ಗೆ ಭಯ ಮೂಡುವುದಿಲ್ಲ’ ಎಂದರು.

‘ಭಯಕ್ಕೆ ನಿಜವಾದ ಕಾರಣವನ್ನು ಪತ್ತೆ ಮಾಡಿಕೊಳ್ಳಬೇಕು. ನಸುಕಿನಲ್ಲಿಯೇ ಓದಬೇಕು ಎಂಬುದು ವೈಜ್ಞಾನಿಕವಲ್ಲ. ನಿದ್ದೆಗೂ ಮುನ್ನ ಓದುವುದು ಉತ್ತಮ. ಓದು ಸ್ಮೃತಿಪಟಲದಲ್ಲಿ ಉಳಿಯಲು ನಿದ್ದೆ ಕೂಡ ಮುಖ್ಯ. ಮಿದುಳು ಸಾಮರ್ಥ್ಯ ಸೂರ್ಯನ ಕಿರಣಗಳ ಪ್ರಖರತೆಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ನಿಮಗೆ ಇಷ್ಟವಾದ ಸಮಯದಲ್ಲಿ ವ್ಯಾಸಂಗ ಮಾಡಿ. ಕನಿಷ್ಠ 6ರಿಂದ ಗರಿಷ್ಠ 8 ಗಂಟೆ ನಿದ್ದೆ ಅಗತ್ಯ‘ ಎಂದರು.

‘ಒಂದು ಯೋಜನಾಬದ್ಧ ವ್ಯಾಸಂಗವನ್ನು ರೂಢಿಸಿಕೊಳ್ಳಿ. ಅರ್ಥ ಮಾಡಿಕೊಂಡು ಓದಿದ್ದನ್ನು ಗ್ರಹಿಸಬೇಕು. ಇದು ಸ್ಮೃತಿ ಒಳಗೆ ಇಳಿಸಿಕೊಳ್ಳಲು ಮಿದುಳು ಮ್ಯಾಪಿಂಗ್‌ ಆಗಬೇಕು. ಓದಿದ್ದನ್ನು ಬರೆದು, ಮನನ ಮಾಡಿಕೊಂಡಾಗ ಮಾತ್ರ ಹೆಚ್ಚು ದಿನಗಳವರೆಗೆ ಮನಸಿನಲ್ಲಿ ಉಳಿಯುತ್ತದೆ. ರಾತ್ರಿ ಮಲಗುವುದಕ್ಕೂ ಮುನ್ನ ಓದಿದ್ದನ್ನು ಒಮ್ಮೆ ನೆನಪು ಮಾಡಿಕೊಳ್ಳಿ’ ಎಂದು ಹೇಳಿದರು.

‘ಎಸ್‌ಎಸ್‌ಎಲ್‌ಸಿ ಮತ್ತು ಪಿಯು ವಿದ್ಯಾರ್ಥಿಗಳಿಗೆ ಶಿಕ್ಷಣ ಮಾಗರ್ದಶನ ನೀಡುವ ವಿನೂತನ ಸಮಾರಂಭವನ್ನು ಪ್ರಜಾವಾಣಿ ಬಳಗ ಆಯೋಜಿಸಿದೆ. ಕಲೆ, ವಾಣಿಜ್ಯ ಹಾಗೂ ವಿಜ್ಞಾನದಲ್ಲಿ ಯಾವ ವಿಭಾಗ ಆಯ್ಕೆ ಮಾಡಿಕೊಳ್ಳಬೇಕು ಎಂಬ ತಿಳಿವಳಿಕೆ ನೀಡಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಬಳಿಕ ಎಚ್ಚರಿಕೆ ಹೆಜ್ಜೆಗಳನ್ನು ಇಡುವ ಅಗತ್ಯವಿದೆ’ ಎಂದು ‘ಪ್ರಜಾವಾಣಿ’ ಬ್ಯುರೊ ಮುಖ್ಯಸ್ಥ ಸಿದ್ದಯ್ಯ ಹಿರೇಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಜಿಲ್ಲಾ ಯೋಗ ಒಕ್ಕೂಟ ಅಧ್ಯಕ್ಷ ವಾಸುದೇವ ರಾಯ್ಕರ್‌, ಲೇಖಕ ಗುರುರಾಜ ಎಸ್‌.ದಾವಣಗೆರೆ ಹಾಜರಿದ್ದರು. ದಾವಣಗೆರೆ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ಮೇಳದಲ್ಲಿ ಪಾಲ್ಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.