ADVERTISEMENT

ದಾವಣಗೆರೆ| ನಕಲಿ ಟ್ರೇಡ್ ಲೈಸೆನ್ಸ್‌ಗಳ ಹಾವಳಿ ತಡೆಗಟ್ಟಿ

ಜನಸ್ಪಂದನ ಸಭೆಯಲ್ಲಿ ನಗರ ಪಾಲಿಕೆ ಆಯುಕ್ತರಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 16:06 IST
Last Updated 24 ಡಿಸೆಂಬರ್ 2019, 16:06 IST
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಸ್ಪಂದನ ಸಭೆಯಲ್ಲಿ ಹೊನ್ನಾಳಿ ತಾಲ್ಲೂಕು ನೆಲಹೊನ್ನೆ ಗ್ರಾಮದ ವೃದ್ಧೆ ಶಾಂತಮ್ಮ ಮನವಿ ಮಾಡಿದ್ದು ಹೀಗೆ.
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಸ್ಪಂದನ ಸಭೆಯಲ್ಲಿ ಹೊನ್ನಾಳಿ ತಾಲ್ಲೂಕು ನೆಲಹೊನ್ನೆ ಗ್ರಾಮದ ವೃದ್ಧೆ ಶಾಂತಮ್ಮ ಮನವಿ ಮಾಡಿದ್ದು ಹೀಗೆ.   

ದಾವಣಗೆರೆ: ನಗರದಲ್ಲಿ ನಕಲಿ ಟ್ರೇಡ್ ಲೈಸೆನ್ಸ್‌ಗಳನ್ನು ಪಡೆದವರಿಗೆ ದಂಡ ವಿಧಿಸುವ ಮೂಲಕ ನಕಲಿ ಟ್ರೇಡ್ ಲೈಸೆನ್ಸ್‌ಗಳ ಹಾವಳಿ ತಡೆಗಟ್ಟಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಮಾತನಾಡಿದ ಅವರು, ‘ಟ್ರೇಡ್ ಲೈಸನ್ಸ್ ಪ್ರಕರಣಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಜನವರಿ 15ರೊಳಗೆ ಪಾಲಿಕೆಯಿಂದ ಅಭಿಯಾನ ಕೈಗೊಳ್ಳಬೇಕು. ಲೈಸನ್ಸ್ ಪಡೆಯದವರಿಗೆ ಅವಕಾಶ ನೀಡಬೇಕು ಎಂದು ಹೇಳಿದರು.

ಪಾಲಿಕೆ ವ್ಯಾಪ್ತಿಯಲ್ಲಿ ನಕಲಿ ಟ್ರೇಡ್ ಲೈಸನ್ಸ್ ಪ್ರಕರಣಗಳು ಹೆಚ್ಚುತ್ತಿದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಮನವಿಯ ಮೇರೆಗೆ ಈ ಸೂಚನೆ ನೀಡಿದರು.

ADVERTISEMENT

ಹೊನ್ನಾಳಿ ತಾಲ್ಲೂಕು ನೆಲಹೊನ್ನೆ ಗ್ರಾಮದ ವೃದ್ಧೆ ಶಾಂತಮ್ಮ ತಾವು ಗೋಮಾಳದ ಒಂದು ಎಕರೆ ಒಂದು ಗುಂಟೆ ಜಮೀನು ಸಾಗುವಳಿ ಮಾಡಿಕೊಂಡಿದ್ದು, ತಮ್ಮ ಜಮೀನನ್ನು ಅಕ್ಕಪಕ್ಕದ ರೈತರು ಒತ್ತುವರಿ ಮಾಡಿಕೊಂಡಿದ್ದಾರೆ. ತಮ್ಮ ಜಮೀನನ್ನು ಸರ್ವೇ ಮಾಡಿ ಹದ್ದುಬಸ್ತು ಮಾಡಿಕೊಡಿ ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ‘ಜನವರಿ 31ರೊಳಗೆ ಜಮೀನಿನ ಸರ್ವೇ ಮಾಡಿಸಿ ಹದ್ದುಬಸ್ತು ಮಾಡಿಸಲು ಕ್ರಮ ವಹಿಸುವಂತೆ ಡಿಡಿಎಲ್‍ಆರ್’ ಅವರಿಗೆ ಸೂಚಿಸಿದರು.

ಕಾಮಗೇತನಹಳ್ಳಿಯ ನಮ್ಮ ಜಮೀನಿದ್ದು, ಹೊಸಹಟ್ಟಿ ಗ್ರಾಮದ ಸಣ್ಣ ನೀರಾವರಿ ಇಲಾಖೆಯ ಚೆಕ್ ಡ್ಯಾಂ ನಿರ್ಮಿಸಿರುವ ಹಳ್ಳದ ಪಕ್ಕದಲ್ಲಿದ್ದು, ಇದರ ಹಿಂಬದಿ ನೀರು ಬೆಳೆಗಳಿಗೆ ನುಗ್ಗುತ್ತಿರುವುದರಿಂದ ಬೆಳೆ ಹಾನಿಯಾಗುತ್ತಿದೆ. ಆದ್ದರಿಂದ ಒಡ್ಡು ನಿರ್ಮಿಸಿಕೊಡಬೇಕೆಂದು ಜಗಳೂರು ತಾಲ್ಲೂಕು ದೊಣ್ಣೆಹಳ್ಳಿ ಗ್ರಾಮದ ವಯೋವೃದ್ದ ಕೆ. ಸಣ್ಣಬಸಪ್ಪ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾ ಪಂಚಾಯಿತಿ ಸಿಇಒ, ‘ನಾನೇ ಸ್ವತಃ ಭೇಟಿ ನೀಡಿ, ಪರಿಶೀಲಿಸಿ ಒಡ್ಡು ನಿರ್ಮಿಸಿಕೊಡಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

‘ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಐಮ್ಯಾಕ್ಸ್ ವತಿಯಿಂದ ನೀಡುವ ಪುಸ್ತಕಗಳ ಬಿಲ್ ಕೇಳಿದರೆ ಅನಗತ್ಯ ಉತ್ತರ ನೀಡಿ, ತಮ್ಮ ಮಕ್ಕಳ ಟಿ.ಸಿ ಕೊಡುವವರೆಗೆ ಮಾತನಾಡುವ ಮೂಲಕ ದೌರ್ಜನ್ಯವೆಸಗುತ್ತಿದ್ದಾರೆ. ಈ ಶಾಲೆಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸಾಗರ್ ಎಂಬವರು ಮನವಿ ಮಾಡಿದರು. ಈ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುವಂತೆ ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಅವರಿಗೆ ಸೂಚಿಸಿದರು.

ರಾತ್ರಿ ವೇಳೆ ಬಸ್‌ ಸೌಲಭ್ಯ ಕಲ್ಪಿಸಿ: ವಿದ್ಯಾನಗರದಿಂದ ಎಸ್‍ಎಸ್ ಹೈಟೆಕ್ ಆಸ್ಪತ್ರೆಗೆ ಸಂಜೆಯಿಂದ ರಾತ್ರಿ ವೇಳೆ ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆ ಇಲ್ಲದೇ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಈ ಮಾರ್ಗಕ್ಕೆ ಕೆಎಸ್‍ಆರ್‌ಟಿಸಿ ಬಸ್ ಬಿಡಬೇಕೆಂದು ವಿದ್ಯಾನಗರ ಸಾರ್ವಜನಿಕರು ಮನವಿ ಮಾಡಿದರು. ದಾವಣಗೆರೆ ತಾಲ್ಲೂಕಿನ ಚಿಕ್ಕಕುರುಬರ ಹಳ್ಳಿಗೆ ಕೆಎಸ್‍ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಿಸಿಕೊಡಿ ಎಂದು ಸಾರ್ವಜನಿಕರೊಬ್ಬರು ಮನವಿ ಮಾಡಿದರು. ಈ ಮಾರ್ಗಗಳಿಗೆ ಬಸ್ ವ್ಯವಸ್ಥೆ ಮಾಡುವಂತೆ ಕೆಎಸ್‍ಆರ್‌ಟಿಸಿ ಯವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಆಶ್ರಯ ಮನೆಗೆ ಜಮೀನು ಮಾರಾಟ: ಚನ್ನಗಿರಿಯ ಭೀಮಾಜಿರಾವ್, ಖಂಡೋಬರಾವ್ ಅವರು ‘ಆಶ್ರಯ ಯೋಜನೆಗೆ ನಮ್ಮ ಜಮೀನನ್ನು ಸರ್ಕಾರ ನಿಗದಿಪಡಿಸಿದ ಬೆಲೆಗೆ ನೀಡುತ್ತೇವೆ. ಇನ್ನೂ ಕೆಲವು ರೈತರು ತಮ್ಮ ಜಮೀನನ್ನು ಬಿಟ್ಟುಕೊಡಲು ಒಪ್ಪಿದ್ದಾರೆ ಎಂದು ಜನಸ್ಪಂದನ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಈ ನಿಮ್ಮ ನಿರ್ಧಾವನ್ನು ಸ್ವಾಗತಿಸುತ್ತೇನೆ. ಈ ಹಿಂದೆಯೇ ತಾವು ಒಪ್ಪಿದ್ದರೆ ಈಗಾಗಲೇ ನಿಮಗೆ ಚೆಕ್ ಸಿಕ್ಕಿರುತ್ತಿತ್ತು’ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಪದ್ಮಾ ಬಸವಂತಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ನಜ್ಮಾ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ಡಿಡಿಎಲ್‍ಆರ್ ರಾಮಾಂಜನೇಯ, ಕೆಎಸ್‍ಆರ್‍ಟಿಸಿ ಡಿಸಿ ಸಿದ್ದೇಶ್ವರ್, ಡಿಡಿಪಿಐ ಪರಮೇಶ್ವರಪ್ಪ, ಕೃಷಿ ಇಲಾಖೆ ಡಿಡಿ ಶರಣಪ್ಪ ಮುದಗಲ್, ತೋಟಗಾರಿಕೆ ಇಲಾಖೆ ಡಿಡಿ ಲಕ್ಷ್ಮೀಕಾಂತ್ ಬೋಮ್ಮನ್ನರ್, ಸ್ಮಾರ್ಟ್‌ ಸಿಟಿ ಎಂ.ಡಿ ರವೀಂದ್ರ ಮಲ್ಲಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.