ADVERTISEMENT

ಕೃಷಿ ಸಂಶೋಧನೆಗೆ ಆದ್ಯತೆ ನೀಡಿ: ಸಂಸದ ಜಿ.ಎಂ. ಸಿದ್ದೇಶ್ವರ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 14:44 IST
Last Updated 2 ಮಾರ್ಚ್ 2020, 14:44 IST
ದಾವಣಗೆರೆ ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವಿಭಾಗದಿಂದ ಏರ್ಪಡಿಸಿದ್ದ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮವನ್ನು ಸಂಸದ ಜಿ.ಎಂ. ಸಿದ್ದೇಶ್ವರ ಉದ್ಘಾಟಿಸಿದರು. ಡಾ. ಹುಚ್ಚೇಗೌಡ, ವಿಜಯಲಕ್ಷ್ಮಿ ಹಿರೇಮಠ, ಪ್ರೊ.ಕೆ.ಬಿ.ರಂಗಪ್ಪ, ಪ್ರೊ. ಬಸವರಾಜ ಬಣಕಾರ, ಪ್ರೊ. ಎಚ್.ಎಸ್. ಅನಿತಾ, ಕೊಂಡಜ್ಜಿ ಜಯಪ್ರಕಾಶ್ ಇದ್ದಾರೆ.
ದಾವಣಗೆರೆ ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವಿಭಾಗದಿಂದ ಏರ್ಪಡಿಸಿದ್ದ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮವನ್ನು ಸಂಸದ ಜಿ.ಎಂ. ಸಿದ್ದೇಶ್ವರ ಉದ್ಘಾಟಿಸಿದರು. ಡಾ. ಹುಚ್ಚೇಗೌಡ, ವಿಜಯಲಕ್ಷ್ಮಿ ಹಿರೇಮಠ, ಪ್ರೊ.ಕೆ.ಬಿ.ರಂಗಪ್ಪ, ಪ್ರೊ. ಬಸವರಾಜ ಬಣಕಾರ, ಪ್ರೊ. ಎಚ್.ಎಸ್. ಅನಿತಾ, ಕೊಂಡಜ್ಜಿ ಜಯಪ್ರಕಾಶ್ ಇದ್ದಾರೆ.   

ದಾವಣಗೆರೆ: ದೇಶದ ಆರ್ಥಿಕ, ಸಾಮಾಜಿಕ ಕ್ಷೇತ್ರಕ್ಕೆ ಕೃಷಿಯೇ ಬೆನ್ನೆಲುಬು. ವಿಶ್ವವಿದ್ಯಾಲಯಗಳು ಕೃಷಿ ಉತ್ಪನ್ನ ಹೆಚ್ಚಿಸುವ ಮತ್ತು ರೈತರ ಏಳಿಗೆಗೆ ಪೂರಕವಾದ ಸಂಶೋಧನೆಗೆ ಆದ್ಯತೆ ನೀಡಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಸಲಹೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾಲಯಲ್ಲಿ ನವದೆಹಲಿಯ ಐಸಿಎಸ್‍ಎಸ್‍ಆರ್ ಪ್ರಾಯೋಜಕತ್ವದಲ್ಲಿ ಅರ್ಥಶಾಸ್ತ್ರ ವಿಭಾಗವು ಸಮಾಜವಿಜ್ಞಾನ ವಿಭಾಗದ ಯುವ ಬೋಧಕ ಸಿಬ್ಬಂದಿಗೆ ಏರ್ಪಡಿಸಿರುವ 12 ದಿನಗಳ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಕೃಷಿ ಕ್ಷೇತ್ರ ಕೃಷಿ ವಿಜ್ಞಾನಿಗಳಿಗೆ ಸೀಮಿತವಾಗಿಲ್ಲ. ಎಲ್ಲ ಕ್ಷೇತ್ರಗಳೂ ಅದರಲ್ಲಿ ಅಡಗಿವೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ನೀಡು ತಳಿ ವಿಜ್ಞಾನವೂ ಸೇರಿ ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯಗಳ ಸದ್ಬಳಕೆಗೆ ಅಗತ್ಯ ಶಿಕ್ಷಣ ನೀಡುವುದೂ ಸಂಶೋಧನೆಯ ಭಾಗವೇ. ಹೀಗಾಗಿ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಕೃಷಿ ಆಧಾರಿತ ಸಂಶೋಧನೆಗೆ ಹೆಚ್ಚಿನ ಮನ್ನಣೆ ನೀಡಬೇಕು ಎಂದು ಹೇಳಿದರು.

ADVERTISEMENT

‘ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮತ್ತು ಅವರ ಭವಿಷ್ಯಕ್ಕೆ ಉತ್ತಮ ದಾರಿ ತೋರಿಸಲು ದಾವಣಗೆರೆ ವಿಶ್ವವಿದ್ಯಾಲಯ ಕೈಗೊಳ್ಳುವ ಎಲ್ಲ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವರಿಗೆ ಅನುದಾನಕ್ಕಾಗಿ ಮನವಿ ಸಲ್ಲಿಸಲಾಗುವುದು’ ಎಂದು ಭರವಸೆ ನೀಡಿದರು.

ಕುಲಸಚಿವ ಪ್ರೊ. ಬಸವರಾಜ ಬಣಕಾರ, ‘ಕೆಲಸದ ಜೊತೆಗೆ ಸಂಶೋಧನೆ, ಸಮುದಾಯದ ಹಿತ ಕಾಪಾಡುವ ಚಟುವಟಿಕೆಗಳೂ ಮುಖ್ಯ. ಒಟ್ಟಾರೆ ಎಲ್ಲರ ಆಶಯ ದೇಶದ ಹಿತ ಕಾಪಾಡುವುದೇ ಆಗಿರಬೇಕು’ ಎಂದರು.

ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ‘ವೃತ್ತಿ ನಿಷ್ಠೆ, ಪ್ರಾಮಾಣಿಕ ಸೇವೆ ಮತ್ತು ನೈತಿಕ ಮೌಲ್ಯಗಳೊಂದಿಗೆ ಕೆಲಸ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

ಕುಲಸಚಿವೆ ಪ್ರೊ. ಎಚ್.ಎಸ್. ಅನಿತಾ ಮಾತನಾಡಿದರು. ಮಾಜಿ ಸಿಂಡಿಕೇಟ್ ಸದಸ್ಯ ಜಯಪ್ರಕಾಶ್ ಕೊಂಡಜ್ಜಿ ಉಪಸ್ಥಿತರಿದ್ದರು. ಕಲಾ ನಿಕಾಯದ ಡೀನ್ ಪ್ರೊ.ಕೆ.ಬಿ.ರಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಹುಚ್ಚೇಗೌಡ ಸ್ವಾಗತಿಸಿದರು. ಡಾ. ಸೆಲ್ವಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.