ADVERTISEMENT

ದಾವಣಗೆರೆ: 20 ಸೀಟ್‌ನವರಿಗೆ ಬೆಣ್ಣೆ, 24 ಸೀಟ್‌ನವರಿಗೆ ಸುಣ್ಣ

ಟೂರಿಸ್ಟ್‌ ಬಸ್‌ನಗಳಿಗೆ ಭಿನ್ನ ತೆರಿಗೆ ಸೃಷ್ಟಿಸಿದ ಅಸಮಾನತೆ

ಬಾಲಕೃಷ್ಣ ಪಿ.ಎಚ್‌
Published 1 ಅಕ್ಟೋಬರ್ 2020, 19:31 IST
Last Updated 1 ಅಕ್ಟೋಬರ್ 2020, 19:31 IST
   
""

ದಾವಣಗೆರೆ: 20 ಸೀಟಿನವರೆಗಿನ ಟೂರಿಸ್ಟ್‌ ಬಸ್‌ಗಳಿಗೆ ಸೀಟಿಗೆ ತ್ರೈಮಾಸಿಕ ತೆರಿಗೆ ₹ 700 ನಿಗದಿಪಡಿಸಿದ್ದರೆ, 24 ಸೀಟ್‌ನವರು ಸೀಟಿಗೆ ₹ 1,665 ಕಟ್ಟಬೇಕಾಗಿದೆ. ನಾಲ್ಕೇನಾಲ್ಕು ಸೀಟು ಹೆಚ್ಚಿರುವ ಕಾರಣಕ್ಕೆ ಮೂರು ತಿಂಗಳಿಗೆ ₹ 26 ಸಾವಿರ ಅಧಿಕ ತೆರಿಗೆ ಕಟ್ಟಬೇಕಿದೆ ಎಂಬುದು ಮಾಲೀಕರ ಅಳಲಾಗಿದೆ.

ಹಿಂದೆ 12 ಸೀಟ್‌ನ ವಾಹನ ಗಳಿದ್ದವು. ಅವು ಗಳನ್ನು ಆಲ್ಟ್ರೇ ಶನ್‌ ಮಾಡಿ 19 ಸೀಟ್‌ ಮಾಡಿಕೊಂಡು ಓಡಿಸುತ್ತಿದ್ದರು. ಇದರಿಂದ ಸರ್ಕಾರಕ್ಕೆ ತೆರಿಗೆ ಕೋತಾ ಆಗುತ್ತಿತ್ತು. ಕೆಲವು ವರ್ಷಗಳ ಹಿಂದೆ ಈ ವಾಹನ ಕೆರೆಗೆ ಬಿದ್ದಾಗ 20ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. 12 ಸೀಟಿಗಷ್ಟೇ ವಿಮೆ ಮಾಡಿರುವುದರಿಂದ ಅದಕ್ಕಿಂತ ಹೆಚ್ಚಿಗೆ ನೀಡಲು ಸಾಧ್ಯವಿಲ್ಲ ಎಂದು ವಿಮಾ ಕಂಪನಿ ಹೇಳಿತ್ತು. ಎಚ್ಚೆತ್ತುಕೊಂಡ ಆಗಿನ ಬಿಜೆಪಿ–ಜೆಡಿಎಸ್‌ ಸರ್ಕಾರ ಸೀಟು ಕಟ್ಟುನಿಟ್ಟುಗೊಳಿಸಿತ್ತು. ಬಳಿಕ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರಗಳೆರಡೂ ಈ ವಿಚಾರದಲ್ಲಿ ರಾಜೀ ಇಲ್ಲದೇ ಮುಂದುವರಿದವು. ಅಲ್ಲದೇ ನಿಗದಿಗಿಂತ ಹೆಚ್ಚು ಸೀಟು ಇದ್ದವರನ್ನು ನಾವೇ ಹಿಡಿದುಕೊಡುತ್ತಿದ್ದೆವು. ಈಗ ಹೊಸ ಆದೇಶದಿಂದಾಗಿ ತೊಂದರೆಯಾಗಿದೆ ಎನ್ನುತ್ತಾರೆ ದಾವಣಗೆರೆ ಟ್ಯಾಕ್ಸಿ ಚಾಲಕ ಮತ್ತು ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಡಿ. ದೀಕ್ಷಿತ್.

‘12 ಸೀಟ್‌ನವರಿಗೆ ಸೀಟ್‌ಗೆ ₹ 900 ಇತ್ತು. ಈಗ ಅವರಿಗೆ 20 ಸೀಟ್‌ವರೆಗೆ ಮಾಡಿಕೊಳ್ಳಲು ಅವಕಾಶ ಸಿಕ್ಕಿದೆ. ತೆರಿಗೆ ಜಾಸ್ತಿ ಇದೆ ಎಂದು ರಾಜ್ಯ ಸರ್ಕಾರದ ಸಾರಿಗೆ ಮಂತ್ರಿಗಳ ಮೇಲೆ ಒತ್ತಡ ಹೇರಿ ₹ 900 ಇದ್ದಿದ್ದನ್ನು ₹ 700ಕ್ಕೆ ಇಳಿಸಿದ್ದಾರೆ. ತೆರಿಗೆ ಇಳಿಸಿದ ಆದೇಶ ಸೆ.29ರಂದು ಹೊರಡಿಸಲಾಗಿದೆ. ಇದೇ ವೇಳೆ 24 ಸೀಟ್‌ನವರಿಗೆ ಪ್ರತಿ ಸೀಟ್‌ಗೆ ಇದ್ದ ₹ 1,665ರಲ್ಲಿ ಯಾವುದೇ ಇಳಿಕೆ ಮಾಡಿಲ್ಲ’ ಎಂಬುದು ಅವರ ನೋವು.

ADVERTISEMENT

‘20 ಸೀಟ್‌ನ ಬಸ್‌ ಮೂರು ತಿಂಗಳಿಗೆ ₹ 14 ಸಾವಿರ ತೆರಿಗೆ ಕಟ್ಟಿದರೆ, ನಾವು₹ 39,960 ಕಟ್ಟಬೇಕು. ಈ ಬಗ್ಗೆ ಸಾರಿಗೆ ಆಯುಕ್ತರು, ಸಾರಿಗೆ ಸಚಿವರು, ಪ್ರಧಾನಮಂತ್ರಿ, ರಾಜ್ಯಪಾಲರಿಗೆ ದೂರು ನೀಡಲಾಗುವುದು’ ಎಂದು ದೀಕ್ಷಿತ್‌ ಮಾಹಿತಿ ನೀಡಿದರು.

‘ತೆರಿಗೆ ಜಾಸ್ತಿ ಇದೆ ಎಂದು ನಾವು ಕಿಲೋಮೀಟರ್‌ಗೆ ₹ 27 ಇಟ್ಟರೆ ಯಾರೂ ಬರುವುದಿಲ್ಲ. ಯಾಕೆಂದರೆ 20 ಸೀಟಿನವರು ₹ ಕಿಲೋ
ಮೀಟರ್‌ಗೆ ₹ 20ಕ್ಕೆ ಬರಲು ತಯಾರಿದ್ದಾರೆ. ನಮಗೆ ನಷ್ಟವಾಗುತ್ತದೆ ಎಂದು ಬಸ್‌ ಮಾರಾಟ ಮಾಡಲು ಹೋದರೂ 24 ಸೀಟಿನ ಬಸ್‌ ಯಾರಿಗೂ ಬೇಡ. ಎಲ್ಲರೂ ತೆರಿಗೆ ಕಡಿಮೆ ಇರುವ ಬಸ್‌ಗೇ ಪ್ರಾಧನ್ಯ ನೀಡುತ್ತಾರೆ’ ಎಂದರು.

20ಸೀಟಿನ ಒಳಗಿನ ಟೂರಿಸ್ಟ್‌ ಬಸ್‌ಗಳಿಗೆ ತೆರಿಗೆ ಇಳಿಸಿದ ಆದೇಶದ ಪ್ರತಿ

********

24 ಸೀಟಿನ ಬಸ್‌ಗಳಿಗೂ ಸೀಟಿಗೆ ತೆರಿಗೆ 700ಕ್ಕೆ ಇಳಿಸಿ, ಇಲ್ಲವೇ 20 ಸೀಟಿನವರೆಗಿನವರಿಗೂ ತೆರಿಗೆ ಸೀಟಿಗೆ ₹ 1,665 ಮಾಡಿ. ಅಸಮಾನ ತೆರಿಗೆ ಬೇಡ.
ಕೆ.ಡಿ. ದೀಕ್ಷಿತ್.
ದಾವಣಗೆರೆ ಟ್ಯಾಕ್ಸಿ ಚಾಲಕ ಮತ್ತು ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ

*******

8- ದಾವಣಗೆರೆಯಲ್ಲಿರುವ 24 ಸೀಟಿನ ಬಸ್‌ಗಳು

7 - 20ರ ಒಳಗೆ ಇರುವ ಬಸ್‌ಗಳು

100 -ರಾಜ್ಯದಲ್ಲಿ ಇರುವ 24 ಸೀಟಿನ ಅಂದಾಜು ಬಸ್‌ಗಳ ಪ್ರಮಾಣ

1,000 -ರಾಜ್ಯದಲ್ಲಿ ಇರುವ 20 ಸೀಟಿನೊಳಗಿನ ಬಸ್‌ಗಳ ಅಂದಾಜು ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.