ADVERTISEMENT

ಗ್ರಾಮೀಣ ಜನರಿಗೆ ಆಸ್ತಿ ಕಾರ್ಡ್

‘ಸ್ವಾಮಿತ್ವ’ ಯೋಜನೆಗೆ ದಾವಣಗೆರೆ ಜಿಲ್ಲೆ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 2:04 IST
Last Updated 8 ಸೆಪ್ಟೆಂಬರ್ 2020, 2:04 IST
ಪದ್ಮ ಬಸವಂತಪ್ಪ
ಪದ್ಮ ಬಸವಂತಪ್ಪ   

ದಾವಣಗೆರೆ: ಭೂಮಿಯನ್ನು ಗುರುತಿಸಿ ದಾಖಲೆ ನೀಡಲು ಕೇಂದ್ರ ಸರ್ಕಾರದ ‘ಸ್ವಾಮಿತ್ವ’ ಯೋಜನೆಗೆ ದಾವಣಗೆರೆ ಜಿಲ್ಲೆಯು ಸೇರ್ಪಡೆಗೊಂಡಿದೆ. ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ ‘ಆಸ್ತಿ ಕಾರ್ಡ್’ ದೊರೆಯಲಿದೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ದಿಶಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ಅವರು ಈ ಯೋಜನೆ ಕುರಿತು ಮಾಹಿತಿ ನೀಡಿದರು.

ರಾಜ್ಯದ 16 ಜಿಲ್ಲೆಗಳು ಮೊದಲ ಹಂತದಲ್ಲಿ ‘ಸ್ವಾಮಿತ್ವ’ ಯೋಜನೆಯ ವ್ಯಾಪ್ತಿಗೆ ಬರಲಿವೆ. ಅದರಲ್ಲಿ ದಾವಣಗೆರೆಯೂ ಒಂದು. ಒಂದು ತಾಲ್ಲೂಕಿನ ಎಂಟು ಗ್ರಾಮ ಪಂಚಾಯಿತಿಗಳನ್ನು ಈಗಾಗಲೇ ಆಯ್ಕೆ ಮಾಡಿಕೊಳ್ಳಲಾಗಿದೆ. ಹಂತ ಹಂತವಾಗಿ ಜಿಲ್ಲೆಯ ಎಲ್ಲಾ ಗ್ರಾಮಗಳು ಈ ಯೋಜನೆಯ ವ್ಯಾಪ್ತಿಗೆ ಬರಲಿವೆ.ಕಂದಾಯ ಗ್ರಾಮಗಳಿಗೆ ಈ ಯೋಜನೆಯಿಂದ ಬಹಳಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

ADVERTISEMENT

ಗ್ರಾಮೀಣ ಆಸ್ತಿಗಳ ಜಿಯೋಸ್ಟೇಷಿಯಲ್ ಡೇಟಾಬೇಸ್ ಅನ್ನು ರಚಿಸುವ ಮೂಲಕ ಈ ಅಂತರವನ್ನು ಪರಿಹರಿಸುವ ಗುರಿ ಹೊಂದಿದ್ದು, ಸುಧಾರಿತ ತಂತ್ರಜ್ಞಾನದೊಂದಿಗೆ ಡ್ರೋನ್‌ ಮೂಲಕ ಸಮೀಕ್ಷೆ ಕಾರ್ಯ ಮಾಡಲಾಗುವುದು ಎಂದರು.

ಗ್ರಾಮಗಳಲ್ಲಿರುವ ನಿವೇಶನ, ಮನೆಗಳ ಸರ್ವೇ ಮಾಡಲಾಗುತ್ತದೆ. ಇದರಿಂದ ಆಸ್ತಿಯನ್ನು ಗುರುತಿಸಲು ಸಹಾಯವಾಗುತ್ತದೆ. ವ್ಯಾಜ್ಯಗಳ ಸಂದರ್ಭದಲ್ಲಿ ಇದನ್ನೇ ಆಧಾರವನ್ನಾಗಿಸಿಕೊಂಡು ತೀರ್ಮಾನ ಕೈಗೊಳ್ಳಲು ಸುಲಭವಾಗಲಿದೆ. ಅಷ್ಟೇ ಅಲ್ಲದೇ ಭೂ, ದಾಖಲೆ, ಸಾಲವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಗ್ರಾಮೀಣ ಯೋಜನೆ ಪ್ರಕ್ರಿಯೆಗಳಿಗೆ ಇದರಿಂದ ಸಹಕಾರಿ ಆಗಲಿದೆ. ಜನರು ತಮ್ಮ ಆಸ್ತಿಗಳ ದಾಖಲೆಗಳನ್ನು ಭದ್ರಪಡಿಸಿಕೊಳ್ಳಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.