ADVERTISEMENT

ಅಪಪ್ರಚಾರ ಮಾಡಿದವರೇ ಲಸಿಕೆಗೆ ಮುಂದಾಗಿದ್ದಾರೆ: ಸಂಸದ ಜಿ.ಎಂ.ಸಿದ್ದೇಶ್ವರ

ಆಮ್ಲಜನಕ ಘಟಕಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 4:32 IST
Last Updated 6 ಜೂನ್ 2021, 4:32 IST
ಹರಪನಹಳ್ಳಿಯ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಆಮ್ಲಜನಕ ಘಟಕ ಸ್ಥಾಪನೆಗೆ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಶಾಸಕ ಜಿ.ಕರುಣಾಕರ ರೆಡ್ಡಿ ಭೂಮಿಪೂಜೆ ನೆರವೇರಿಸಿದರು.
ಹರಪನಹಳ್ಳಿಯ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಆಮ್ಲಜನಕ ಘಟಕ ಸ್ಥಾಪನೆಗೆ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಶಾಸಕ ಜಿ.ಕರುಣಾಕರ ರೆಡ್ಡಿ ಭೂಮಿಪೂಜೆ ನೆರವೇರಿಸಿದರು.   

ಹರಪನಹಳ್ಳಿ: ಕೋವಿಡ್ ಸೋಂಕಿನಿಂದ ಮುಕ್ತಿ ಪಡೆಯುವ ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದ್ದವರು ಈಗ ಮೊದಲ ಸಾಲಿನಲ್ಲಿ ನಿಂತು ಲಸಿಕೆ ಪಡೆಯುತ್ತಿದ್ದಾರೆ. ಆದರೆ ಅಮಾಯಕರು ಸಾಯುತ್ತಿದ್ದಾರೆ ಎಂದು ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶನಿವಾರ ₹ 60 ಲಕ್ಷ ವೆಚ್ಚದ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಎಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿದ್ದು, ಮೂರ್ನಾಲ್ಕು ದಿನದಲ್ಲಿ ಟ್ಯಾಂಕರ್ ಹರಪನಹಳ್ಳಿ ತಲುಪಲಿದೆ. ಹರಿಹರ, ಚಿತ್ರದುರ್ಗದಲ್ಲೂಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣ ಆಗಲಿವೆ. ದಾವಣಗೆರೆಯಲ್ಲಿ ಪಿಎಂ ಕೇರ್ ಅನುದಾನದಡಿ 1200 ಲೀಟರ್ ಸಾಮರ್ಥ್ಯದ ಆಮ್ಲಜನಕ ಉತ್ಪಾದನೆ ಘಟಕ ನಿರ್ಮಿಸಲಾಗುವುದು. ಜಗಳೂರಿನಲ್ಲಿ ಟ್ಯಾಂಕರ್ ಕೂರಿಸಿದ್ದು ಜೂನ್‌ 20ರ ಒಳಗಾಗಿ ಪೂರ್ಣಗೊಳಿಸಿ ಉದ್ಘಾಟಿಸಲಾಗುವುದು ಎಂದರು.

ADVERTISEMENT

ಮೂರನೇ ಅಲೆ ಆರಂಭವಾಗುವಷ್ಟರಲ್ಲಿ ಆಮ್ಲಜನಕದ ಕೊರತೆ ಆಗದಂತೆ ಬಳ್ಳಾರಿ ಜಿಲ್ಲಾಡಳಿತ ಹಗಲು-ರಾತ್ರಿ ಶ್ರಮಿಸುತ್ತಿದೆ. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಅರಿತು ಮನೆಯಲ್ಲಿರಬೇಕು. ಸೋಂಕಿತರು ಹೋಂ ಐಸೊಲೆಷನ್ ಇರದೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು ಎಂದು ಮನವಿ ಮಾಡಿದರು.

ಶಾಸಕ ಜಿ.ಕರುಣಾಕರ ರೆಡ್ಡಿ, ‘ಶಾಸಕರ ₹ 50 ಲಕ್ಷ ಅನುದಾನವನ್ನು ಕೋವಿಡ್ ನಿಯಂತ್ರಣಕ್ಕೆ ಬಳಕೆ ಮಾಡಲಾಗುವುದು. ಆಸ್ಪತ್ರೆ ಆವರಣದಲ್ಲಿ ಆಮ್ಲಜನಕದ ಟ್ಯಾಂಕರ್ ಘಟಕ ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಕುಮಾರ ಮಾಲಪಾಟಿ, ‘ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಆಮ್ಲಜನಕ ಟ್ಯಾಂಕರ್ ಸ್ಥಾಪಿಸಲಾಗುವುದು. ಮಕ್ಕಳಿಗೆ ಸೋಂಕು ತಗುಲದಂತೆ ಎಚ್ಚರವಹಿಸಲು, ತಾಲ್ಲೂಕಿನಲ್ಲಿರುವ ಅಪೌಷ್ಟಿಕತೆಯಿಂದ ಬಳಲುವ 136 ಮಕ್ಕಳನ್ನು, ಅವರ ತಾಯಿಯೊಂದಿಗೆ ಹಾಸ್ಟೆಲ್ಗೆ ಸ್ಥಳಾಂತರ ಮಾಡಿ, ಪೌಷ್ಟಿಕ ಆಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ, ತಹಶೀಲ್ದಾರ್ ಎಲ್.ಎಂ. ನಂದೀಶ್, ಡಿವೈಎಸ್ಪಿ ವಿ.ಎಸ್. ಹಾಲಮೂರ್ತಿ ರಾವ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಪಿ.ಕೆ. ವೆಂಕಟೇಶ್, ಆಡಳಿತಾಧಿಕಾರಿ ಡಾ.ಶಿವಕುಮಾರ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸತ್ತೂರು ಹಾಲೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.