ದಾವಣಗೆರೆ: ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಪ್ರತಿಭಟನಾ ದಿನದ ಅಂಗವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ, ಬಸ್‌ಪಾಸ್‌ಗೆ ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಫೆಡರೇಶನ್ (ಎಐಡಿಎಸ್‌ಒ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಜಯದೇವ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
‘ಈ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಎನ್‍ಇಪಿ-2020 ಅನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ. ಇದನ್ನು ರಾಜ್ಯದ ಶಿಕ್ಷಣ ತಜ್ಞರು, ಉಪನ್ಯಾಸಕರು, ಸಾಹಿತಿಗಳು, ವಿದ್ಯಾರ್ಥಿಗಳು ಹಾಗು ಪೋಷಕರು ವ್ಯಾಪಕವಾಗಿ ವಿರೋಧಿಸಿದ್ದಾರೆ. ಯಾವುದೇ ಪೂರ್ವಭಾವಿ ತಯಾರಿ ಇಲ್ಲದೆ,ತರಾತುರಿಯಲ್ಲಿ ಜಾರಿ ಮಾಡಲಾಗಿದೆ’ ಎಂದುಎಐಡಿಎಸ್‍ಓ ಜಿಲ್ಲಾ ಪೂಜಾ ನಂದಿಹಳ್ಳಿ ಆರೋಪಿಸಿದರು.
ತರಗತಿಗಳು ಆರಂಭವಾಗಿದ್ದರೂ ಸಹ, ಸರ್ಕಾರದ ಬಳಿ ಪಠ್ಯಕ್ರಮ ತಯಾರಿಲ್ಲ, ಪಠ್ಯಪುಸ್ತಕಗಳು ಇಲ್ಲ. ಇದರಿಂದ ರಾಜ್ಯದ ಶಿಕ್ಷಕ ವರ್ಗ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಂಧಕಾರ ಕವಿದಿದೆ ಎಂದರು ತಿಳಿಸಿದರು.
ಹಿಂದಿನ ಶೈಕ್ಷಣಿಕ ನೀತಿಯಲ್ಲಿ ಯಾವ ಲೋಪದೋಷಗಳಿದ್ದವು? ಯಾವ ಕಾರಣಕ್ಕೆ ನೂತನ ನೀತಿಯ ಅನುಷ್ಠಾನ ಆಗುತ್ತಿದೆ? ಎಂಬ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ. ರಾಜ್ಯದ ಶಿಕ್ಷಣ ವ್ಯವಸ್ಥೆ ಈಗಾಗಲೇ ಅಧೋಗತಿಯ ಸ್ಥಿತಿಯಲ್ಲಿ ಇದೆ. ಶಿಕ್ಷಣದ ಖಾಸಗೀಕರಣ, ದುಬಾರಿ ಶುಲ್ಕಗಳಿಂದ ಶಿಕ್ಷಣ ಪಡೆಯುವವರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. 15 ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 9 ಸಾವಿರ ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ. ಏಕ ಶಿಕ್ಷಕ ಶಾಲೆಗಳು ಶೇ 58ರಷ್ಟುಇದೆ. ಕೇವಲ 13 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು ಇದ್ದರೆ, 210 ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳುವರ್ಷಗಳಲ್ಲಿ ತಲೆ ಎತ್ತಿವೆ. 17 ಸರ್ಕಾರಿ ವೈದ್ಯಕೀಯ ಕಾಲೇಜುಗಳಿದ್ದರೆ, 38 ಖಾಸಗೀ ವೈದ್ಯಕೀಯ ಕಾಲೇಜುಗಳಿವೆ. ಅಂದರೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಏರುತ್ತಿದೆ, ಸರ್ಕಾರಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಈ ಸವಾಲುಗಳಿಗೆ ಎನ್‍ಇಪಿ-2020 ಉತ್ತರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗ ಶಾಲಾ ಕಾಲೇಜು ತೆರೆದಿವೆ. ಕೊರೊನಾ ಸಂಕಷ್ಟದಿಂದಾಗಿ ಜನರ ಆರ್ಥಿಕ ಪರಿಸ್ಥಿತಿ ಕೆಟ್ಟು ಹೋಗಿದೆ. ಹಾಗಾಗಿ ಉಚಿತವಾಗಿ ಬಸ್‌ಪಾಸ್ ಎಲ್ಲ ವಿದ್ಯಾರ್ಥಿಗಳಿಗೆ ವಿತರಿಸಬೇಕು ಎಂದು ಆಗ್ರಹಿಸಿದರು.
ಎಐಡಿಎಸ್‍ಒ ಜಿಲ್ಲಾ ಕಾರ್ಯದರ್ಶಿ ಕಾವ್ಯ, ಸೆಕ್ರೆಟರಿಯಟ್ ಸದಸ್ಯರಾದ ಪುಷ್ಪ, ವಿದ್ಯಾರ್ಥಿಗಳಾದ ನವೀನ್, ವಿನೋದ್, ದರ್ಶನ್, ಅವಿನಾಶ್, ಚೇತನಾ ಅವರೂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.