ಮಲೇಬೆನ್ನೂರು: ಭದ್ರಾ ಜಲಾಶಯದ ಬಲದಂಡೆ ನಾಲೆ ಸೀಳಿರುವುದನ್ನು ವಿರೋಧಿಸಿ ಬ್ಲಾಕ್ ಕಾಂಗ್ರೆಸ್ ವಿವಿಧ ಘಟಕಗಳ ಪದಾಧಿಕಾರಿಗಳು ಸೋಮವಾರ ಇಲ್ಲಿನ ಕರ್ನಾಟಕ ನೀರಾವರಿ ನಿಗಮದ 3ನೇ ವಿಭಾಗಿಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹರಿಹರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ‘ಕುಡಿಯುವ ನೀರು ನೀಡಲು ನಮ್ಮ ಅಭ್ಯಂತರ ಇಲ್ಲ. ಜಲಾಶಯದ ಕೆಳಭಾಗ ಕೇವಲ 500 ಮೀಟರ್ ಕೆಳಗೆ ನಾಲೆಯನ್ನು ಸೀಳಿರುವುದು ಜಲಾಶಯಕ್ಕೆ ಅಭದ್ರತೆ ಕಾಡುತ್ತಿದೆ. ಈ ಕಾಮಗಾರಿ ಸ್ಥಗಿತಗೊಳಿಸಿ ಜಲಾಶಯದ ಹಿನ್ನೀರಿನಿಂದ ಕುಡಿಯುವ ನೀರಿನ ಯೋಜನೆ ಮಾಡಬೇಕು’ ಎಂದು ಆಗ್ರಹಿಸಿದರು.
‘ನಾಲೆಯ ಕೆಳಹಂತದಲ್ಲಿ ದೊಡ್ಡ ಗಾತ್ರದ ಪೈಪ್ ಅಳವಡಿಸಿದರೆ ನಾಲೆ ನೀರಿನ ವೇಗೋತ್ಕರ್ಷ ಕಡಿಮೆ ಆಗುವುದು ಖಚಿತ. ಅಚ್ಚುಕಟ್ಟು ವ್ಯಾಪ್ತಿಯ ಕೊನೆಯ ಭಾಗದ ರೈತರಿಗೆ ದಾವಣಗೆರೆ ಹರಿಹರ ತಾಲ್ಲೂಕಿನ ಹೊಲಗಳಿಗೆ ನೀರಿನ ಲಭ್ಯತೆ ಕಡಿಮೆ ಆಗಲಿದೆ. ಈಗಾಗಲೇ ಅಚ್ಚುಕಟ್ಟು ವ್ಯಾಪ್ತಿಯ ರೈತರು ನಾಲೆ ನೀರಿನ ಕೊರತೆ ಅನುಭವಿಸಿ ಹೊಲ ಬೀಳು ಬಿಟ್ಟಿದ್ದಾರೆ. ಈ ಯೋಜನೆ ಕುರಿತು ಅಪಪ್ರಚಾರ ಮಾಡಿ ರೈತರಲ್ಲಿ ಸರ್ಕಾರದ ಬಗ್ಗೆ ಗೊಂದಲ ಸೃಷ್ಟಿಸುತ್ತಿರುವ ಕೆಲವು ವಿರೋಧ ಪಕ್ಷಗಳ ವಿರುದ್ಧವೂ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಮನವಿ ಮಾಡಿದರು.
ಮುಖಂಡರಾದ ಬಿ.ಎಂ. ವಾಗೇಶ್ ಸ್ವಾಮಿ, ಹನಗವಾಡಿ ಕುಮಾರ್, ಮುದೆಗೌಡ್ರ ಗಿರೀಶ, ಎಸ್.ಜಿ. ಪರಮೇಶ್ವರಪ್ಪ, ವಿರೂಪಾಕ್ಷಪ್ಪ, ಮಂಜುನಾಥ ಪಟೇಲ್, ನೀರು ಬಳಕೆದಾರರ ಮಹಾಮಂಡಲದ ಅಧ್ಯಕ್ಷ ವೈ.ದ್ಯಾವಪ್ಪ ರೆಡ್ಡಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಬಿ.ಅಬೀದ್ ಅಲಿ, ಬೆಣ್ಣೆಹಳ್ಳಿ ಹಾಲೇಶಪ್ಪ, ದಾವಣಗೆರೆ ಮಂಜುನಾಥ, ಜಿಗಳಿ ಅನಂದ್, ಸೈಯದ್ ಜಾಕಿರ್ ಹುಸೇನ್, ಕೆ.ಪಿ. ಗಂಗಾಧರ್, ಶಿವಕುಮಾರ್ ಸೇರಿ ಅಚ್ಚುಕಟ್ಟು ವ್ಯಾಪ್ತಿಯ ಕೊನೆಭಾಗದ ರೈತರು, ಕಾಂಗ್ರೆಸ್ ಪಕ್ಷದ ವಿವಿಧ ವಿಭಾಗದ ಪದಾಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.