ಜಗಳೂರು: ಪಟ್ಟಣದಲ್ಲಿ ಹಾದುಹೋಗಿರುವ ಮಲ್ಪೆ– ಮೊಳಕಾಲ್ಮುರು ರಾಜ್ಯ ಹೆದ್ದಾರಿಯನ್ನು ಮಧ್ಯಭಾಗದಿಂದ 69 ಅಡಿ ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿ ರಸ್ತೆ ಅಗಲೀಕರಣ ಹೋರಾಟ ಸಮಿತಿ ವತಿಯಿಂದ ಸೋಮವಾರ ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಕಾರರು ಮಹಾತ್ಮಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ತಾಲ್ಲೂಕು ಕಚೇರಿ ಮುಂಬಾಗ ಧರಣಿ ನಡೆಸಿದರು.
‘ಸಾರ್ವಜನಿಕ ಹಿತಾಸಕ್ತಿ ಮರೆತಿರುವ ಅಧಿಕಾರಿಗಳು ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಯಾಗಿದ್ದಾರೆ. ರಾಜ್ಯ ಹೆದ್ದಾರಿ ಪ್ರಾಧಿಕಾರದ ರಸ್ತೆ ವಿಸ್ತರಣೆ ನಿಯಮಗಳನ್ನು ಇಲ್ಲಿ ಉಲ್ಲಂಘಿಸಲಾಗಿದೆ. ಪಟ್ಟಣದ ಅಭಿವೃದ್ಧಿ ಮತ್ತು ನಾಗರಿಕರ ಸುರಕ್ಷತೆಗಾಗಿ ಹೆದ್ದಾರಿ ವಿಸ್ತರಣೆ ಆಗಲೇಬೇಕಿದೆ. ಭದ್ರಾ ಮೇಲ್ದಂಡೆ ಯೋಜನೆ ಜಾರಿ ಸೇರಿ ಎಲ್ಲ ರೀತಿಯ ನ್ಯಾಯಯುತ ಬೇಡಿಕೆಗಳಿಗೆ ಹೋರಾಟ ಅನಿವಾರ್ಯ’ ಎಂದು ನಿವೃತ್ತ ಪ್ರಾಂಶುಪಾಲ ಯಾದವರೆಡ್ಡಿ ಅಭಿಪ್ರಾಯಪಟ್ಟರು.
‘ಪಟ್ಟಣದಲ್ಲಿ ಸಂಚಾರ ದಟ್ಟಣೆಯಿಂದಾಗಿ ಸಾರ್ವಜನಿಕರು ನಿತ್ಯ ನರಕ ಅನುಭವಿಸುತ್ತಿದ್ದಾರೆ. ಖಾಸಗಿ ಬಸ್‌ನ ಚಕ್ರಕ್ಕೆ ಸಿಲುಕಿ ಎರಡು ಜೀವಗಳು ಬಲಿಯಾದ ಘಟನೆ ನಂತರವೂ ಜಿಲ್ಲಾಧಿಕಾರಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳ ಬೇಜವಾಬ್ದಾರಿ ಧೋರಣೆ ಜನರ ಆಕ್ರೋಶಕ್ಕೆ ಕಾರಣವಾಗಿದೆ’ ಎಂದು ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಮರೇನಹಳ್ಳಿ ಟಿ.ಬಸವರಾಜ್ ದೂರಿದರು.
‘ಬಾಡಿಗೆದಾರರು ಸರ್ಕಾರಿ ವಾಣಿಜ್ಯ ಮಳಿಗೆಗಳನ್ನು ಇಷ್ಟ ಬಂದಂತೆ ಅರೆಬರೆ ತೆರವು ಮಾಡಿಕೊಂಡು ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ್ದರೂ ಅವರನ್ನು ಕೇಳುವವರೇ ಇಲ್ಲವಾಗಿದೆ. ಲೋಕೋಪಯೋಗಿ ಇಲಾಖೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬಂಡವಾಳ ಶಾಹಿಗಳ ಹಿತಾಸಕ್ತಿಗೆ ನಿಂತಿರುವುದು ಖಂಡನೀಯ’ ಎಂದು ವಕೀಲ ಆರ್. ಓಬಳೇಶ್ ಆರೋಪಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಸಣ್ಣ ಓಬಯ್ಯ, ‘ಜಿಲ್ಲಾಧಿಕಾರಿ ಹೋರಾಟಕ್ಕೆ ಸ್ಪಂದಿಸಿ ಕೂಡಲೇ ಸ್ಥಳಕ್ಕೆ ಬಂದು ರಸ್ತೆ ವಿಸ್ತರಣೆ ಕಾರ್ಯದ ಕುರಿತು ಸ್ಪಷ್ಟೀಕರಣ ನೀಡಬೇಕು. ಇಲ್ಲವಾದರೆ ಉಗ್ರಸ್ವರೂಪದ ಹೋರಾಟ ಕೈಗೊಳ್ಳಳಾಗುವುದು’ ಎಂದು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದು ಬೆಂಬಲ ವ್ಯಕ್ತಪಡಿಸಿದ ಮಾಜಿ ಶಾಸಕ ಎಚ್.ಪಿ.ರಾಜೇಶ್, ‘ಜಿಲ್ಲಾಧಿಕಾರಿ ತಮ್ಮ ಮಾತಿಗೆ ಬದ್ಧರಾಗಿ 69 ಅಡಿ ವಿಸ್ತರಣೆ ಮಾಡುವ ಮೂಲಕ ಗೊಂದಲಕ್ಕೆ ತೆರೆ ಎಳೆಯಬೇಕು. ವಿಳಂಬ ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ರಾಜಪ್ಪ ವ್ಯಾಸಗೊಂಡನಹಳ್ಳಿ, ಬಿ.ಲೋಕೇಶ್, ಸತೀಶ್ ಮಲೆಮಾಚಿಕೆರೆ, ಸತ್ಯಮೂರ್ತಿ, ಮಹಾಲಿಂಗಪ್ಪ ಎಚ್.ಎಂ ಹೊಳೆ, ಮಾದಿಹಳ್ಳಿ ಮಂಜಪ್ಪ, ಕುಬೇಂದ್ರಪ್ಪ, ಶಾಹಿನಾಬಾನು, ಧನ್ಯಕುಮಾರ್, ಕುಮಾರ್, ವಕೀಲರಾದ ಭೂಪತಿ, ಅಂಜಿನಪ್ಪ, ತಿಪ್ಪೇಸ್ವಾಮಿ, ಮಹಾಂತೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.