ADVERTISEMENT

ಪ್ರತ್ಯೇಕ ಲಾಗಿನ್‌ಗೆ ಪತ್ರ ಬರಹಗಾರರ ಪಟ್ಟು

ಉಪನೋಂದಣಾಧಿಕಾರಿ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಮುಷ್ಕರ ಆರಂಭ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 5:21 IST
Last Updated 10 ಡಿಸೆಂಬರ್ 2025, 5:21 IST
ದಾವಣಗೆರೆಯ ಉಪನೋಂದಣಾಧಿಕಾರಿ ಕಚೇರಿ ಎದುರು ಜಿಲ್ಲಾ ದಸ್ತಾವೇಜು ಬರಹಗಾರರ ಒಕ್ಕೂಟದ ಸದಸ್ಯರು ಮಂಗಳವಾರ ಧರಣಿ ನಡೆಸಿದರು
ದಾವಣಗೆರೆಯ ಉಪನೋಂದಣಾಧಿಕಾರಿ ಕಚೇರಿ ಎದುರು ಜಿಲ್ಲಾ ದಸ್ತಾವೇಜು ಬರಹಗಾರರ ಒಕ್ಕೂಟದ ಸದಸ್ಯರು ಮಂಗಳವಾರ ಧರಣಿ ನಡೆಸಿದರು   

ದಾವಣಗೆರೆ: ನೋಂದಣಿ ಮತ್ತು ಮುದ್ರಾಂಕ ಇಲಾಖೆ ದಸ್ತಾವೇಜು ಬರಹಗಾರರಿಗೆ ‘ಡೀಡ್‌ ರೈಟರ್ಸ್‌’ ಎಂಬ ಪ್ರತ್ಯೇಕ ಲಾಗಿನ್‌ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ದಸ್ತಾವೇಜು ಬರಹಗಾರರ ಒಕ್ಕೂಟದ ಸದಸ್ಯರು ಮಂಗಳವಾರದಿಂದ ಅನಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ನಗರದ ಉಪನೋಂದಣಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಪ್ರತಿಭಟನಕಾರರು ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು. ರೈತರು, ಆಸ್ತಿ ಖರೀದಿದಾರರು ಹಾಗೂ ಮಾರಾಟಗಾರರ ಬೆಂಬಲ ಕೋರಿದರು.

ರಾಜ್ಯ ಸರ್ಕಾರ ಆಸ್ತಿಗಳ ಡಿಜಲೀಕರಣದ ಹೆಸರಿನಲ್ಲಿ ‘ಕಾವೇರಿ 1’ ಮತ್ತು ‘ಕಾವೇರಿ 2’ ತಂತ್ರಾಂಶ ಜಾರಿಗೊಳಿಸಿದೆ. ಈಗ ‘ಕಾವೇರಿ 3’ ತಂತ್ರಾಂಶದ ಅನುಷ್ಠಾನಕ್ಕೆ ಮುಂದಾಗಿದೆ. ಇದರಿಂದ ದಸ್ತಾವೇಜು ಬರಹಗಾರರಿಗೆ ಯಾವುದೇ ಕೆಲಸ ಇಲ್ಲದಂತೆ ಆಗುತ್ತದೆ. ಇದೇ ವೃತ್ತಿಯನ್ನು ನಂಬಿಕೊಂಡ ನೂರಾರು ಜನರಿಗೆ ತೊಂದರೆ ಆಗಲಿದೆ. ಇದರಿಂದ ರಾಜ್ಯದ 12 ಸಾವಿರ ಜನರು ಅತಂತ್ರರಾಗುವ ಸಾಧ್ಯತೆ ಇದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಪತ್ರ ಬರಹಗಾರರಿಗೆ ‘ಡೀಡ್‌ ರೈಟರ್ಸ್‌’ ಲಾಗಿನ್‌ ನೀಡಿದರೆ ಅನುಕೂಲವಾಗುತ್ತದೆ. ಎಲ್ಲ ನೋಂದಣಿ ದಾಸ್ತಾವೇಜುಗಳಿಗೆ ‘ಬಿ’ ಕಾಲಂ ಕಡ್ಡಾಯಗೊಳಿಸಬೇಕು. ಈ ಕುರಿತು ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಒಕ್ಕೂಟದ ಅಧ್ಯಕ್ಷ ಡಿ.ಕೆ. ಸಂಗಮೇಶ ಎಲಿಗಾರ್ ಬೇಸರ ವ್ಯಕ್ತಪಡಿಸಿದರು.

‘ಪತ್ರ ಬರಹಗಾರರ ಹುದ್ದೆ ತೆಗೆಯುವುದಿಲ್ಲ ಎಂಬುದಾಗಿ ಹೇಳುತ್ತಲೇ ಹೊಸ ತಂತ್ರಾಂಶಗಳನ್ನು ಜಾರಿಗೆ ತರಲಾಗುತ್ತಿದೆ. ಇದರಿಂದ ಪತ್ರ ಬರಹಗಾರರು ಮೂಲೆಗುಂಪು ಆಗುತ್ತಿದ್ದಾರೆ. ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಡಿ.16ರಂದು ಬೆಳಗಾವಿಯ ಸುವರ್ಣಸೌಧದ ಎದುರು ಹೋರಾಟ ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಸ್ಪಂದಿಸದೇ ಇದ್ದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಸಂಘದ ಮುಖಂಡರಾದ ಡಿ.ಆರ್. ಗಿರಿರಾಜು, ಧರ್ಮರಾಜ್ ಏಕಬೋಟೆ, ಈ. ಕೃಷ್ಣಮೂರ್ತಿ, ವಿಶ್ವನಾಥ್‌, ನಾಗರಾಜ್‌, ಕರಿಬಸಪ್ಪ ಬಳ್ಳಿ, ಬಿ.ವಿ.ಶಿವಾನಂದ, ಬಿ.ವಿ.ರಾಜಶೇಖರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.