ADVERTISEMENT

ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ

ಭೂಸುಧಾರಣೆ, ಎಪಿಎಂಸಿ ಕಾಯ್ದೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 16:05 IST
Last Updated 25 ಸೆಪ್ಟೆಂಬರ್ 2020, 16:05 IST
ಭೂಸುಧಾರಣೆ, ಎಪಿಎಂಸಿ ಹಾಗೂ ಇತರೆ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವ ಕ್ರಮವನ್ನು ವಿರೋಧಿಸಿ ದಾವಣಗೆರೆಯ ಅವರಗೆರೆ ಬಳಿಯ ಬಾಡ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯ (ಎನ್ಎಚ್–4) ವಾಹನ ಸಂಚಾರವನ್ನು ತಡೆದು ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್
ಭೂಸುಧಾರಣೆ, ಎಪಿಎಂಸಿ ಹಾಗೂ ಇತರೆ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವ ಕ್ರಮವನ್ನು ವಿರೋಧಿಸಿ ದಾವಣಗೆರೆಯ ಅವರಗೆರೆ ಬಳಿಯ ಬಾಡ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯ (ಎನ್ಎಚ್–4) ವಾಹನ ಸಂಚಾರವನ್ನು ತಡೆದು ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್   

ದಾವಣಗೆರೆ: ಭೂ ಸುಧಾರಣೆ,ಎಪಿಎಂಸಿ ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ರೈತ ಸಂಘ ಹಸಿರುಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ), ಸಿಪಿಐ, ಸಿಐಟಿಯು, ಎಐಕೆಎಸ್‌, ಕಿಸಾನ್ ಕಾಂಗ್ರೆಸ್ ಸಂಘಟನೆಗಳು ಶುಕ್ರವಾರ ಬಾಡ ಕ್ರಾಸ್ ಬಳಿರಾಷ್ಟ್ರೀಯ ಹೆದ್ದಾರಿ 4ರಲ್ಲಿ ವಾಹನಗಳನ್ನುತಡೆದು ಪ್ರತಿಭಟನೆ ನಡೆಸಿದವು.

ಬೆಳಿಗ್ಗೆ ಒಂದೂವರೆ ಗಂಟೆಗಳ ಕಾಲ ಹೆದ್ದಾರಿ ತಡೆ ನಡೆಸಿದ ಪ್ರತಿಭಟನಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದಾಗಿ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು. ಆಂಬುಲೆನ್ಸ್‌ ಹೊರತುಪಡಿಸಿ ಉಳಿದ ವಾಹನಗಳನ್ನು ತಡೆಯಲಾಯಿತು.

ಕಾರ್ಮಿಕ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ ಮಾತನಾಡಿ, ‘ಎಪಿಎಂಸಿ, ಭೂಸುಧಾರಣಾ ಕಾಯ್ದೆಗಳ ತಿದ್ದುಪಡಿಯಿಂದ ರೈತರ ಉದ್ಧಾರ ಸಾಧ್ಯವಿಲ್ಲ. ರೈತರು ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂದು ಕಾಯ್ದೆ ಹೇಳುತ್ತದೆ. ಆದರೆ ರೈತರು ಕೇಳಿದ ದರವನ್ನು ಬಹುರಾಷ್ಟ್ರೀಯ ಕಂಪನಿಗಳುಕೊಟ್ಟು ಉತ್ಪನ್ನವನ್ನು ಖರೀದಿಸುತ್ತವೆ ಎಂಬುದು ಸುಳ್ಳಿನ ಕಂತೆ’ ಎಂದು ಆರೋಪಿಸಿದರು.

ADVERTISEMENT

ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಬಣ)ಯ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ‘ಬೆಳೆಗೆ ದರ ನಿಗದಿಪಡಿಸುವ ಅಧಿಕಾರ ರೈತರಿಗೆ ನೀಡಬೇಕು. ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸುವವರನ್ನು ಜೈಲಿಗೆ ಹಾಕುತ್ತೇವೆ ಎಂದು ಕಾಯ್ದೆಯಲ್ಲಿ ತಿದ್ದುಪಡಿ ತರಲಿ. ಆಗ ನಾವು ಪ್ರಧಾನಿಯವರನ್ನು ಒಪ್ಪುತ್ತೇವೆ. ಈಗಾಗಲೇ ಶೇ 80ರಷ್ಟು ರೈತರು ತಮ್ಮ ಉತ್ಪನ್ನಗಳನ್ನು ಹೊರಗೆ ಮಾರುತ್ತಿದ್ದಾರೆ. ಸ್ವಾತಂತ್ರ್ಯ ಕೊಡುತ್ತೇವೆ ಎಂದು ಹೇಳಿ ವ್ಯಾಪಾರದ ಜೈಲಿನೊಳಗೆ ರೈತರನ್ನು ಬಂಧಿ ಮಾಡುತ್ತಿದ್ದಾರೆ’ ಎಂದು ದೂರಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿ, ‘ಬೆಳೆಗಳನ್ನು ಜಮೀನಿನಲ್ಲಿಯೇ ಮಾರಾಟ ಮಾಡುತ್ತಿದ್ದೇವೆ. ರೈತರಿಗೆ ಸ್ವಾತಂತ್ರ್ಯ ಕೊಡುತ್ತಿದ್ದೇವೆ ಎಂದು ಹೇಳುವ ಸರ್ಕಾರ ನಿಜವಾದ ಸ್ವಾತಂತ್ರ್ಯ ಕೊಡಲು ಹೊರಟಿರುವುದು ಎಂಎನ್‌ಸಿಗಳಿಗೆ. ಈಗ ಇರುವ ವರ್ತಕರು ನಮ್ಮ ರಾಜ್ಯದವರು. ಅವರನ್ನೇ ನಿಯಂತ್ರಿಸಲು ಸಾಧ್ಯವಿಲ್ಲದ ಸರ್ಕಾರಕ್ಕೆ ಎಂಎನ್‌ಸಿಗಳನ್ನು ನಿಯಂತ್ರಿಸಲು ಸಾಧ್ಯವೇ? ಸಕ್ಕರೆ ಕಾರ್ಖಾನೆಗಳನ್ನು ಮಾರಾಟ ಮಾಡಲು ಹೊರಟಿದ್ದಾರೆ. ಹಲವು ಸರ್ಕಾರಿ ಕಂಪನಿಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಸರ್ಕಾರ ಮುಂದೊಂದು ದಿನ ದೇಶವನ್ನು ಮಾರಿದರೂ ಅಚ್ಚರಿಪಡಬೇಕಿಲ್ಲ’ ಎಂದು ಕಿಡಿ ಕಾರಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್‌. ಬಸವಂತಪ್ಪ ಮಾತನಾಡಿ, ‘ರೈತ ಸಂಘಟನೆಗಳು 28ರಂದು ಕರೆ ನೀಡಿರುವ ಬಂದ್‌ಗೆ ಬೆಂಬಲ ಸೂಚಿಸಬೇಕು. ದಾವಣಗೆರೆ ವರ್ತಕರು ಸಹಕರಿಸಬೇಕು’ ಎಂದು ಹೇಳಿದರು.

ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಶಿವಗಂಗಾ ಬಸವರಾಜ್, ಮುಖಂಡರಾದ ಎಚ್‌.ಜಿ. ಉಮೇಶ್‌, ಶ್ರೀನಿವಾಸ್, ಆನಂದರಾಜ್, ಅರವಿಂದ ಕೆ.ಎಸ್, ಎಚ್.ಕೆ. ಲಿಂಗರಾಜು, ಜಯಣ್ಣ, ಹಾಲೇಶ್, ಇಟಗಿ ಬಸವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.