ದಾವಣಗೆರೆ: ಮನೆಯ ಹಕ್ಕುಪತ್ರವನ್ನು ತಮ್ಮ ಹೆಸರಿಗೆ ಬರೆಸಿಕೊಂಡು ಮೂವರು ಪುತ್ರರು ಮನೆಯಿಂದ ಹೊರಗೆ ಹಾಕಿದ್ದರಿಂದ ಪುಟ್ಟ ಚಹಾ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸಲು ಹೆಣಗಾಡುತ್ತಿದ್ದ ವೃದ್ಧ ದಂಪತಿಗೆ ಉಪವಿಭಾಗಾಧಿಕಾರಿ ನ್ಯಾಯಾಲಯ ಮನೆಯನ್ನು ವಾಪಸ್ ಕೊಡಿಸಿ ನ್ಯಾಯ ಒದಗಿಸಿಕೊಟ್ಟಿದೆ.
ದಾವಣಗೆರೆ ಉಪವಿಭಾಧಿಕಾರಿ ಮಮತಾ ಹೊಸಗೌಡರ್ ಅವರು 2019ರ ಡಿಸೆಂಬರ್‌ನಿಂದ ಸೆಪ್ಟೆಂಬರ್ 2020ರವರೆಗೆ ಒಟ್ಟು ಎಂಟು ಪ್ರಕರಣಗಳಿಗೆ ಪೋಷಕರ ಪರ ತೀರ್ಪು ನೀಡಿದ್ದಾರೆ. ಮಕ್ಕಳ ಹೆಸರಿಗೆ ಬರೆಸಿಕೊಂಡಿದ್ದ ಆಸ್ತಿಯನ್ನು ಪುನಃ ತಂದೆ–ತಾಯಂದಿರಿಗೆ ಕೊಡಿಸಿದ್ದಾರೆ.
ಚನ್ನಗಿರಿ ತಾಲ್ಲೂಕಿನ ಹಿರೇಕೊಗಲೂರಿನ ಶಂಕರಪ್ಪ ಹಾಗೂ ಅಕ್ಕನಾಗಮ್ಮ ದಂಪತಿ ಅವರ ಆಸ್ತಿಯನ್ನು ಬರೆಸಿಕೊಂಡ ಮಕ್ಕಳು, ಅವರನ್ನು ಮನೆಯಿಂದ ಹೊರಹಾಕಿದ್ದರು. ದಾಖಲಾತಿ ತರಿಸಿಕೊಂಡ ಉಪವಿಭಾಗಾಧಿಕಾರಿ, ‘ಅವರು ಸಂಪಾದಿಸಿದ್ದ ಆಸ್ತಿಯಲ್ಲಿ ಅವರೇ ವಾಸಿಸಬೇಕು. ದಬ್ಬಾಳಿಕೆ ಸರಿಯಲ್ಲ’ ಎಂದು ಆದೇಶ ಮಾಡಿದ್ದಾರೆ.
ಕಾಯ್ದೆ ಏನು ಹೇಳುತ್ತದೆ?: ಹಿರಿಯ ನಾಗರಿಕರ ಪಾಲನೆ, ಪೋಷಣೆ ಹಾಗೂ ಸಂರಕ್ಷಣೆ ಕಾಯ್ದೆ 2007 ಅಡಿ ಮಕ್ಕಳು ಹಿರಿಯ ನಾಗರಿಕರಾದ ತಂದೆ–ತಾಯಂದಿರ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರೆ ಅವರ ಪಾಲನೆ, ಪೋಷಣೆ ಮಾಡಬೇಕು. ಜೊತೆಗೆ ರಕ್ಷಣೆ ನೀಡಬೇಕು. ಒಂದು ವೇಳೆ ಪಾಲನೆ, ಪೋಷಣೆ ಮಾಡದಿದ್ದರೆ ಉಪವಿಭಾಗಾಧಿಕಾರಿ ನ್ಯಾಯಾಲಯದ ಮೆಟ್ಟಿಲೇರಬಹುದು.
ಮೋಸದಿಂದ ಪಾಲಕರ ಮನೆ ಅಥವಾ ಆಸ್ತಿಯನ್ನು ಮಕ್ಕಳು ತಮ್ಮ ಹೆಸರಿಗೆ ಮಾಡಿಕೊಂಡಿದ್ದರೆ ಅಂತಹ ಆಸ್ತಿಯನ್ನು ಮರಳಿ ಪಾಲಕರ ಹೆಸರಿಗೆ ವರ್ಗಾಯಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಅಲ್ಲದೇ ಅಂತಹ ಮಕ್ಕಳನ್ನು ಪೊಲೀಸರ ನೆರವಿನಿಂದ ಹೊರಹಾಕಿ ಆಸ್ತಿಯನ್ನು ಮರಳಿ ಪೋಷಕರ ವಶಕ್ಕೆ ನೀಡಬಹುದು.
ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಗ್ರಾಮದ ಕೃಷ್ಣಪ್ಪ ಅವರ ಪತ್ನಿ ಹೊಸೂರಮ್ಮ ಅವರಿಗೆ ಇಬ್ಬರು ಮಕ್ಕಳಿದ್ದರು. ಮಕ್ಕಳು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಆಸೆಯಿಂದ ಕೃಷ್ಣಪ್ಪ ಅವರು ಆಸ್ತಿಯನ್ನು ಮಕ್ಕಳ ಹೆಸರಿಗೆ ಕ್ರಯಪತ್ರ ಮಾಡಿಕೊಟ್ಟಿದ್ದರು. ಪತಿ ನಿಧನರಾದ ನಂತರ ವಯಸ್ಸಾಗಿದ್ದ ಹೊಸೂರಮ್ಮ ಅವರನ್ನು ಮಕ್ಕಳು ಸರಿಯಾಗಿ ಪೋಷಿಸುತ್ತಿರಲಿಲ್ಲ. ತಾಯಿಗೆ ಸರಿಯಾಗಿ ಊಟ ನೀಡುತ್ತಿರಲಿಲ್ಲ. ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ಹೊಸೂರಮ್ಮ ‘ನನಗೆ ಜಮೀನು ಕೊಡಿಸಿ, ಮಾರಿಕೊಂಡಾದರೂ ಜೀವನ ಸಾಗಿಸುತ್ತೇನೆ’ ಎಂದು ಉಪವಿಭಾಗಾಧಿಕಾರಿ ನ್ಯಾಯಾಲಯದ ಮೊರೆಹೋಗಿದ್ದರು. ಹೊಸೂರಮ್ಮ ಪರ ತೀರ್ಪು ಬಂತು.
ಏನೇನು ಬೇಕು?: ಮಕ್ಕಳು ಆಸ್ತಿ ಬರೆಸಿಕೊಂಡು ಹೊರ ಹಾಕಿದ್ದರೆ ಅವರ ಆಸ್ತಿಯನ್ನು ಮರಳಿ ಪಡೆಯಲು ಹಿರಿಯ ನಾಗರಿಕ ಪ್ರಮಾಣ ಪತ್ರ ಕಡ್ಡಾಯ. 60 ವರ್ಷ ಮೇಲ್ಪಟ್ಟಿರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.