ADVERTISEMENT

ಕಿಸಾನ್ ಸಮ್ಮಾನ್‌ಗೆ ಶೀಘ್ರ ನೋಂದಣಿಯಾಗಲಿ

ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಶಿವಮೂರ್ತಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 16:12 IST
Last Updated 18 ಜೂನ್ 2019, 16:12 IST
ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ
ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ   

ದಾವಣಗೆರೆ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಿಲ್ಲೆಯ ಅರ್ಹ ರೈತರನ್ನು ಕೂಡಲೇ ನೋಂದಾಯಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಸೂಚನೆ ನೀಡಿದರು.

ತಾಲ್ಲೂಕುಗಳ ಕಾರ್ಯನಿರ್ವಹಣಾಧಿಕಾರಿಗಳು, ತಹಶೀಲ್ದಾರರು ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಸಹಾಯಕ ನಿರ್ದೇಶಕರೊಂದಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರ್ದೇಶನಗಳನ್ನು ನೀಡಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಅವರು ಮಾತನಾಡಿದರು.

ಸರ್ಕಾರಿ ನೌಕರರನ್ನು ಹೊಂದಿರುವ ಕುಟುಂಬ, ₹ 10 ಸಾವಿರಕ್ಕಿಂತ ಹೆಚ್ಚು ಪಿಂಚಣಿ ಪಡೆಯುತ್ತಿರುವ, ಆದಾಯ ತೆರಿಗೆ ಭರಿಸುವ, ವಕೀಲರು, ವೈದ್ಯರು ಇತರೆ ವೃತ್ತಿನಿರತರು ಇರುವ ರೈತ ಕುಟುಂಬಗಳನ್ನು ಹೊರತುಪಡಿಸಿ ಎಲ್ಲ ರೈತರು ಈ ಯೋಜನೆಯ ಫಲಾನುಭವಿಗಳಾಗಬಹುದು ಎಂದು ತಿಳಿಸಿದರು.

ADVERTISEMENT

ಪ್ರತಿ ರೈತ ಕುಟುಂಬಕ್ಕೆ ನಾಲ್ಕು ತಿಂಗಳಿಗೆ ₹ 2,000ದಂತೆ ಒಟ್ಟು ₹ 6,000 ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು. ಜಿಲ್ಲೆಯಲ್ಲಿ 2.29 ಲಕ್ಷ ರೈತರಿದ್ದು ಇದುವರೆಗೆ 57 ಸಾವಿರ ಅರ್ಜಿಗಳನ್ನು ಮಾತ್ರ ಸಂಗ್ರಹಿಸಲಾಗಿದೆ. ಆದ್ದರಿಂದ ಪ್ರತಿ ಅರ್ಹ ರೈತರಿಗೆ ಈ ಯೋಜನೆಯನ್ನು ತಲುಪಿಸಲು ಸಮರೋಪಾದಿಯಲ್ಲಿ ನಿಯೋಜಿತ ಅಧಿಕಾರಿಗಳು ಕೆಲಸ ಮಾಡಬೇಕು ಎಂದರು.

ರೈತರಿಂದ ಕೇವಲ ದೃಢೀಕರಿಸಿದ ಅರ್ಜಿ ಮತ್ತು ಆಧಾರ್ ಸಂಗ್ರಹಿಸಬೇಕು. ಪಹಣಿ ಸಹಿತ ಬೇರೇನೂ ಕೇಳಬಾರದು. ಇದನ್ನು ಡಾಟಾ ಎಂಟ್ರಿ ಮಾಡಿಸುವುದು ಅತಿ ಮುಖ್ಯ ಎಂದರು.

ಜಿಲ್ಲೆಯೂ ಉತ್ತಮ ಗುರಿಸಾಧಿಸಲು ಯೋಜನೆ ರೂಪಿಸಲಾಗಿದೆ. ಇನ್ನು ಮೂರು ದಿನಗಳ ಒಳಗೆ ಗುರಿ ಸಾಧಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಮುಂಬರುವ ಶನಿವಾರ-ಭಾನುವಾರ ಕೂಡ ಕೆಲಸ ಮಾಡಬೇಕು. ಅತ್ಯುತ್ತಮ ಕೆಲಸ ನಿರ್ವಹಿಸುವವರಿಗೆ ಜಿಲ್ಲಾಡಳಿತದಿಂದ ಬಹುಮಾನ ನೀಡಲಾಗುವುದು ಎಂದು ಹೇಳಿದರು.

ಇಒ, ತಹಶೀಲ್ದಾರ್ ಹಾಗೂ ಇತರೆ ಅಧಿಕಾರಿಗಳಿಗೆ ಸೆಲ್ಫ್ ಡಿಕ್ಲರೇಷನ್ ತೆಗೆದುಕೊಳ್ಳುವ ಬಗ್ಗೆ ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ ವಿವರಿಸಿದರು.

ವಿಡಿಯೊ ಕಾನ್ಫರೆನ್ಸ್‌ನಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಭೀಮಾನಾಯ್ಕ, ಈ ಯೋಜನೆಯ ನೋಡಲ್ ಅಧಿಕಾರಿಗಳಾದ ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಭೂಸ್ವಾಧೀನಾಧಿಕಾರಿ ರೇಷ್ಮಾ, ತೋಟಗಾರಿಕೆ ಇಲಾಖೆ ಡಿಡಿ ಲಕ್ಷ್ಮೀಕಾಂತ ಬೊಮ್ಮನ್ನರ್, ಕೃಷಿ ಇಲಾಖೆ ಡಿಡಿ ಹಂಸವೇಣಿ, ತಹಶೀಲ್ದಾರ್ ಸಂತೋಷ್‌ಕುಮಾರ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.