ADVERTISEMENT

ರಫೇಲ್‌ ಹಗರಣ: ರಾಹುಲ್‌ ಗಾಂಧಿ ಮಾತು ನಿಜವಾಗುತ್ತಿದೆ: ಎಸ್‌.ಆರ್‌. ಪಾಟೀಲ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 2:40 IST
Last Updated 6 ಜುಲೈ 2021, 2:40 IST
ಎಸ್‌.ಆರ್‌. ಪಾಟೀಲ
ಎಸ್‌.ಆರ್‌. ಪಾಟೀಲ   

ದಾವಣಗೆರೆ: ಫ್ರಾನ್ಸ್‌ನಿಂದ ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರಾಹುಲ್‌ ಗಾಂಧಿ ಹಿಂದೆ ಹೇಳಿದ್ದ ಮಾತು ಈಗ ನಿಜವಾಗುತ್ತಿದೆ. ಇಲ್ಲಿ ಆ ಬಗ್ಗೆ ತನಿಖೆ ನಡೆಸಲು ಸದನ ಸಮಿತಿ ಮಾಡಲೂ ಕೇಂದ್ರ ಸರ್ಕಾರ ಒಪ್ಪಿಲ್ಲ. ಆದರೆ ಈಗ ಫ್ರಾನ್ಸ್‌ನಲ್ಲಿ ತನಿಖೆ ಮಾಡಲು ಆದೇಶವಾಗಿದೆ ಎಂದು ಎಸ್‌.ಆರ್‌.ಪಾಟೀಲ ಟೀಕಿಸಿದರು.

₹ 57 ಸಾವಿರ ಕೋಟಿ ವೆಚ್ಚದ ಖರೀದಿಯಲ್ಲಿ ದೊಡ್ಡಮಟ್ಟದ ಅವ್ಯವಹಾರ ನಡೆದಿದೆ ಎಂದು ಹಿಂದೆ ರಾಹುಲ್‌ ಹೇಳಿದ್ದರು ಎಂದು ಸೋಮವಾರ ದಾವಣಗೆರೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಮಾಧ್ಯಮಗಳನ್ನೂ ಇದು ಬಿಟ್ಟಿಲ್ಲ. ಮಾಧ್ಯಮ ಸ್ವಾತಂತ್ರ್ಯದಲ್ಲಿ ಈಗ ಭಾರತ ವಿಶ್ವದಲ್ಲಿ 140ನೇ ಸ್ಥಾನಕ್ಕೆ ಕುಸಿದಿದೆ ಎಂದು ವಿವರಿಸಿದರು.

ADVERTISEMENT

‘ಚಕ್ಕಡಿ, ಸೈಕಲ್‌ನಲ್ಲಿ ಬಂದಿದ್ದರು’

ಹಿಂದೆ ಪೆಟ್ರೋಲ್‌ ಬೆಲೆ 7 ಪೈಸೆ ಜಾಸ್ತಿಯಾದಾಗ ಅದರ ವಿರುದ್ಧ ಪ್ರತಿಭಟನೆ ನಡೆಸಿದ್ದ ಆಗಿನ ಬಿಜೆಪಿ ನಾಯಕ ಅಟಲ್‌ ಬಿಹಾರಿ ವಾಜಪೇಯಿ ಚಕ್ಕಡಿಯಲ್ಲಿ ಸಂಸತ್ತಿಗೆ ಬಂದಿದ್ದರು. ಯುಪಿಎ ಸರ್ಕಾರ ಇರುವಾಗ ಪೆಟ್ರೋಲ್‌ ಬೆಲೆ ₹ 2 ಜಾಸ್ತಿಯಾದಾಗ ಬಿಜೆಪಿಯವರು ಸೈಕಲ್‌ನಲ್ಲಿ ಬಂದಿದ್ದರು. ಅಡುಗೆ ಅನಿಲ ಬೆಲೆಯನ್ನು ಯುಪಿಎ ₹ 10 ಏರಿಸಿದಾಗ ಬಿಜೆಪಿಯ ಮಹಿಳಾ ಸಂಸದರು, ಮಹಿಳಾ ಶಾಸಕರು ಸಿಲಿಂಡರ್‌ ಹೊತ್ತುಕೊಂಡು ದೇಶದಾದ್ಯಂತ ಹೋರಾಟ ಮಾಡಿದ್ದರು. ಆಗ ಅಡುಗೆ ಅನಿಲ ಬೆಲೆ ₹ 350 ಇತ್ತು. ಈಗ ₹ 1000ದ ಹತ್ತಿರ ಬಂದಿದೆ. ಆಗಿನ ಹೋರಾಟಗಾರರು ಎಲ್ಲಿ ಹೋದರು ಎಂದು ಪಾಟೀಲ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.