ADVERTISEMENT

ದಾವಣಗೆರೆ: ಬಿಸಿಲಿನ ಬೇಗೆಗೆ ತಂಪೆರದ ಮಳೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 4:01 IST
Last Updated 29 ಮಾರ್ಚ್ 2021, 4:01 IST
ಭಾನುವಾರ ಸಂಜೆ ಸುರಿದ ಮಳೆಗೆ ದಾವಣಗೆರೆಯ ಶಾಮನೂರು ರಸ್ತೆಯಲ್ಲಿ ರೈತರು ಟ್ಯಾಕ್ಟರ್‌ನಲ್ಲಿ ಪ್ಲಾಸ್ಟಿಕ್ ಹೊದ್ದು ಸಾಗುತ್ತಿರುವ ದೃಶ್ಯ ಕಂಡು ಬಂತು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಭಾನುವಾರ ಸಂಜೆ ಸುರಿದ ಮಳೆಗೆ ದಾವಣಗೆರೆಯ ಶಾಮನೂರು ರಸ್ತೆಯಲ್ಲಿ ರೈತರು ಟ್ಯಾಕ್ಟರ್‌ನಲ್ಲಿ ಪ್ಲಾಸ್ಟಿಕ್ ಹೊದ್ದು ಸಾಗುತ್ತಿರುವ ದೃಶ್ಯ ಕಂಡು ಬಂತು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ನಗರ ಸೇರಿ ಜಿಲ್ಲೆಯ ವಿವಿಧೆಡೆ ಭಾನುವಾರ ಗುಡುಗು ಸಹಿತ ಮಳೆಯಾಗಿದ್ದು, ಬಿಸಿಲಿನಿಂದ ಬಸವಳಿದ ಜನರಿಗೆ ತಂಪನ್ನೆರೆಯಿತು.

ತ್ಯಾವಣಿಗೆ, ಸಂತೇಬೆನ್ನೂರು, ನ್ಯಾಮತಿ, ಮಾಯಕೊಂಡ, ಉಚ್ಚಂಗಿದುರ್ಗ ಮುಂತಾದ ಕಡೆಗಳಲ್ಲಿ ಮಳೆಯಾಗಿದ್ದು, ಹೊನ್ನಾಳಿ, ಹರಿಹರ ಮತ್ತು ಹರಪನಹಳ್ಳಿಯಲ್ಲಿ ಮೋಡಕವಿದ ವಾತಾವರಣವಿತ್ತು.

ನಗರದಲ್ಲಿ ಸುಮಾರು 20 ನಿಮಿಷಗಳ ಕಾಲ ಸುರಿದ ಮಳೆಯಿಂದಾಗಿ ರಸ್ತೆ ಮತ್ತು ಚರಂಡಿಗಳಲ್ಲಿ ನೀರು ಹರಿಯಿತು. ಗಾಳಿ ಮತ್ತು ಮಳೆಯಿಂದ ವಾಹನ ಸವಾರರು ಪರದಾಡಿದರು. ಪಾದಚಾರಿಗಳು ಮಳೆಯಿಂದ ರಕ್ಷಿಸಿಕೊಳ್ಳಲು ಅಂಗಡಿ ಮುಂಗಟ್ಟುಗಳ ಆಶ್ರಯ ಪಡೆದರು.ಮಳೆಯ ಹನಿಗಳು ಬೀಳುತ್ತಿದ್ದಂತೆಯೇ ಮಣ್ಣಿನ ವಾಸನೆ ಮೂಗಿಗೆ ಬಡಿಯಿತು. ಹೋಳಿ ಹುಣ್ಣಿಮೆಗೆ ಮಳೆ ಬರುವುದು ವಾಡಿಕೆ. ಅಂತೆಯೇ ಮಳೆ ಆಗಿದೆ.

ADVERTISEMENT

‘ಈ ಮಳೆ ಅಡಿಕೆ ಬೆಳೆಗಾರರಿಗೆ ಅನುಕೂಲ’ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್.

ಉಚ್ಚಂಗಿದುರ್ಗ ವರದಿ: ಅರಸೀಕೆರೆ ಹೋಬಳಿಯ ಉಚ್ಚಂಗಿದುರ್ಗ, ಹಿರೇಮೆಗಳಗೆರೆ, ಅಣಜಿಗೆರೆ, ಚಟ್ನಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೇಸಿಗೆ ಆರಂಭದ ಮೊದಲ ಮಳೆ ಭಾನುವಾರ ತಂಪೆರೆಯಿತು.

ಬಿರುಗಾಳಿ ಸಹಿತ ಗುಡುಗು, ಮಿಂಚಿನೊಂದಿಗೆ ಆರಂಭವಾದ ಮಳೆ ಸುಮಾರು ಅರ್ಧಗಂಟೆ ಕಾಲ ನಿರಂತರವಾಗಿ ಸುರಿಯಿತು. ಇತಿಹಾಸ ಪ್ರಸಿದ್ಧ ಉಚ್ಚಂಗಿದುರ್ಗ ಗ್ರಾಮದಲ್ಲಿ ಮಳೆ ನೀರು ಗ್ರಾಮದಿಂದ ಹೊರ ಹೋಗುವ ವ್ಯವಸ್ಥೆ ಇಲ್ಲ. ಪರಿಣಾಮವಾಗಿ ನೀರು ಗ್ರಾಮವನ್ನು ಆವರಿಸಿ ಜನ ಹಾಗೂ ವಾಹನ ಸಂಚಾರಕ್ಕೆ ಅಡಚಣೆಯಾಯಿತು.

ಮಳೆಯಿಂದಾಗಿ ಹೊಲ, ಖಣಗಳಲ್ಲಿ ಕೊಯ್ದಿಟ್ಟ ಪೈರಿಗೆ ಹಾನಿಯಾಗಿದೆ. ಮನೆ ಅಂಗಳದಲ್ಲಿ ದನಕರುಗಳಿಗೆ ಸಂಗ್ರಹಿಸಿಟಿದ್ದ ಮೇವು ಒದ್ದೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.