ಚನ್ನಗಿರಿ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಬುಧವಾರ ಮಧ್ಯಾಹ್ನ ಬಿರುಸಿನ ಮಳೆಯಾಗಿದೆ. ಬಿಸಿಲಿನ ಬೇಗೆಗೆ ಬಸವಳಿದ ರೈತರು ಹಾಗೂ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಬುಧವಾರ ಮಧ್ಯಾಹ್ನ 3.30ರಿಂದ ಮುಕ್ಕಾಲು ಗಂಟೆ ಬಿರುಸಿನ ಮಳೆ ಸುರಿದ್ದರಿಂದ ಪಟ್ಟಣದ ಕೃಷಿ ಇಲಾಖೆ ಕಚೇರಿಯ ಮುಂದಿನ ಹೆದ್ದಾರಿಯಲ್ಲಿ ಕೆರೆಯೋಪಾದಿಯಲ್ಲಿ ಮಳೆಯ ನೀರು ಸಂಗ್ರಹವಾಗಿತ್ತು. ಏಕಾಏಕಿಯಾಗಿ ಸುರಿದ ಬಿರುಸಿನ ಮಳೆಯಿಂದಾಗಿ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಕಾರು ಹಾಗೂ ದ್ವಿಚಕ್ರ ವಾಹನಗಳು ಮಳೆಯ ನೀರಿನಲ್ಲಿ ಅರ್ಧ ಭಾಗದಷ್ಟು ಮುಳುಗಿದ್ದವು. ವಾಹನಗಳು ಹೆದ್ದಾರಿಯಲ್ಲಿ ಪ್ರಯಾಸದಿಂದ ಸಂಚರಿಸಿದವು.
ಇದೇ ಮೊದಲ ಬಾರಿಗೆ ಪಟ್ಟಣದಲ್ಲಿ 3 ಸೆಂಮೀ ನಷ್ಟು ಮಳೆಯಾಗಿದೆ. ಮಳೆ ಇಲ್ಲದೇ ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ ಹೋಗಿದ್ದ ರೈತರು ಈಗ ಬಿದ್ದಿರುವ ಮಳೆಯಿಂದಾಗಿ ನೆಮ್ಮದಿಯಿಂದ ಇರುವಂತಾಗಿದೆ.
ಗರಗ, ಗುಳ್ಳೆಹಳ್ಳಿ, ನಾರಶೆಟ್ಟಿಹಳ್ಳಿ, ಬೆಂಕಿಕೆರೆ, ಹೆಬ್ಬಳಗೆರೆ, ಮುದ್ದೇನಹಳ್ಳಿ, ಬುಸ್ಸೇನಹಳ್ಳಿ, ಆಗರಬನ್ನಿಹಟ್ಟಿ ಮುಂತಾದ ಗ್ರಾಮಗಳಲ್ಲಿ ಬಿರುಸಿನ ಮಳೆಯಾಗಿದೆ.
ಸುಗಮ ವ್ಯವಸ್ಥೆಗೆ ಆಗ್ರಹ:
ಪ್ರತಿ ಬಾರಿ ಬಿರುಸಿನ ಮಳೆ ಬಿದ್ದರೆ ಸಾಕು ಕೃಷಿ ಇಲಾಖೆಯ ಕಚೇರಿಯ ಮುಂದೆ ಇರುವ ಹೆದ್ದಾರಿಯಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯ ನೀರು ನಿಂತು ಸುಗಮ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಪ್ರತಿ ಬಾರಿಯೂ ಕೂಡಾ ಪುರಸಭೆ ಹಾಗೂ ಹೆದ್ದಾರಿ ಪ್ರಾಧಿಕಾರದವರಿಗೆ ಈ ಬಗ್ಗೆ ಮನವಿ ಮಾಡಿಕೊಂಡರೂ ಕೂಡಾ ಮಳೆಯ ನೀರು ಸುಗಮವಾಗಿ ಹರಿದು ಹೋಗುವಂತಹ ವ್ಯವಸ್ಥೆಯನ್ನು ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಮುಂದಿನ ದಿನಗಳಲ್ಲಿಯಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೃಷಿ ಇಲಾಖೆ ಕಚೇರಿಯ ಮುಂದಿನ ಹೆದ್ದಾರಿಯಲ್ಲಿ ಮಳೆಯ ನೀರು ಸುಗಮವಾಗಿ ಹರಿದು ಚರಂಡಿ ಸೇರುವಂತೆ ಮಾಡಬೇಕು ಎಂದು ಹಿರೇಉಡ ಗ್ರಾಮದ ಉಮೇಶ್ ಒತ್ತಾಯಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.