ADVERTISEMENT

ಚಿಕ್ಕಜಾಜೂರು: ರಾಮನವಮಿ ಪ್ರಯುಕ್ತ ಆಂಜನೇಯಸ್ವಾಮಿ ಜಾತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 3:00 IST
Last Updated 11 ಏಪ್ರಿಲ್ 2019, 3:00 IST
ಚಿಕ್ಕಜಾಜೂರಿನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಆಂಜನೇಯಸ್ವಾಮಿ ಹಾಗೂ ಲಕ್ಷ್ಮೀ ನರಸಿಂಹಸ್ವಾಮಿಗೆ ಮೊದಲ ಮಧುವಣಿಗ ಶಾಸ್ತ್ರವನ್ನು ನಡೆಸಲಾಯಿತು.
ಚಿಕ್ಕಜಾಜೂರಿನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಆಂಜನೇಯಸ್ವಾಮಿ ಹಾಗೂ ಲಕ್ಷ್ಮೀ ನರಸಿಂಹಸ್ವಾಮಿಗೆ ಮೊದಲ ಮಧುವಣಿಗ ಶಾಸ್ತ್ರವನ್ನು ನಡೆಸಲಾಯಿತು.   

ಚಿಕ್ಕಜಾಜೂರು: ರಾಮನವಮಿ ಅಂಗವಾಗಿ ಮಾ. 14 ರಂದು ನಡೆಯುವ ಆಂಜನೇಯಸ್ವಾಮಿ ರಥೋತ್ಸವದ ಅಂಗವಾಗಿ ಧಾರ್ಮಿಕ ವಿಧಿ ವಿಧಾನಗಳಂತೆ ಗ್ರಾಮ ದೇವರು ಆಂಜನೇಯಸ್ವಾಮಿ ಹಾಗೂ ಶೃಂಗೇರಿ ಹನುಮನಹಳ್ಳಿ ಲಕ್ಷ್ಮೀ ನರಸಿಂಹಸ್ವಾಮಿ ಮತ್ತು ಕೋಟೆಹಾಳ್‌ ಆಂಜನೇಯಸ್ವಾಮಿ ದೇವರಿಗೆ ಮಂಗಳವಾರ ರಾತ್ರಿ ಗೌಡರ ವಂಶಸ್ಥರಿಂದ ಶಾಸ್ತ್ರೋಕ್ತವಾಗಿ ಕಂಕಣಧಾರಣೆ ಹಾಗೂ ಮೊದಲ ಮಧುವಣಿಗ ಶಾಸ್ತ್ರವನ್ನು ನಡೆಸಿ, ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಇದಕ್ಕೂ ಮುನ್ನ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ವಿವಿಧ ವಾದ್ಯ ಗೋಷ್ಠಿಗಳೊಂದಿಗೆ ಗ್ರಾಮದ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮದ ಪ್ರತಿಯೊಂದು ಮನೆಯ ಮುಂದೆ ಮಹಿಳೆಯರು ಹಾಗೂ ಮಕ್ಕಳು ಉತ್ಸವ ಮೂರ್ತಿಗಳಿಗೆ ತುಪ್ಪದ ಆರತಿ ಬೆಳಗಿ ಭಕ್ತಿ ಸಮರ್ಪಿಸಿದರು.

ಏ. 10 ರಂದು ಎರಡನೇ ದಿನದ ಮಧುವಣಿಗ ಶಾಸ್ತ್ರದ ಹಸೆಯನ್ನು ಶಾನುಭೋಗರ ವಂಶಸ್ಥರಿಂದ ನಡೆಸಿ ನವಿಲು ಉತ್ಸವವನ್ನು ನಡೆಸಲಾಯಿತು, ಏ. 11ರಂದು ಸಂಜೆ ಸಾರಥಿ ವಂಶಸ್ಥರಿಂದ ಮೂರನೇ ಹಸೆ ಶಾಸ್ತ್ರ ಸೇವೆ ಹಾಗೂ ಸಿಂಹೋತ್ಸವ, ಏ. 12 ರಂದು ಸಂಜೆ ಬಾಣಗೆರೆ ವಂಶಸ್ಥರಿಂದ ನಾಲ್ಕನೇ ಹಸೆ ಶಾಸ್ತ್ರ ಸೇವೆ ಹಾಗೂ ಇಂದ್ರಜಿತ್‌ ಉತ್ಸವ ಮತ್ತು ಮಾ. 13 ರಾಮನವಮಿ ಪ್ರಯುಕ್ತ ಬೆಳಿಗ್ಗೆ ದೇವಸ್ಥಾನದ ಅರ್ಚಕರಿಂದ ಪವನ ಹೋಮವನ್ನು ನಡೆಸಲಾಗುವುದು. ಸಂಜೆ ಕಾಂಗ್ರೆಸ್‌ ಸಿದ್ದಪ್ಪ ವಂಶಸ್ಥರಿಂದ ಕೊನೆಯ ಹಸೆ ಸೇವೆ ಹಾಗೂ ಹೂವಿನ ಪಲ್ಲಕ್ಕಿ ಉತ್ಸವವನ್ನು ನಡೆಸಲಾಗುವುದು. ಇದೇ ದಿನ ಸಂಜೆ ಆಂಜನೇಯಸ್ವಾಮಿ ಹಾಗೂ ಲಕ್ಷ್ಮೀ ನರಸಿಂಹಸ್ವಾಮಿಗಳ ಆನೆ ಉತ್ಸವ ಜರುಗಲಿದೆ.

ADVERTISEMENT

ರಥೋತ್ಸವ: ಏ.14 ರಂದು ಮುಂಜಾನೆ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಮಧ್ಯಾಹ್ನ ಮುಳ್ಳುಪಲ್ಲಕ್ಕಿ ಹಾಗೂ ಎದುರುಗತ್ತಿ ಪವಾಡಗಳು ನಡೆಯಲಿವೆ. ಏ. 15 ರಂದು ಓಕಳಿಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರಬೀಳಲಿದೆ ಎಂದು ಗುಡೆಗೌಡ ಚಂದ್ರಪ್ಪ ತಿಳಿಸಿದರು. ಪ್ರಧಾನ ಅರ್ಚಕ ಸಂಪತ್‌ ಕುಮಾರ್‌, ಸೀತಾರಾಮ್, ಗೋಪಿ ಇದ್ದರು.

ವಿಶೇಷ ಸೂಚನೆ: ಏ.14 ರಂದು ಭಾನುವಾರ ಮಧ್ಯಾಹ್ನ ನಡೆಯುವ ಮುಳ್ಳುಪಲ್ಲಕ್ಕಿ ಹಾಗೂ ಎದುರುಗತ್ತಿ ಪವಾಡಗಳ ನಂತರ ದೇವಸ್ಥಾನದ ಆವರಣದಲ್ಲಿ ಗ್ರಾಮದ ಕನ್ನಡ ಯುವ ಸಂಘದ ವತಿಯಿಂದ ಪ್ರತಿ ವರ್ಷದಂತೆ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.