ADVERTISEMENT

ರಂಗ ಕಲೆ ಮಕ್ಕಳಿಗೂ ತಲುಪಿಸಿ: ಡಾ. ಪಂಚಾಕ್ಷರಪ್ಪ

ರಂಗ ಗೀತೆಗಳ ಗಾಯನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 5 ಮೇ 2019, 12:52 IST
Last Updated 5 ಮೇ 2019, 12:52 IST
ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಬಿಂಬ ಸಾಂಸ್ಕೃತಿಕ ವೇದಿಕೆ’ ಹಾಗೂ ರಂಗ ಗೀತೆಗಳ ಗಾಯನ ಸಮಾರಂಭವನ್ನು ಕಂಜಿರಾ ಬಡಿದು ಹಿರಿಯ ವೈದ್ಯ ಡಾ. ಪಂಚಾಕ್ಷರಪ್ಪ ಉದ್ಘಾಟಿಸಿದರು.
ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಬಿಂಬ ಸಾಂಸ್ಕೃತಿಕ ವೇದಿಕೆ’ ಹಾಗೂ ರಂಗ ಗೀತೆಗಳ ಗಾಯನ ಸಮಾರಂಭವನ್ನು ಕಂಜಿರಾ ಬಡಿದು ಹಿರಿಯ ವೈದ್ಯ ಡಾ. ಪಂಚಾಕ್ಷರಪ್ಪ ಉದ್ಘಾಟಿಸಿದರು.   

ದಾವಣಗೆರೆ: ಜನಪದ ಹಾಗೂ ರಂಗ ಕಲೆಗಳನ್ನು ದೊಡ್ಡವರಿಗೆ ಮಾತ್ರ ಸೀಮಿತಗೊಳಿಸದೆ ಮಕ್ಕಳಿಗೂ ತಲುಪಿಸಬೇಕು ಎಂದು ಹಿರಿಯ ವೈದ್ಯ ಡಾ. ಪಂಚಾಕ್ಷರಪ್ಪ ಸಲಹೆ ನೀಡಿದರು.

ನಗರದ ರೋಟರಿ ಬಾಲ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಬಿಂಬ ಸಾಂಸ್ಕೃತಿಕ ವೇದಿಕೆ’ ಉದ್ಘಾಟನೆ ಹಾಗೂ ರಂಗ ಗೀತೆಗಳ ಗಾಯನ ಸಮಾರಂಭದಲ್ಲಿ ಅವರು ಮಾತನಾಡಿದರು.

ತತ್ವಪದಳು, ವಚನ ಹಾಗೂ ದಾಸರ ಪದಗಳನ್ನು ಹಾಡುವ ಹಳ್ಳಿ ಕಲಾವಿದರೂ ಅಸಲಿ ಕಲಾವಿದರೇ ಆಗಿದ್ದಾರೆ. ಇವರು ತಮ್ಮ ಮಕ್ಕಳಲ್ಲೂ ನಾಟದ ಬಗ್ಗೆ ಅಭಿರುಚಿ ಬೆಳೆಸುವ ಕೆಲಸ ಮಾಡಬೇಕು. ಇಂತಹ ರಂಗಭೂಮಿ ಕಾರ್ಯಕ್ರಮಗಳಿಗೆ ಕರೆದುಕೊಂಡು ಬರಬೇಕು ಎಂದು ಸಲಹೆ ನೀಡಿದರು.

ADVERTISEMENT

ನಾಟಕಗಳು ಮನುಷ್ಯ ನೈಜ ಸ್ಥಿತಿಯನ್ನು ಬಿಂಬಿಸುತ್ತವೆ. ಸಿನಿಮಾಗಳು ವೈಭವೀಕರಿಸಿ ತೋರಿಸುತ್ತವೆ. ನಾಟಕಗಳಿಂದಲೇ ಸಿನಿಮಾ ಹುಟ್ಟಿದೆ ಎಂಬುದನ್ನು ಮರೆಯಬಾದರು. ಆದರೆ, ರಂಗ ಗೀತೆಗಳ ಗಾಯನ, ರಂಗ ಕಲೆ ಇಂದು ನಶಿಸುವ ಸ್ಥಿತಿಗೆ ಬಂದು ತಲುಪಿದೆ. ಕಲಾವಿದರು ಸುಶಿಕ್ಷಿತರಾಗದಿದ್ದರೂ ಅವರಲ್ಲಿ ಹೃದಯ ಶ್ರೀಮಂತಿಕೆಗೇನೂ ಕಡಿಮೆ ಇಲ್ಲ. ಕಲಾವಿದರು ತಮ್ಮ ಹಂತದಲ್ಲೇ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

‘ಅವಿಭಕ್ತ ಕುಟುಂಬಗಳು ಕಡಿಮೆಯಾಗಿ ವಿಭಕ್ತ ಕಟುಂಬಗಳಾಗುತ್ತಿರುವುದರಿಂದ ಶಾಂತಿ-ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಮಕ್ಕಳು ಸಹ ಪಾಲಕರನ್ನು ವೃದ್ಧಾಶ್ರಮಗಳಿಗೆ ಕಳುಹಿಸುತ್ತಿದ್ದಾರೆ. ಪಾಲಕರನ್ನು ಗೌರವಿಸುವ ಬಗ್ಗೆ ಮಕ್ಕಳಿಗೆ ಸೂಕ್ತ ಸಂಸ್ಕಾರ ನೀಡುವ ಕೆಲಸ ಆಗಬೇಕಾಗಿದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕಲಾವಿದ ಡಿ. ಶಿವರುದ್ರಪ್ಪ, ‘ಸಿನಿಮಾಗಳ ಅಬ್ಬರದಿಂದಾಗಿ ರಂಗ ನಟನೆ ನಶಿಸುತ್ತಿದೆ. ಪ್ರತಿ ತಾಲ್ಲೂಕಿನಲ್ಲೂ ರಂಗ ಚಟುವಟಿಕೆ ನಿರಂತರವಾಗಿ ನಡೆದಾಗ ಮಾತ್ರ ರಂಗಗೀತೆ ಉಳಿಯಲು ಸಾಧ್ಯ. ರಂಗ ಸಂಸ್ಥೆಗಳು ರಂಗನಟನೆ, ಗೀತಗಾಯನವನ್ನು ಪ್ರೋತ್ಸಾಹಿಸಬೇಕು’ ಎಂದು ಹೇಳಿದರು.

ಹಿರಿಯ ರಂಗ ಕಲಾವಿದ ಕೆ.ವಿ. ಷಣ್ಮುಖಪ್ಪ, ‘ಹಳ್ಳಿಗಳಲ್ಲಿ ಇಂದು ಕಲೆ ಉಳಿದಿದೆ. ನಗರ ಪ್ರದೇಶಗಳಲ್ಲಿ ಹಣ ಗಳಿಕೆಯೇ ಜೀವನದ ಧ್ಯೇಯವಾಗಿದೆ. ಮೊದಲು ರಾತ್ರಿಯಿಂದ ಬೆಳಿಗ್ಗೆವರೆಗೂ ಬಯಲಾಟ ನಡೆಯುತ್ತಿತ್ತು. ಕುಳಿತು ನೋಡುವವರ ಸೊಂಟವೂ ಗಟ್ಟಿಯಾಗಿರುತ್ತಿದ್ದವು. ಇಂದು ಹಾಡುವವರೂ ಒಂದು ಗಂಟೆಗೆ ಮಾತ್ರ ಸೀಮಿತರಾಗಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಹಲವು ಸಾಧಕರನ್ನು ಸನ್ಮಾನಿಸಲಾಯಿತು. ಕಲಾವಿದರು ರಂಗ ಗೀತೆಗಳನ್ನು ಪ್ರಸ್ತುತಪಡಿಸಿದರು. ಬಿಂಬ ವೇದಿಕೆ ಅಧ್ಯಕ್ಷ ಟಿ. ನವೀನ್‌ಕುಮಾರ್‌, ಕಾರ್ಯದರ್ಶಿ ಅಂಜನಮೂರ್ತಿ, ರಂಗ ನಿರ್ದೇಶಕ ಮಂಜುನಾಥ ಹೊಳೆಸಿರಿಗೆರೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.