ADVERTISEMENT

ದಾವಣಗೆರೆ | ಕೊರೊನಾ ಇಳಿಕೆ, ಮೀನುಗಾರಿಕೆ ಚೇತರಿಕೆ

ಮೂರು ತಿಂಗಳು ಮೀನುಮರಿ ಬಿಡಿ, ಆರು ತಿಂಗಳು ಬೆಳೆಯುತ್ತದೆ ನೋಡಿ

ಬಾಲಕೃಷ್ಣ ಪಿ.ಎಚ್‌
Published 23 ನವೆಂಬರ್ 2020, 19:30 IST
Last Updated 23 ನವೆಂಬರ್ 2020, 19:30 IST
ದಾವಣಗೆರೆ ಜಿಲ್ಲೆಯ ದೇವರಬೆಳಕೆರೆಯ ಡ್ಯಾಮ್‌ ನೀರಿನಲ್ಲಿ ಮೀನುಗಾರರು ಮೀನು ಹಿಡಿಯುತ್ತಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆ ಜಿಲ್ಲೆಯ ದೇವರಬೆಳಕೆರೆಯ ಡ್ಯಾಮ್‌ ನೀರಿನಲ್ಲಿ ಮೀನುಗಾರರು ಮೀನು ಹಿಡಿಯುತ್ತಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಕೊರೊನಾ ಒಮ್ಮೆಲೇ ಹೆಚ್ಚಾದಾಗ ಎಲ್ಲ ವಹಿವಾಟುಗಳು ಸ್ಥಗಿತಗೊಂಡಂತೆಯೇ ಮೀನುಗಾರಿಕೆ ಕೂಡ ನಿಂತಿತ್ತು. ಅಧಿಕೃತವಾಗಿ ನಿಲ್ಲಿಸಲು ಆದೇಶ ಇಲ್ಲದೇ ಇದ್ದರೂ ಮೀನು ಒಯ್ಯಲು ಜನ ಬರುವುದೇ ನಿಂತು ಹೋಗಿ ಬೇಡಿಕೆ ಇಲ್ಲದಂತಾಗಿತ್ತು. ಕೊರೊನಾ ಸೋಂಕು ಕಡಿಮೆಯಾಗುತ್ತಿದ್ದಂತೆ ಮೀನುಗಾರಿಕೆ ಮತ್ತೆ ಕ್ರಿಯಾಶೀಲವಾಗಿದೆ.

ಕೊಬ್ಬು ಇಲ್ಲದ, ರಾಸಾಯನಿಕ ಬೆರಕೆಗೊಳ್ಳದ, ಪೌಷ್ಟಿಕ ಆಹಾರ ಆಗಿರುವ ಮೀನು ಇತರ ಮಾಂಸಾಹಾರಗಳಿಗಿಂತ ಆರೋಗ್ಯಕ್ಕೆ ಒಳ್ಳೆಯದು. ಜೀರ್ಣ ಕೂಡ ಬೇಗ ಆಗುತ್ತದೆ. ಆ ಕಾರಣದಿಂದಾಗಿ ಮೀನಿಗೆ ಬೇಡಿಕೆ ಹೆಚ್ಚು.

ಕಾಟ್ಲಾ, ರೋಹು, ಮೃಗಾಲ್‌, ಗೌರಿ, ಗ್ರಾಸ್‌ಕಾರ್ಪ್, ಜಿಲೇಬಿ ಮುಂತಾದ ಮೀನುಗಳನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಒಳನಾಡು ಕೃಷಿ ಪ್ರೋತ್ಸಾಹ ಯೋಜನೆಯಡಿ ಮೀನು ಮರಿಗಳನ್ನು ಮೀನುಗಾರಿಕಾ ಇಲಾಖೆಯೇ ನೀಡುತ್ತಿದೆ.

ADVERTISEMENT

ಕೊಂಡಜ್ಜಿ, ಹೊನ್ನಾಳಿ ಮತ್ತು ಜಗಳೂರಿನಲ್ಲಿ ಮೀನು ಮರಿ ಪಾಲನಾ ಕೇಂದ್ರಗಳು ಇವೆ. ಇಲ್ಲಿಗೆ ಶಿವಮೊಗ್ಗ ಮೀನುಗಾರಿಕಾ ಕೇಂದ್ರದಿಂದ ಮೂರು ದಿನಗಳ ಮೀನುಮರಿಗಳನ್ನು ತರಲಾಗುತ್ತದೆ. ಈ ಪಾಲನಾ ಕೇಂದ್ರಗಳಲ್ಲಿ 45 ದಿನಗಳ ಕಾಲ ಪೋಷಣೆ ಮಾಡಲಾಗುತ್ತದೆ. ಆರೇಳು ಸೆಂಟಿಮೀಟರ್‌ನಷ್ಟು ದೊಡ್ಡದಾದ ಮೇಲೆ ಅವುಗಳನ್ನು ರೈತರಿಗೆ ನೀಡಲಾಗುತ್ತದೆ.

‘40 ಹೆಕ್ಟೇರ್‌ಗಿಂತ ಹೆಚ್ಚು ವಿಸ್ತೀರ್ಣ ಹೊಂದಿರುವ ಕೆರೆ ಅಥವಾ ಜಲಸಂಪನ್ಮೂಲಗಳು ಮೀನುಗಾರಿಕೆ ಇಲಾಖೆಯ ಅಡಿಯಲ್ಲಿ ಬರುತ್ತವೆ. ಜಿಲ್ಲೆಯಲ್ಲಿ ಅಂಥ 94 ಕೆರೆಗಳಿವೆ. 40 ಹೆಕ್ಟೇರ್‌ಗಿಂತ ಕಡಿಮೆ ವಿಸ್ತೀರ್ಣ ಹೊಂದಿರುವ ಜಲಸಂಪನ್ಮೂಲಗಳು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಡಿಗೆ ಬರುತ್ತವೆ. ಅಂಥ 173 ಕೆರೆಗಳು ಜಿಲ್ಲೆಯಲ್ಲಿವೆ’ ಎಂದು ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಗಣೇಶ್‌ ಆರ್‌.ಮಾಹಿತಿ ನೀಡಿದರು.

‘ಒಳನಾಡು ಮೀನು ಕೃಷಿ ಪ್ರೋತ್ಸಾಹ ಯೋಜನೆಯಡಿ ಮೀನು ಸಹಕಾರ ಸಂಘಗಳಿಗೆ ಮೀನು ಮರಿ ಒದಗಿಸುತ್ತೇವೆ. ಮೀನುಗಾರಿಕೆ ಅಡಿಯಲ್ಲಿ ಬರುವ ಕೆರೆಗಳನ್ನು ನೋಂದಾಯಿತ ಸಹಕಾರ ಸಂಘಗಳು ಟೆಂಡರ್‌ ಮೂಲಕ ಪಡೆಯಬೇಕು. ಒಂದು ಸಂಘವು 300 ಹೆಕ್ಟೇರ್‌ ಮೀರದಂತೆ ಮೂರು ಕೆರೆಗಳನ್ನು ಟೆಂಡರ್‌ನಲ್ಲಿ ಪಡೆಯಲು ಅವಕಾಶ ಇದೆ. ಜಿಲ್ಲೆಯಲ್ಲಿ 17 ಮತ್ಸ್ಯ ಸಹಕಾರ ಸಂಘಗಳಿವೆ’ ಎಂದು ತಿಳಿಸಿದರು.

ಒಂದು ಹೆಕ್ಟೇರ್‌ಗೆ 4,000 ಮರಿಗಳಂತೆ ಬಿಡಲಾಗುತ್ತದೆ. ಅದರಲ್ಲಿ ಹಕ್ಕಿ, ಹಾವು ಮುಂತಾದವುಗಳಿಗೆ ಶೇ 30ರಷ್ಟು ಮೀನುಮರಿಗಳು ಆಹಾರವಾಗುತ್ತವೆ. ಶೇ 70ರಷ್ಟು ಮೀನುಮರಿಗಳು ಬೆಳೆಯುತ್ತವೆ. ಮಳೆ ಕಡಿಮೆಯಾದ ವರ್ಷ ಮೀನುಗಾರಿಕೆ ಕೂಡ ಕಡಿಮೆಯಾಗುತ್ತದೆ. ಈ ವರ್ಷ ಮಳೆ ಚೆನ್ನಾಗಿ ಆಗಿರುವುದರಿಂದ ಶೇ 7ರಷ್ಟು ಹೆಚ್ಚು ಆದಾಯ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ಅವರು.

‘ಮೀನುಗಾರಿಕೆಯಿಂದ ಹಲವರಿಗೆ ಉದ್ಯೋಗ ಸಿಗುತ್ತದೆ. ನಮ್ಮ ಬಲ್ಲೂರು ಮೀನುಗಾರಿಕಾ ಸಹಕಾರ ಸಂಘವು ಶಿರಗನಹಳ್ಳಿ ಕೆರೆಯನ್ನು ಗುತ್ತಿಗೆ ಪಡೆದಿದೆ. ಅದನ್ನು ಮೀನು ಹಿಡಿಯುವವರಿಗೆ ₹ 6 ಸಾವಿರ ಕಟ್ಟಿಸಿಕೊಂಡು ಕೊಡಲಾಗುತ್ತದೆ. ಅವರು ಮೀನು ಹಿಡಿದಾಗ ಸುತ್ತಲಿನ ಬೇರೆ ಬೇರೆ ಕಡೆಯಿಂದ ಮೀನು ಮಾರಾಟಗಾರರು ಬಂದು ಒಯ್ಯುತ್ತಾರೆ. ಅವರು ಊರಿಗೆ ತೆರಳಿದ ಮೇಲೆ ಅಲ್ಲಿ ಮತ್ತೆ ಸಣ್ಣ ಮೀನು ಮಾರಾಟಗಾರರಿಗೆ ಆ ಮೀನುಗಳನ್ನು ನೀಡುತ್ತಾರೆ. ಅವರು ಸಣ್ಣ ಮಾರುಕಟ್ಟೆ ಇಲ್ಲವೇ ಮನೆಮನೆಗಳಿಗೆ ಮಾರಾಟ ಮಾಡುತ್ತಾ ಹೋಗುತ್ತಾರೆ. ಇದೊಂದು ಉದ್ದದ ಸರಪಳಿ’ ಎಂಬುದು ಬಲ್ಲೂರು ಮೀನುಗಾರಿಕಾ ಸಹಕಾರ ಸಂಘದ ಹನುಮಂತಪ್ಪ ಮತ್ತು ಪ್ರಭು ಅವರ ಅನಿಸಿಕೆ.

ಮೀನು ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಬಳಕೆಯಾಗುತ್ತದೆ. ಕೋಳಿ, ಕುರಿ ಸಾಕುವಾಗ ಅವುಗಳಿಗೆ ಆಹಾರ ನೀಡಬೇಕಾಗುತ್ತದೆ. ಮೀನುಗಳಿಗೆ ಆಹಾರ ನೀಡಬೇಕಿಲ್ಲ. ಅವುಗಳೇ ಕ್ರಿಮಿಕೀಟಗಳನ್ನು, ಜಲಜರಗಳನ್ನು ತಿಂದು ಬದುಕುತ್ತವೆ. ಕೆಲವು ಕಡೆ ಕೃತಕ ಆಹಾರ ಎಂದು ನೀಡಲಾಗುತ್ತದೆ. ಅದು ಕೂಡ ಕೆಮಿಕಲ್‌ ಆಹಾರಗಳಲ್ಲ. ಮೆಕ್ಕೆಜೋಳ, ಅಕ್ಕಿಯ ನುಚ್ಚು, ತೌಡು ಆಗಿರುತ್ತದೆ ಎಂಬುದು ಅವರ ವಿವರಣೆ.

ಮೀನು ಮರಿ ಪಾಲನಾ ಕೇಂದ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಶಶಿಕುಮಾರ್‌ (ಹೊನ್ನಾಳಿ), ಆದರ್ಶ (ಕೊಂಡಜ್ಜಿ), ಮಂಜುನಾಥ (ಜಗಳೂರು) ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಪ್ರತಿ ತಾಲ್ಲೂಕಿನಲ್ಲಿ ಮೀನುಗಾರಿಕಾ ಸಹಾಯಕ ನಿರ್ದೇಶಕರು ಇರುತ್ತಾರೆ. ಹಾಗಾಗಿ ಮೀನು ಬೇಕಾದವರು ಅವರನ್ನು ಸಂಪರ್ಕಿಸಬಹುದು. ಸ್ವಂತಕ್ಕೆ ತಮ್ಮ ಖಾಸಗಿ ಕೆರೆ, ಹೊಂಡಗಳಲ್ಲಿ ಮೀನು ಸಾಕುವವರಿಗೂ ಮತ್ಸ್ಯ ಕೃಷಿ ಆಶಾಕಿರಣ ಯೋಜನೆಯಡಿ ಪ್ರೋತ್ಸಾಹ ನೀಡಲಾಗುತ್ತದೆ. ಒಂದು ಮೀನುಮರಿಗೆ ₹ 1.5 ಬೆಲೆ. ಅದರಲ್ಲಿ ಶೇ 50 ಸರ್ಕಾರದಿಂದ ಸಬ್ಸಿಡಿ ಸಿಗಲಿದೆ. ಕೃತಕ ಆಹಾರ ನೀಡಲು ಬಯಸುವವರಿಗೆ ಒಂದು ಕೆ.ಜಿ. ಆಹಾರಕ್ಕೆ
₹ 33 ಇದೆ. ಅದರಲ್ಲಿ ₹ 12.50 ಸರ್ಕಾರ ಭರಿಸುತ್ತದೆ ಎಂಬುದು ಮೀನುಗಾರಿಕಾ ಇಲಾಖೆಯ ವಿವರಣೆ.

ಕಲುಷಿತ ನೀರಿನಿಂದ ಸಮಸ್ಯೆ

ಕುಕ್ಕವಾಡದ ಹೈಲೈಟ್‌ ಫ್ಯಾಕ್ಟರಿಯ ಕಲುಷಿತ ನೀರನ್ನು ದೇವರಬೆಳಕೆರೆಗೆ ಬಿಡುತ್ತಿದ್ದಾರೆ. ಇದರಿಂದ ಮೀನುಗಳಿಗೆ ತೊಂದರೆಯಾಗಿದೆ. ಬಿಟ್ಟ ಮರಿಗಳಲ್ಲಿ
ಬದುಕುವ ಮೀನುಗಳ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೇ ಮೀನುಗಳನ್ನು ಹಿಡಿದ ಮೇಲೆ ರಾಸಾಯನಿಕ ಮಿಶ್ರಿತ ನೀರನ್ನು ಕುಡಿದ ಮೀನುಗಳು ಬೇಗ ಸಾಯುತ್ತವೆ. ಹಾಗಾಗಿ ಅವುಗಳನ್ನು ಶೀಘ್ರ ವಿಲೇವಾರಿ ಮಾಡದೇ ಇದ್ದರೆ ಬೇಗ ಹಾಳಾಗುತ್ತದೆ ಎಂಬುದು ದೇವರಬೆಳಕೆರೆಯ ಚಂದ್ರು, ಯೋಗೇಶ್‌ ಮುಂತಾದವರ ಅನುಭವವಾಗಿದೆ.

ಈ ಫ್ಯಾಕ್ಟರಿ ನೀರಿನಿಂದ ಮತ್ತಷ್ಟು ತೊಂದರೆಯಾಗಿದೆ. ವರ್ಷಕ್ಕೆ ಹದಿನೈದು–ಇಪ್ಪತ್ತು ದಿನ ಮಾತ್ರ ಆದಾಯ ತರುವ ಮೀನುಗಾರಿಕೆ ಈ ಬಾರಿ ಕೈ ಹಿಡಿದಿಲ್ಲ ಎನ್ನುತ್ತಾರೆ ಅವರು.

‘ಮೀನು ಹಿಡಿಯಲು ಅನುಮತಿಗಾಗಿ ₹ 6,000 ಕಟ್ಟಿರುತ್ತೇವೆ. ಬಲೆ, ತೆಪ್ಪ, ಹಿಡಿದ ದಿನ ವೇತನ ಎಲ್ಲ ಸೇರಿದರೆ ಎಲ್ಲ ಅಲ್ಲಿಂದಲ್ಲಿಗೆ ಸರಿಯಾಗಿದೆ. ಈ ಬಾರಿ ಲಾಭ ಸಿಕ್ಕಿಲ್ಲ’ ಎಂದು ಚಂದ್ರು ಬೇಸರಿಸಿದರು.

‘ಕೊರೊನಾದಿಂದ ಬಹಳ ತೊಂದರೆಯಾಯಿತು. ಸಂಘಗಳಿಂದ ಸಾಲ ಮಾಡಿದ್ದೆವು. ಅದನ್ನು ಕಟ್ಟಲು ಆಗುತ್ತಿಲ್ಲ. ಸಂಘದ ಅಧ್ಯಕ್ಷರಿಗೂ ಸಮಸ್ಯೆ ಹೇಳಿದ್ದೇವೆ. ಅವರೂ ಕ್ರಮ ಕೈಗೊಂಡಿಲ್ಲ’ ಎಂದು ಯೋಗೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

51 ಕೆರೆಗಳಲ್ಲಿ ಮೀನು ಮರಿ ಬಿತ್ತನೆ

ಜೂನ್‌ನಿಂದಲೇ ಮರಿಗಳು ತಯಾರಿದ್ದರೂ ಮಳೆ ಹೆಚ್ಚಿದ್ದಾಗ ಮೀನು ಮರಿ ಬಿಡುವುದಿಲ್ಲ. ಅವುಗಳು ನೀರಲ್ಲಿ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇರುವುದರಿಂದ ಮಳೆ ಸ್ವಲ್ಪ ಕಡಿಮೆಯಾದ ಬಳಿಕ ಬಿಡಲಾಗುತ್ತದೆ. ಈ ಬಾರಿ ಅಕ್ಬೋಬರ್‌ ವರೆಗೆ 51 ಕೆರೆಗಳಲ್ಲಿ ಮೀನು ಮರಿ ಬಿತ್ತನೆಯಾಗಿದೆ. ಮಳೆ ಚೆನ್ನಾಗಿ ಆಗಿರುವುದರಿಂದ ಒಳ್ಳೆಯ ಇಳುವರಿ ನಿರೀಕ್ಷಿಸಲಾಗಿದೆ. ಉಳಿದ ಕೆರೆಗಳಲ್ಲಿಯೂ ಮೀನು ಬಿತ್ತನೆ ಕಾರ್ಯ ನಡೆಯಲಿದೆ. ಕೆರೆಗಳಲ್ಲಿ ಮೀನು ಬಿತ್ತನೆ ಮಾಡಬೇಕಿದ್ದರೆ ಕನಿಷ್ಠ 6 ತಿಂಗಳು 3 ಅಡಿ ನೀರು ನಿಲ್ಲುವಂತಿರಬೇಕು. ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ ಒಣಗುವ ಕೆರೆಗಳಿಗೆ ಮೀನು ಬಿಟ್ಟರೆ ಪ್ರಯೋಜನವಿಲ್ಲ ಎನ್ನುತ್ತಾರೆ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಗಣೇಶ್‌ ಆರ್‌.

ಕಂದನಕೋವಿ ಕೆರೆ, ಆನಗೋಡು ಕೆರೆ, ಹೊನ್ನೂರು ಕೆರೆ, ಮಾಯಕೊಂಡ ಕೆರೆ, ಸಿದ್ಧನೂರು ಕೆರೆ, ಅಗಸನಕಟ್ಟೆ ಕೆರೆ, ಬೆವಳನೂರು ಕೆರೆ, ನಾಗನೂರು ಕೆರೆ, ಕುಂದವಾಡ ಕೆರೆ, ನಾಗರಕಟ್ಟೆ ಕೆರೆ, ಕಂದಗಲ್ಲುಕೆರೆ, ಹುಚ್ಚವ್ವನಹಳ್ಳಿ ಕೆರೆ, ಮಳಲ್ಕೆರೆ, ದಾಗಿನಕಟ್ಟೆ ಕೆರೆ, ಚರಡೋಣಿ ಹೊಸಕೆರೆ, ಹಿರೇಮಳಲಿ ಊರುಮುಂದಿನಕೆರೆ, ಹಿರೇಕೋಗಲೂರು ಕೆರೆ, ಬೆಳ್ಳಿಗನೋಡುಕೆರೆ, ಎನ್‌. ಗಾಣದಕಟ್ಟೆ ಕೆರೆ, ಕಂಸಾಗರ ಕೆರೆ, ಹಿರೆಕೆರೆ, ಮೆದಿಕೆರೆ, ಮುಳ್ಳುಕೆರೆ, ತಾವರೆಕೆರೆ, ಶಾಂತಿಸಾಗರ (ಸೂಳೆಕೆರೆ), ಕತ್ತಿಗೆ ಹೊಸಕೆರೆ, ಸವಳಂಗ ಊರಮುಂದಿನ ಕೆರೆ, ಎಚ್‌.ಗೋಪಗೊಂಡನಹಳ್ಳಿ ಕೆರೆ, ಚಿನ್ನಿಕಟ್ಟೆ ತಾವರೆಕೆರೆ, ಸೊರಟೂರು ದೊಡ್ಡಕೆರೆ, ಭೈರನಹಳ್ಳಿಕೆರೆ, ಚೀಲಾಪುರ ಹೊಸಕೆರೆ, ಹಿರೇಗೋಣಿಗೆರೆ ಹಿರೇಕೆರೆ, ಕೋಣತಲೆ ಹೊಸಕೆರೆ, ಕುಂದೂರು ದೊಡ್ಡಕೆರೆ, ಕೂಲಂಬಿ ದೊಡ್ಡಕೆರೆ, ತರಗನಹಳ್ಳಿ ಕೆರೆ, ಚೀಲೂರು ರಾಮನಕೆರೆ, ಗಡಿಮಾಕುಂಟೆ ಕೆರೆ, ಜಗಳೂರು ಕೆರೆ, ನಿಬಗೂರುಕೆರೆ, ಜಮ್ಮಾಪುರ ಕೆರೆ, ಕೊಂಡಜ್ಜಿಕೆರೆ, ಹೊಳೆಸಿರಿಗೆರೆ ಕೆರೆ, ಚನ್ನಿಕೋಡು ಚಂದಪ್ಪನಕೆರೆ ಮುಂತಾದ ಕೆರೆಗಳಿಗೆ ಈ ಬಾರಿ ಮೀನು ಮರಿ ಬಿಡಲಾಗಿದೆ ಎಂದು ಅವರು ತಿಳಿಸಿದರು.

ಕೆರೆಗಳ ಅಂಕಿ ಅಂಶ

ತಾಲ್ಲೂಕು; ಕೆರೆ

ದಾವಣಗೆರೆ; 23

ಹರಿಹರ; 5

ಹೊನ್ನಾಳಿ; 16

ಚನ್ನಗಿರಿ; 32

ಜಗಳೂರು; 18

ಒಟ್ಟು; 94

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.